Asianet Suvarna News Asianet Suvarna News

ನಾಳೆ ಒಕ್ಕಲಿಗರು, ಕುರುಬರು ಪ್ರತ್ಯೇಕ ಧರ್ಮ ಕೇಳಬಹುದು ?

ಪೇಜಾವರ ಸ್ವಾಮೀಜಿಗಳಿಗೆ ತಿರುಗೇಟು ನೀಡಿರುವ ಬಸವ ಕಲ್ಯಾಣದ ಬೆಲ್ದಾಳೆ ಶ್ರೀ, ಮೊದಲು ಪೇಜಾವರ ಸ್ವಾಮೀಜಿಗಳು ಲಿಂಗಾಯತ ಧರ್ಮದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲಿ, ಬಸವಣ್ಣನ ವಿಚಾರಗಳನ್ನು ಮೊದಲು ಅರ್ಥ ಮಾಡಿಕೊಂಡು ಮಾತನಾಡಲಿ

Lingayath Religion controversy

ಬೆಂಗಳೂರು(ಜು.25): ಇನ್ನು ಲಿಂಗಾಯತ ಧರ್ಮ ಸ್ಥಾಪನೆ ಸಂಬಂಧ ಲಿಂಗಾಯತ ಸಚಿವರ ರಾಜ್ಯ ಪ್ರವಾಸದ ಕ್ರಮವನ್ನು ಜೆಡಿಎಸ್​ ಟೀಕಿಸಿದೆ.

ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್​. ಡಿ. ಕುಮಾರಸ್ವಾಮಿ, ರಾಜ್ಯ ಪ್ರವಾಸದ ಚಿಂತನೆ ಸರ್ಕಾರದ ಕೀಳು ಅಭಿರುಚಿಯನ್ನು ಸೂಚಿಸುತ್ತದೆ ಎಂದು ಹೇಳಿದ್ದು, ನಾಳೆ ಒಕ್ಕಲಿಗರು, ಕುರುಬರೂ ಪ್ರತ್ಯೇಕ ಧರ್ಮ ಕೇಳಬಹುದು ಎಂದಿದ್ದಾರೆ. ಅಲ್ಲದೇ ಸರ್ಕಾರ ಧರ್ಮದ ಹೆಸರಿನಲ್ಲಿ ಓಟ್​ ಬ್ಯಾಂಕ್​ ರಾಜಕಾರಣ ಮಾಡಿ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ಈ ಮಧ್ಯೆ ಪೇಜಾವರ ಸ್ವಾಮೀಜಿಗಳಿಗೆ ತಿರುಗೇಟು ನೀಡಿರುವ ಬಸವ ಕಲ್ಯಾಣದ ಬೆಲ್ದಾಳೆ ಶ್ರೀ, ಮೊದಲು ಪೇಜಾವರ ಸ್ವಾಮೀಜಿಗಳು ಲಿಂಗಾಯತ ಧರ್ಮದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲಿ, ಬಸವಣ್ಣನ ವಿಚಾರಗಳನ್ನು ಮೊದಲು ಅರ್ಥ ಮಾಡಿಕೊಂಡು ಮಾತನಾಡಲಿ ಎಂದಿದ್ದಾರೆ.

ಲಿಂಗಾಯತ ಧರ್ಮ ಸ್ಥಾಪನೆ ವಿಚಾರದಲ್ಲಿ ಪೇಜಾವರ ಸ್ವಾಮೀಜಿ ನೀಡಿದ್ದ ಹೇಳಿಕೆಗೆ ಈಗ ಲಿಂಗಾಯತ ಸಚಿವರು ಮತ್ತು ಸ್ವಾಮೀಜಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಚುನಾವಣೆಯ ಸಮಯದಲ್ಲಿ ಬಿಜೆಪಿಯ ಮಗ್ಗುಲು ಮುರಿಯಲು ಸಿಕ್ಕಿರುವ ಅವಕಾಶವನ್ನು  ಸರಿಯಾಗಿಯೇ ಬಳಸಿಕೊಳ್ಳುವ ನಿಟ್ಟಿನಲ್ಲಿ ಸಿದ್ಧರಾಮಯ್ಯ ಸಂಪುಟದ ಲಿಂಗಾಯತ ಸಚಿವರುಗಳು ಮುಂದುವರಿದಿದ್ದಾರೆ.

ಲಿಂಗಾಯತ ಸಚಿವರಿಂದಲೂ ಆಕ್ಷೇಪ

ಲಿಂಗಾಯತ ಧರ್ಮ ಸ್ಥಾಪನೆ ವಿಚಾರವಾಗಿ ನಿನ್ನೆ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಕೊಟ್ಟಿದ್ದ ಈ ಹೇಳಿಕೆಗೆ ಇಂದು ಲಿಂಗಾಯತ ಸಚಿವರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಲಿಂಗಾಯಿತ ಧರ್ಮ ವಿಚಾರದಲ್ಲಿ ಪೇಜಾವರ ಶ್ರೀಗಳ ಮಧ್ಯಪ್ರವೇಶದ ಅವಶ್ಯಕತೆ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್​ ಮತ್ತು ಗಣಿ ಸಚಿವ ವಿನಯ್​ ಕುಲಕರ್ಣಿ ಕಠಿಣವಾಗಿ ಹೇಳಿದ್ದಾರೆ. ನಮ್ಮ ಸಮುದಾಯಕ್ಕೆ ನಮ್ಮದೇ ಸ್ವಾಮೀಜಿಗಳಿದ್ದು, ಪೇಜಾವರ ಸ್ವಾಮೀಜಿ ಬರಬೇಕಾಗಿಲ್ಲ ಎಂದಿದ್ದಾರೆ. ಇನ್ನು ಕೇಂದ್ರ ಸರ್ಕಾರ ಲಿಂಗಾಯತ ಧರ್ಮ ಸ್ಥಾಪನೆಗೆ ಒಪ್ಪದಿದ್ದಲ್ಲಿ ಕಾನೂನು ಹೋರಾಟಕ್ಕೂ ಸಿದ್ಧ ಎಂದು ಸಚಿವ ಎಂ.ಬಿ. ಪಾಟೀಲ್​ ಹೇಳಿದ್ದಾರೆ.

-ಕಿರಣ್​  ಹನಿಯಡ್ಕ, ಸುವರ್ಣ ನ್ಯೂಸ್​.

 

Follow Us:
Download App:
  • android
  • ios