ಬೆಂಗಳೂರು (ಜೂ. 25):  ರಾಜ್ಯಾದ್ಯಂತ ಸೋಮವಾರ ಮುಂಗಾರು ಆರ್ಭಟ ತಗ್ಗಿದ್ದರೂ ಉತ್ತರ ಕರ್ನಾಟಕದ ಅಲ್ಲಲ್ಲಿ ಕೆಲ ಗಂಟೆಗಳ ಕಾಲ ಉತ್ತಮ ಮಳೆಯಾಗಿದೆ. ಆದರೆ, ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆ ಸೃಷ್ಟಿಸಿದ ಅನಾಹುತದಿಂದಾಗಿ ಅಸ್ತವ್ಯಸ್ತಗೊಂಡಿದ್ದ ವಿಜಯಪುರ, ಬೆಳಗಾವಿ ಮತ್ತಿತರ ಕಡೆಯ ಜನಜೀವನ ಮಾತ್ರ ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ.

ಏತನ್ಮಧ್ಯೆ, ಸೇತುವೆ ಮೇಲೆ ಭಾರೀ ನೀರು ಹರಿದ ಪರಿಣಾಮ ಎರಡು ಲಾರಿ ಉರುಳಿ, ಖಾಸಗಿ ಬಸ್ಸೊಂದು ನೀರಿನ ಮಧ್ಯೆ ಸಿಲುಕಿ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಬಳ್ಳಾರಿ ಜಿಲ್ಲೆಯ ಶಿರಗುಪ್ಪಿ ತಾಲೂಕಿನ ರಾರಾವಿಯಲ್ಲಿ ನಡೆದಿದೆ.

ನದಿ ಮಧ್ಯೆ ಸಿಲುಕಿದ್ದವರ ರಕ್ಷಣೆ:

ವಿಜಯಪುರ ಜಿಲ್ಲೆಯ ಡೋಣಿ ನದಿಯಲ್ಲಿ ಭಾನುವಾರ ರಾತ್ರಿಯಿಡೀ ನೀರಿನ ಮಧ್ಯೆ ಸಿಲುಕಿಕೊಂಡಿದ್ದ ಮಹಾರಾಷ್ಟ್ರ ಮೂಲದ ರಾಯಘಡ ಜಿಲ್ಲೆಯ ಸುಧಾಘಾಟ ತಾಲೂಕಿನ ಮಾನಗಾಂವ ಗ್ರಾಮದ ಎರಡು ವರ್ಷದ ಮಗು ಸೇರಿ 6 ಮಂದಿಯನ್ನು ಗ್ರಾಮಸ್ಥರು ಸೋಮವಾರ ಬೆಳಗ್ಗೆ ಹಗ್ಗ ಮತ್ತು ಏಣಿ ಸಹಾಯದಿಂದ ರಕ್ಷಿಸಿದ್ದಾರೆ.

ತುಂಬಿ ಹರಿಯುತ್ತಿದ್ದ ನದಿ ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದ ಮಕ್ಕಳು ಮಹಿಳೆಯರು ಹಾಗೂ ಯುವಕರು ಜೀವ ಕೈಯಲ್ಲಿ ಹಿಡಿದುಕೊಂಡು ರಾತ್ರಿಯಿಡೀ ಕಳೆದಿದ್ದರು. ಬೆಳಗ್ಗೆ ಈ ವಿಚಾರಗೊತ್ತಾಗುತ್ತಲೇ ಸ್ಥಳೀಯರು ರಕ್ಷಣೆಗೆ ಧಾವಿಸಿದರು.

ಕೊಪ್ಪಳದಲ್ಲೂ ಇದೇ ರೀತಿಯ ಘಟನೆ ನಡೆದಿದ್ದು, ಯಲಬುರ್ಗಾ ಮತ್ತು ಸಂಗನಾಳ ನಡುವಿನ ಹಳ್ಳದ ದಡದಲ್ಲಿ ಸಿಲುಕಿದ್ದ ಅಜ್ಜಿ-ಮೊಮ್ಮಗಳನ್ನು ಹಗ್ಗ ಹಾಕಿ ಏಣಿ ಸಹಾಯದಿಂದ ಭಾನುವಾರ ರಾತ್ರಿಯೇ ಅವರನ್ನು ರಕ್ಷಿಸಲಾಗಿತ್ತು.

ಚೆಕ್‌ಡ್ಯಾಂ ನೀರುಪಾಲು:

ಕೊಪ್ಪಳದ ಗವಿಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಸ್ವಚ್ಛಗೊಳಿಸಿದ್ದ ಹಿರೇಹಳ್ಳಕ್ಕೆ ಭಾರೀ ನೀರು ಹರಿದುಬಂದಿದ್ದು, ಇದರಿಂದ ಕಿನ್ನಾಳ ಗ್ರಾಮದ ಬಳಿ ನಿರ್ಮಾಣ ಹಂತದ ಚೆಕ್‌ ಡ್ಯಾಮ್‌ವೊಂದು ಕೊಚ್ಚಿ ಹೋಗಿದೆ. 15 ದಿನದಲ್ಲಿ ಕಾಮಗಾರಿ ಮುಗಿಯುವುದರಲ್ಲಿತ್ತು, ಅಷ್ಟರಲ್ಲೇ ಈ ಘಟನೆ ನಡೆದಿದೆ.

