Asianet Suvarna News Asianet Suvarna News

ಹೊಸತಾಗಿ ಲಿಂಗಾಯತ ಧರ್ಮ ರಚನೆ ಅಸಾಧ್ಯ: ನ್ಯಾಯವಾದಿ ಧನಂಜಯ್

ಜೈನ ಧರ್ಮಕ್ಕೆ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡುವ ಕುರಿತು 1927 ರಿಂದಲೇ ಅನೇಕ ತೀರ್ಪುಗಳಿದ್ದವು. ಹೀಗಾಗಿ ಅಲ್ಪಸಂಖ್ಯಾತ ಧರ್ಮ ಸ್ಥಾನಮಾನ ನೀಡಲಾಯಿತು. ಆದರೆ ಲಿಂಗಾಯತ ಧರ್ಮ ಒಂದು ಪ್ರತ್ಯೇಕ ಧರ್ಮ ಎಂದು ಪರಿಗಣಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸುಪ್ರಿಂಕೋರ್ಟ್ ನ್ಯಾಯವಾದಿ ಕೆ.ವಿ.ಧನಂಜಯ ಪ್ರತಿಪಾದಿಸಿದ್ದಾರೆ.

Lingayit Seperate Religion Status Impossible
ಬೆಂಗಳೂರು (ಜು.28): ಜೈನ ಧರ್ಮಕ್ಕೆ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡುವ ಕುರಿತು 1927 ರಿಂದಲೇ ಅನೇಕ ತೀರ್ಪುಗಳಿದ್ದವು. ಹೀಗಾಗಿ ಅಲ್ಪಸಂಖ್ಯಾತ ಧರ್ಮ ಸ್ಥಾನಮಾನ ನೀಡಲಾಯಿತು. ಆದರೆ ಲಿಂಗಾಯತ ಧರ್ಮ ಒಂದು ಪ್ರತ್ಯೇಕ ಧರ್ಮ ಎಂದು ಪರಿಗಣಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸುಪ್ರಿಂಕೋರ್ಟ್ ನ್ಯಾಯವಾದಿ ಕೆ.ವಿ.ಧನಂಜಯ ಪ್ರತಿಪಾದಿಸಿದ್ದಾರೆ. 
 
ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ನಡೆದಿರುವ ಚರ್ಚೆ ಹಿನ್ನೆಲೆಯಲ್ಲಿ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯಪೂರ್ವದಲ್ಲಿ ಯಾವ ಪ್ರತ್ಯೇಕ ಧರ್ಮ ಅಸ್ತಿತ್ವದಲ್ಲಿ ಇರಲಿಲ್ಲವೋ ಅದನ್ನು ಈಗ ಹೊಸ ಧರ್ಮ ಎಂದು ಗುರುತಿಸಲು ಅವಕಾಶ ಇಲ್ಲ. ಜೈನ ಮತ್ತು ಬೌದ್ಧ ಧರ್ಮಗಳನ್ನೇ ತೆಗೆದುಕೊಂಡರೆ, ಸ್ವಾತಂತ್ರ್ಯ ಪೂರ್ವದಿಂದಲೂ ಅವುಗಳ ಬಗ್ಗೆ ಭಾರಿ ಚರ್ಚೆ ನಡೆಯುತ್ತಿತ್ತು. ಇಸ್ಲಾಂ, ಕ್ರೈಸ್ತ, ಪಾರ್ಸಿ, ಸಿಖ್ ಧರ್ಮಗಳು ಅದಾಗಲೇ ಅಸ್ತಿತ್ವದಲ್ಲಿ ಇದ್ದವು. ಆ ಬಗ್ಗೆ ಸಂಶಯ ಇರಲಿಲ್ಲ. ಜೈನ ಧರ್ಮವನ್ನು ಪ್ರತ್ಯೇಕ ಧರ್ಮವೆಂದು ಪರಿಗಣಿಸಲು 1927 ರಿಂದಲೇ ಹಲವಾರು ತೀರ್ಪುಗಳಿವೆ. ಹೀಗಾಗಿ ಜೈನ ಧರ್ಮ ಮೊದಲೇ ಅಸ್ತಿತ್ವದಲ್ಲಿ ಇದ್ದುದರಿಂದ ಮಾನ್ಯ ಮಾಡಲಾಯಿತು ಎಂದು ಹೇಳಿದ್ದಾರೆ.
 
