ಬಜೆಟ್ ನಂತರವೂ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಪತ್ರ ಸಮರ ಮುಂದುವರಿಸಿದ್ದಾರೆ. ಬಾದಾಮಿ ಕ್ಷೇತ್ರದ ಮೇಲೆ ಸಿದ್ದುಗಿರುವ ವ್ಯಾಮೋಹವೋ ಅಥವಾ ಕುಮಾರಸ್ವಾಮಿ ವಿರುದ್ಧ ಹಠ ಸಾಧಿಸುವ ಛಲವೋ? ಒಟ್ಟಿನಲ್ಲಿ ಮಾಜಿ ಸಿಎಂ ಹಾಲಿ ಸಿಎಂಗೆ ಮತ್ತೆ ಎರಡು ಪತ್ರ ರವಾನಿಸಿದ್ದಾರೆ.

ಬಾಗಲಕೋಟೆ[ಜು.10] ಬಾದಾಮಿಯಲ್ಲಿ ಸರಕಾರಿ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಗುಳೇದಗುಡ್ಡಕ್ಕೆ ಸರಕಾರಿ ಪಶು ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಒತ್ತಾಯಿಸಿ ಸಿದ್ದರಾಮಯ್ಯ ಕುಮಾರಸ್ವಾಮಿ ಅವರಿಗೆ ಎರಡು ಪತ್ರ ಬರೆದಿದ್ದಾರೆ.

ಬಾದಾಮಿ ಶಾಸಕರಾಗಿರುವ ಸಿದ್ದರಾಮಯ್ಯ ಕೆರೂರ ಪಟ್ಟಣಕ್ಕೆ ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರ ನೀಡಬೇಕು ಎಂದು ಕೋರಿದ್ದಾರೆ. ಅಲ್ಲದೇ ಕಾರ್ಮಿಕ ಸಚಿವ ವೆಂಕಟರಮಣಪ್ಪರಿಗೆ ತರಬೇತಿ ಕೇಂದ್ರ ಮಂಜೂರು ಮಾಡಬೇಕು ಎಂದು ಕೇಳಿ ಮತ್ತೊಂದು ಪತ್ರ ರವಾನಿಸಿದ್ದಾರೆ.

ಬಾದಾಮಿ ಕ್ಷೇತ್ರದ ಜನರ ಬೇಡಿಕೆ ಹಿನ್ನೆಲೆಯಲ್ಲಿ ಈಗಾಗಲೇ ಎರಡು ಪತ್ರ ರವಾನಿಸಿದ್ದ ಸಿದ್ದರಾಮಯ್ಯ ಗುಳೇದಗುಡ್ಡದಲ್ಲಿ ಜವಳಿ ಪಾರ್ಕ್ ನಿರ್ಮಿಸಬೇಕು ಎಂದು ಬೇಡಿಕೆ ಇಟ್ಟಿದ್ದು ಅಧಿಕಾರಿಗಳ ಸಭೆ ಕರೆಯಲು ಒತ್ತಾಯಿಸಿದ್ದರು. ಗುಳೇದಗುಡ್ಡ ಭಾಗದಲ್ಲಿ ಪರ್ವತಿ ಕೆರೆ,ಗಂಜಿ ಕೆರೆ,ಹಿರೆಕೆರೆಗಳಿಗೆ ನೀರು ತುಂಬಿಸಬೇಕು ಎಂದು ಕೋರಿದ್ದಾರೆ. 12 ಕೋಟಿ ರೂ. ನೀಡಬೇಕು ಎಂದು ಧರ್ಮಸ್ಥಳ ಶಾಂತಿವನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಬರೆದ ಪತ್ರಗಳು ಸುದ್ದಿ ಮಾಡಿದ್ದವು.