ಲಾರಿ, ಬಸ್‌ನಲ್ಲಿದ್ದವರ ರಕ್ಷಣೆ:

ಬಳ್ಳಾರಿ ಜಿಲ್ಲೆಯ ಸಿರಗುಪ್ಪದಿಂದ ಸೀಮಾಂಧ್ರದ ಆದೋನಿ ನಗರಕ್ಕೆ ಈರುಳ್ಳಿ ತುಂಬಿಕೊಂಡು ಹೋಗುತ್ತಿದ್ದ ಲಾರಿ ಹಾಗೂ ಮತ್ತೊಂದು ಖಾಲಿ ಲಾರಿ ಯಲ್ಲಮ್ಮನ ಹಳ್ಳ ದಾಟುವಾಗ ನೀರಿನ ರಭಸಕ್ಕೆ ಹಳ್ಳಕ್ಕೆ ಉರುಳಿ ಬಿದ್ದಿದೆ. ಈ ವೇಳೆ ಚಾಲಕ ಹಾಗೂ ಕ್ಲಿನರ್‌ ವಾಹನದಿಂದ ಹೊರಬಂದು ಜೀವ ಉಳಿಸಿಕೊಂಡಿದ್ದಾರೆ.

ಇದೇ ಮಾರ್ಗದಲ್ಲಿ ಆದೋನಿಯಿಂದ ಸಿರಗುಪ್ಪಕ್ಕೆ ಬರುತ್ತಿದ್ದ ಖಾಸಗಿ ಬಸ್‌ ಕೂಡ ಇದೇ ಸೇತುವೆ ಮೇಲೆ ಸಂಚರಿಸುವಾಗ ಪಕ್ಕಕ್ಕೆ ವಾಲಿದ್ದು, ತಕ್ಷಣ ಅದರಲ್ಲಿದ್ದ 8 ಪ್ರಯಾಣಿಕರನ್ನು ಗ್ರಾಮಸ್ಥರು ರಕ್ಷಿಸಿ ಜೀವ ಉಳಿಸಿದ್ದಾರೆ.

ಕೊಚ್ಚಿ ಹೋಯ್ತು ಪಲ್ಲಕ್ಕಿ:

ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಕಳ್ಳಕವಟಗಿಯ ಸಂಗಮನಾಥ ಹಳ್ಳ ತುಂಬಿ ಹರಿಯುತ್ತಿದ್ದು, ಸಂಗಮನಾಥ ದೇವಸ್ಥಾನ ಮುಳುಗಡೆಯಾಗಿದೆ. ಈ ಸಂದರ್ಭದಲ್ಲಿ ಹೊರಗಿಟ್ಟಿದ್ದ ದೇವರ ಪಲ್ಲಕ್ಕಿ ಕೊಚ್ಚಿ ಹೋಗಿದೆ.

ಆಸ್ಪತ್ರೆಗೂ ನುಗ್ಗಿದ ನೀರು:

ಭಾರೀ ಪ್ರವಾಹದಿಂದ ತತ್ತರಿಸಿದ್ದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾದಲ್ಲಿ ಭಾನುವಾರ ರಾತ್ರಿ 114ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದೊಳಕ್ಕೂ ನೀರು ನುಗ್ಗಿ ರೋಗಿಗಳು ಪರದಾಡಬೇಕಾಯಿತು.

ಇದಲ್ಲದೆ ಮಳೆಯಬ್ಬರಕ್ಕೆ ತಗ್ಗುಪ್ರದೇಶಗಳಲ್ಲಿದ್ದ ಮನೆಗಳಿಗೆ ನೀರು ನುಗ್ಗಿದ್ದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗಿನಿಂದಲೂ ಜನ ನೀರು ಹೊರಹಾಕಲು ಹರಸಾಹಸ ಪಡುತ್ತಿದ್ದರು. ಪಟ್ಟಣದಲ್ಲಿ ಕಾಣಸಿಕೊಂಡಿದ್ದ ದಿಢೀರ್‌ ಪ್ರವಾಹದಲ್ಲಿ 15ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಕೊಚ್ಚಿಕೊಂಡು ಹೋಗಿದ್ದವು.

ಬಾಗಲಕೋಟೆ ಹುಬ್ಬಳ್ಳಿ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಸುತ್ತ ನೀರು ಆವರಿಸಿದ್ದರಿಂದ ಸಂಚಾರಕ್ಕೆ ತೀವ್ರ ಅಡಚಣೆಯಾಯಿತು.

ಮತ್ತೆ ಎರಡ್ಮೂರು ದಿನ ಮಳೆ

ಬೆಂಗಳೂರು: ರಾಜ್ಯದಲ್ಲಿ ಇನ್ನೂ ಎರಡ್ಮೂರು ದಿನ ಚದುರಿದಂತೆ ಸಾಧಾರಣ ಮಳೆಯಾಗಲಿದ್ದು, ನಂತರ ಮುಂಗಾರು ದುರ್ಬಲವಾಗಲಿದೆ. ಜುಲೈ ಮೊದಲ ವಾರದಲ್ಲಿ ಮತ್ತೆ ಚುರುಕಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸೋಮವಾರ ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಕೆಲ ಪ್ರದೇಶದಲ್ಲಿ ಮಾತ್ರ ಭಾರೀ ಮಳೆಯಾಗಿದೆ.

ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಸುನೀಲ್‌ ಗವಾಸ್ಕರ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. ತುಮಕೂರು 72, ಗದಗ 66, ವಿಜಯಪುರ 54, ಕಲಬುರಗಿ 52, ಬಾಗಲಕೋಟೆ 46, ರಾಯಚೂರು 44.5, ಕೊಪ್ಪಳ 44.9, ಬಳ್ಳಾರಿ 39.4, ಶಿವಮೊಗ್ಗ 36, ಯಾದಗಿರಿ 31, ಕೊಡಗು 23 ಹಾಗೂ ದಕ್ಷಿಣ ಕನ್ನಡದಲ್ಲಿ 14 ಮಿ.ಮೀ ಮಳೆಯಾದ ವರದಿಯಾಗಿದೆ.