ಈಗಾಗಲೇ ಅಸ್ತಿತ್ವದಲ್ಲಿರುವ ಮತ್ತು ಸ್ವಾತಂತ್ರ್ಯಪೂರ್ವದಿಂದಲೂ ಅಸ್ತಿತ್ವದಲ್ಲಿರುವ ಧರ್ಮಗಳು ಒಂದು ವೇಳೆ ಜನಸಂಖ್ಯೆಯಲ್ಲಿ ಅಲ್ಪಸಂಖ್ಯಾತವಾಗಿದ್ದರೆ ಅವುಗಳನ್ನು ಅಲ್ಪಸಂಖ್ಯಾತ ಧರ್ಮವೆಂದು ಗುರುತಿಸಲು ಅವಕಾಶ ಇರಲಿಲ್ಲ. ಹಾಗಾಗಿಯೇ 1992 ರಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಕಾಯ್ದೆ ರಚಿಸಲಾಯಿತು. ಈ ಕಾಯ್ದೆಯಡಿ ಈಗಾಗಲೇ ಅಸ್ತಿತ್ವದಲ್ಲಿರುವ ಧರ್ಮಗಳನ್ನು ಅಲ್ಪಸಂಖ್ಯಾತ ಎಂದು ಕಾನೂನಾತ್ಮಕವಾಗಿ, ಸಂವಿಧಾನಾತ್ಮಕವಾಗಿ ಪರಿಗಣಿಸಬಹುದು. ಸಂವಿಧಾನದ ಆಶಯವನ್ನು ಪರಿಗಣಿಸಿದರೆ ಲಿಂಗಾಯತ ಧರ್ಮವನ್ನು ಪ್ರತ್ಯೇಕ ಧರ್ಮ ಎಂದು ಗುರುತಿಸಲು ಸಾಧ್ಯವಿಲ್ಲ. ಸ್ವತಂತ್ರಪೂರ್ವ ಕಾಲದಿಂದಲೂ ಸ್ವತಂತ್ರ ಧರ್ಮ ಎಂದು ಅದನ್ನು ಗುರುತಿಸಿಲ್ಲ ಎನ್ನುವುದಾದರೆ ನಂತರ ಪರಿಗಣಿಸಲು ಸಾಧ್ಯವಿಲ್ಲ. ಇದು ಸಂವಿಧಾನದ ಸಾರಾಂಶ ಮತ್ತು ಮೂಲಭೂತ ಅಂಶ. ಒಂದು ವೇಳೆ ಹೊಸ ಧರ್ಮ ಕೇಳಿದರೆ ಅದು ಆಭಾಸವಾಗುತ್ತದೆ. ಫಲಿತಾಂಶ ಏನೇ ಇದ್ದರೂ ಕೇಳುವುದೇ ಅಪ್ರಸ್ತುತ ಎಂದು ಪ್ರತಿಪಾದಿಸಿದರು. ಕರ್ನಾಟಕವೂ ಸೇರಿದಂತೆ ದೇಶದ ಹಲವಾರು ರಾಜ್ಯಗಳಲ್ಲಿ ಕ್ರೈಸ್ತ ಶಿಕ್ಷಣ ಸಂಸ್ಥೆಗಳಿಗೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳೆಂದು ಮಾನ್ಯತೆ ನೀಡುತ್ತಿಲ್ಲ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ಸ್ಥಾನಮಾನ ಇರುವುದರಿಂದ ಅಂತಹ ಅಲ್ಪಸಂಖ್ಯಾತ ಸಂಸ್ಥೆಗಳಿಗೆ ನೆರವು ಸಿಗಬೇಕೆಂಬ ಕಾರಣಕ್ಕೆ ಅಲ್ಪಸಂಖ್ಯಾತ ಕಾಯ್ದೆ ರಚಿಸಲಾಯಿತು. ಸರ್ಕಾರದ ಅನುದಾನ ಸೇರಿದಂತೆ ಹಲವಾರು ಸೌಲಭ್ಯ ಸಿಗಬೇಕೆಂಬ ಕಾರಣಕ್ಕೆ ಈ ಸ್ಥಾನಮಾನ ನೀಡಲಾಗಿದೆ. ಆದರೆ ಲಿಂಗಾಯತ ಸಮುದಾಯ ಹಿಂದೂ ಧರ್ಮದ ಭಾಗವೇ ಆಗಿದೆ. ವೈಚಾರಿಕತೆಗೆ ಬೇರೆ ಎಲ್ಲ ಧರ್ಮಗಳಿಗಿಂತ ಹಿಂದೂ ಧರ್ಮದಲ್ಲಿ ಹೆಚ್ಚು ಅವಕಾಶ ಇರುವುದರಿಂದ ಒಳಪಂಗಡಗಳಲ್ಲಿ ಈ ರೀತಿಯ ಕಚ್ಚಾಟಗಳು ಇದ್ದೇ ಇರುತ್ತವೆ. ಒಳ ಜಗಳಕ್ಕೆ ಪೋಷಣೆ ಕೊಟ್ಟರೆ ಪ್ರತ್ಯೇಕ ಧರ್ಮ ಬೇಕೆಂಬ ಬೇಡಿಕೆ ಹೆಚ್ಚಾಗುತ್ತದೆ. ಅದು ರಾಜಕೀಯ ಕಾರಣಕ್ಕೂ ಇರಬಹುದು ಎಂದು ತಿಳಿಸಿದರು.
 
ರಾಜ್ಯವನ್ನು ಮುನ್ನಡೆಸುವಂತಹ ಆಡಳಿತಗಾರರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂತಹ ವಿಚಾರಗಳಿಗೆ ಕುಮ್ಮಕ್ಕು ಕೊಟ್ಟರೆ ಅದು ಖಂಡಿತ ತಪ್ಪು. ಅವರಿಗೆ ಕನಿಷ್ಠ ಕಾಳಜಿ ಇಲ್ಲ ಎನಿಸುತ್ತದೆ. ಒಂದು ಜಾತಿ ಅಥವಾ ಪಂಗಡವನ್ನು ಈ ರೀತಿ ಒಡೆಯುವುದು ತಪ್ಪು. ಹಿಂದೂ ಧರ್ಮದ ಅವಿಭಾಜ್ಯ ಅಂಗ ಆಗಿರುವ, ಬೇರೆ ಯಾವ ಧರ್ಮದಲ್ಲೂ ಬೆರೆಯದ ಲಿಂಗಾಯತ ಸಮುದಾಯ ಅಲ್ಲಿಯೇ ಇರಬೇಕು ಎಂದು ಅಭಿಪ್ರಾಯಪಟ್ಟರು.
Latest Videos
Follow Us:
Download App:
  • android
  • ios