ಗ್ರಾಹಕರು ಬ್ಯಾಂಕು ಖಾತೆಗಳೊಂದಿಗೆ ತಮ್ಮ ಆಧಾರ್ ಸಂಖ್ಯೆಯನ್ನು ಸಂಯೋಜಿಸುವುದು ಕಡ್ಡಾಯವೆಂದು ರಿಸರ್ವ್ ಬ್ಯಾಂಕ್ ಹೇಳಿದೆ..

ಮುಂಬೈ: ಗ್ರಾಹಕರು ಬ್ಯಾಂಕು ಖಾತೆಗಳೊಂದಿಗೆ ತಮ್ಮ ಆಧಾರ್ ಸಂಖ್ಯೆಯನ್ನು ಸಂಯೋಜಿಸುವುದು ಕಡ್ಡಾಯವೆಂದು ರಿಸರ್ವ್ ಬ್ಯಾಂಕ್ ಹೇಳಿದೆ.

ಕೆಲವು ದಿನಗಳಿಂದ ಆರ್’ಟಿಐ ಅರ್ಜಿಯನ್ನು ಉಲ್ಲೇಖಿಸಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಈ ಸ್ಪಷ್ಟನೆ ನೀಡಿದೆ.

ಬ್ಯಾಂಕು ಖಾತೆಗಳೊಂದಿಗೆ ಗ್ರಾಹಕರು ತಮ್ಮ ಆಧಾರ್ ಕಾರ್ಡನ್ನು ಸಂಯೋಜಿಸಬೇಕೆಂದು ರಿಸರ್ವ್ ಬ್ಯಾಂಕ್ ಯಾವುದೇ ಆದೇಶ ಹೊರಡಿಸಿಲ್ಲವೆಂದು ವರದಿಯಾಗಿತ್ತು. ಆದರೆ ಆ ಗೊಂದಲಗಳಿಗೆ ಪೂರ್ಣ ವಿರಾಮವಿಟ್ಟಿರುವ ಆರ್’ಬಿಐ, ಅಕ್ರಮ ಹಣ ವ್ಯವಹಾರವನ್ನು ತಡೆಯಲು ಖಾತೆಗಳೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದು ಕಡ್ಡಾಯವೆಂದು ಹೇಳಿದೆ.

ಈ ಬಗ್ಗೆ ಕಳೆದ ಜೂ.1 ರ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ. ಇಂತಹ ನಿಯಮಗಳಿಗೆ ಕಾನೂನಾತ್ಮಕ ಮಹತ್ವವಿದೆ, ಬೇರೆ ಸೂಚನೆಗಳಿಗೆ ಕಾಯದೇ ಬ್ಯಾಂಕುಗಳು ಅದನ್ನು ಪಾಲಿಸಲೇಬೇಕು ಎಂದು ರಿಸರ್ವ್ ಬ್ಯಾಂಕು ಹೇಳಿದೆ.

ಕಳೆದ ಜೂನ್’ನಲ್ಲಿ ಬ್ಯಾಂಕು ಖಾತೆಗಳಿಗೆ ಆಧಾರ್ ಲಿಂಕ್ ಮಾಡುವುದನ್ನು ಹಾಗೂ ₹50000 ಮೇಲ್ಪಟ್ಟ ಮೊತ್ತದ ವ್ಯವಹಾರ ನಡೆಸಲು ಆಧಾರ್ ಸಂಖ್ಯೆಯನ್ನು ನಮೂದಿಸುವುದು ಸರ್ಕಾರವು ಕಡ್ಡಾಯ ಮಾಡಿತ್ತು.

ಮುಂಬರುವ ಡಿಸೆಂಬರ್ 31ರೊಳಗೆ ಎಲ್ಲಾ ಬ್ಯಾಂಕು ಖಾತೆದಾರರು ತಮ್ಮ ಖಾತೆಗಳನ್ನು ಆಧಾರ್’ನೊಂದಿಗೆ ಲಿಂಕ್ ಮಾಡಲು ಸಮಯಾವಕಾಶವಿದೆ. ತಪ್ಪದ್ದಲ್ಲಿ. ಬ್ಯಾಂಕು ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗುವುದು ಎಂದು ಎಚ್ಚರಿಸಲಾಗಿದೆ.