ಬೆಂಗಳೂರು[ಸೆ.26] ಐಎಂಎ (ಐ ಮಾನಿಟರಿ ಅಡ್ವೈಸರಿ) ಮಾದರಿಯಲ್ಲಿ ಜನರಿಂದ ಲಕ್ಷಾಂತರ ರು. ಪಡೆದು ನಿಯಮಬಾಹಿರವಾಗಿ ವಹಿವಾಟು ನಡೆಸುತ್ತಿದ್ದ ಆರೋಪದ ಮೇರೆಗೆ ಬೆಂಗಳೂರಿನಲ್ಲಿ ವ್ಯವಹರಿಸುತ್ತಿದ್ದ ಕೇರಳ ಮೂಲದ ‘ಯಲ್ಲೋ ಎಕ್ಸ್‌ಪ್ರೆಸ್ ಲಾಜಿಸ್ಟಿಕ್ ಕಂಪನಿ’ ವಹಿವಾಟಿನ ಬಗ್ಗೆ ತನಿಖೆ ನಡೆಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ಅವರು ಈ ವಿಷಯ ತಿಳಿಸಿದರು.

ಕಂಪನಿಯು ಸುಮಾರು ಎರಡು ಸಾವಿರ ಜನರಿಂದ ಎರಡರಿಂದ ಎರಡೂವರೆ ಲಕ್ಷ ರುಪಾಯಿಯಂತೆ ಸುಮಾರು 40ರಿಂದ 50 ಕೋಟಿ ಹಣ ಪಡೆದು, ಪ್ರತಿ ಯೊಬ್ಬರಿಗೆ ತಿಂಗಳಿಗೆ 10ರಿಂದ 25 ಸಾವಿರ ನೀಡುವುದಾಗಿ ಹೇಳಿದೆ. ಕಂಪನಿಯು ಈ ರೀತಿ ಸಾರ್ವಜನಿಕರಿಂದ ಹಣವನ್ನು ಠೇವಣಿಯಾಗಿ ಸ್ವೀಕರಿಸಿರುವುದು ಹಾಗೂ ಈ ರೀತಿ ಸಂಗ್ರಹಿಸಿದ ಹಣವನ್ನು ಬೇರೆ ಬೇರೆ ಉದ್ದೇಶಕ್ಕೆ ಬಳಸಿಕೊಂಡಿರುವುದು ಸಂಶಯಾಸ್ಪದ ವ್ಯವಹಾರವಾಗಿರುವ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಕಂಪನಿಯು ಯಲ್ಲೋ ಎಕ್ಸ್‌ಪ್ರೆಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಯಲ್ಲೋ ಫೈನಾನ್ಸ್ ಆ್ಯಂಡ್ ಅರ್ನಿಂಗ್ಸ್ ಲಿಮಿಟೆಡ್, ಲಾಗಿನ್ ಇಂಡಿಯಾ ಫೈನಾನ್ಸ್ ಆ್ಯಂಡ್ ಲರ್ನಿಂಗ್ ಹಾಗೂ ಲಕ್ಷ್ಮೀ ಕಾರ್ ಜೋನ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಹೆಸರಿನಲ್ಲಿ ವಹಿವಾಟು ಮಾಡುತ್ತಿದೆ. ಕಂಪನಿಯ ನಿರ್ದೇಶಕರಾಗಿರುವ ರವೀತ್ ಮಲ್ಹೋತ್ರ, ಜೋಜೋ ಥಾಮಸ್ ಹಾಗೂ ಮಾಗಿ ನಾಯರ್ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಜನರಿಂದ ಸುಮಾರು ಎರಡರಿಂದ ಎರಡೂವರೆ ಲಕ್ಷ ರು. ಹಣ ಪಡೆದುಕೊಂಡು, ನಂತರ ಪ್ರತಿ ಖಾತೆ ದಾರರ ಹೆಸರಲ್ಲಿ ಒಂದು ಕಾರನ್ನು ನೋಂದಾಯಿಸಿ ಅವರಿಗೆ ಪ್ರತಿ ತಿಂಗಳು ₹27 ಸಾವಿರ ರು. ಪಾವತಿಸುವುದಾಗಿ ನೋಂದಣಿ ಕರಾರು ಮಾಡಿಕೊಂಡಿದೆ. ಈ ರೀತಿ ಕರಾರು ಮಾಡಿಕೊಂಡ ವ್ಯಕ್ತಿಗಳ ಪೈಕಿ 63 ಜನರಿಗೆ ಕಾರು ನೋಂದಾಯಿಸಿ ಕೊಟ್ಟಿದ್ದಾರೆ. ಸದರಿ ಕಾರುಗಳನ್ನು ‘ಉಬರ್’ ಕಂಪನಿಗೆ ಒಪ್ಪಂದದ ಕರಾರು ಮಾಡಿಕೊಂಡಿದೆ. ಎರಡು ಸಾವಿರ ಜನರ ಪೈಕಿ ಕೇವಲ 63 ಜನರಿಗೆ ಮಾತ್ರ ಕಾರು ವಿತರಿಸಿದ್ದು, ಸುಮಾರು 100 ಕಾರುಗಳನ್ನು ಕಂಪನಿಯ ಹೆಸರಿಗೆ ನೋಂದಣಿ ಮಾಡಿಕೊಂಡಿದೆ.

ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಬಳಸಿಕೊಂಡು ಕಂಪನಿಯ ಹೆಸರಿನಲ್ಲಿ ಕಾರುಗಳನ್ನು ನೋಂದಾಯಿಸಿ ಕೊಂಡಿದೆ. ಅಷ್ಟೇ ಅಲ್ಲ ಸದರಿ ಕಾರುಗಳನ್ನು ನಿಲ್ಲಿಸಲು ನಿಲ್ದಾಣಕ್ಕೆ ಸುಮಾರು ₹65 ಲಕ್ಷ ಮುಂಗಡ ಹಣ ನೀಡಿದೆ. ಜೊತೆಗೆ ಪ್ರತಿ ತಿಂಗಳು ₹6.50 ಲಕ್ಷ ಬಾಡಿಗೆ ಸಹ ನೀಡಿದೆ. ಅಲ್ಲದೇ ಈ ಜನರಿಂದ ಸಂಗ್ರಹಿಸಿದ ಮೊತ್ತಕ್ಕೆ ಪ್ರತಿಯಾಗಿ ಅವರಿಗೆ ಮಾಸಿಕ ₹10 ಸಾವಿರಗಳನ್ನು ಕಂಪನಿ ನೀಡಿದೆ ಎಂದು ವಿವರಿಸಿದರು.