ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆ ಎದುರಿಸುತ್ತಿರುವ ಮತ್ತು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಗೆ ಕ್ಷಮಾದಾನ ನೀಡಿ ಎಂದು ಸ್ವತಃ ಇವರಿಗೆಲ್ಲಾ ಶಿಕ್ಷೆ ವಿಧಿಸಿದ್ದ ನ್ಯಾಯಾಧೀಶರೊಬ್ಬರು, ರಾಜೀವ್‌'ರ ಪತ್ನಿ,ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ.

ಚೆನ್ನೈ(ನ.17) ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆ ಎದುರಿಸುತ್ತಿರುವ ಮತ್ತು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಗೆ ಕ್ಷಮಾದಾನ ನೀಡಿ ಎಂದು ಸ್ವತಃ ಇವರಿಗೆಲ್ಲಾ ಶಿಕ್ಷೆ ವಿಧಿಸಿದ್ದ ನ್ಯಾಯಾಧೀಶರೊಬ್ಬರು, ರಾಜೀವ್‌'ರ ಪತ್ನಿ,ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ. ಜೊತೆಗೆ ಪ್ರಕರಣದ ತನಿಖೆಯಲ್ಲಿ ಸಿಬಿಐನ ಲೋಪ ಮತ್ತು ಕೆಲ ಆರೋಪಿಗಳನ್ನು ದೋಷಿಗಳೆಂದು ಪರಿಗಣಿಸುವಾಗ ಭಾವನೆಗಳು ಕೂಡಾ ಕೆಲಸ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಸುಪ್ರೀಂಕೋರ್ಟ್‌'ನ ನಿವೃತ್ತ ನ್ಯಾಯಮೂರ್ತಿ ಕೆ.ಟಿ.ಥಾಮಸ್ ಅವರು ವ್ಯಕ್ತಪಡಿಸಿರುವ ಈ ಅಭಿಪ್ರಾಯಗಳು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಸೋನಿಯಾಗೆ ಪತ್ರ: ಕಳೆದ ಅ.18 ರಂದು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ನ್ಯಾ.ಕೆ.ಟಿ.ಥಾಮಸ್, ರಾಜೀವ್ ಹಂತಕರಿಗೆ ಕ್ಷಮಾದಾನ ನೀಡಲು 2014 ರಲ್ಲಿ ತಮಿಳುನಾಡು ಸರ್ಕಾರ ಕೈಗೊಂಡ ನಿರ್ಧಾರವನ್ನು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ವಿರೋಧಿಸಿತ್ತು. ಆ ಪ್ರಕರಣ ಇನ್ನೂ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಈ ಪ್ರಕರಣದ ಎಲ್ಲಾ ದೋಷಿಗಳು ಈಗಾಗಲೇ ಸುದೀರ್ಘ ಅವಧಿಯ ಜೈಲು ವಾಸ ಅನುಭವಿಸಿದ್ದಾರೆ. ಹೀಗಾಗಿ ನೀವು ಮತ್ತು ರಾಹುಲ್‌ಗಾಂಧಿ (ಸಾಧ್ಯವಾದಲ್ಲಿ ಪ್ರಿಯಾಂಕಾ) ದೋಷಿಗಳಿಗೆ ಕ್ಷಮಾದಾನ ನೀಡುವುದಾಗಿ ಹೇಳಿದರೆ, ಅದನ್ನು ಕೇಂದ್ರ ಸರ್ಕಾರ ಕೂಡಾ ಒಪ್ಪಬಹುದು. ಮಾನವೀಯ ನೆಲೆಯಲ್ಲಿ ನೀವು ಹೀಗೆ ಮಾಡಬಹುದು ಮತ್ತು ಈ ವಿಷಯದಲ್ಲಿ ನೀವೊಬ್ಬರೇ ಅವರ ಸಹಾಯಕ್ಕೆ ಬರಬಹುದಾಗಿದೆ. ಪ್ರಕರಣದಲ್ಲಿ ನಾನೇ ತೀರ್ಪು ನೀಡಿದ ವ್ಯಕ್ತಿಯಾಗಿರುವ ಕಾರಣ, ಪ್ರಸಕ್ತ ಸ್ಥಿತಿಯಲ್ಲಿ ನಾನೇ ನಿಮಗೆ ಪತ್ರ ಬರೆಯಬೇಕು ಎಂದು ಅಂದುಕೊಂಡಿದ್ದೇನೆ.

‘ಮಹಾತ್ಮಾ ಗಾಂಧಿ ಹತ್ಯೆ ಪ್ರಕರಣದಲ್ಲಿ 14 ವರ್ಷ ಜೈಲು ಅನುಭವಿಸಿದ್ದ ನಾಥೂರಾಂ ಗೋಡ್ಸೆಯ ಸೋದರ ಗೋಪಾಲ್ ಗೋಡ್ಸೆ ಅವರನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು.’ ಎಂದು ಥಾಮಸ್ ಪತ್ರದಲ್ಲಿ ದಾಖಲಿಸಿದ್ದಾರೆ.

ಇದೇ ವೇಳೆ ಇದೊಂದು ಹೈಫ್ರೊಫೈಲ್ ಕೇಸು ಅನ್ನುವ ಕಾರಣಕ್ಕಾಗಿ ನ್ಯಾಯಪೀಠ, ದೋಷಿಗಳಿಗೆ ಗಲ್ಲು ಶಿಕ್ಷೆಯಂಥ ಕಠಿಣ ಶಿಕ್ಷೆ ನೀಡಿರಬಹುದೇ ಎಂಬ ಅನುಮಾನ ತಮ್ಮನ್ನು ಹಲವು ಬಾರಿ ಕಾಡಿತ್ತು ಎಂದು ಥಾಮಸ್ ಹೇಳಿದ್ದಾರೆ. 1999 ರಲ್ಲಿ ನ್ಯಾ. ಥಾಮಸ್, ನ್ಯಾ. ಡಿ.ಪಿ. ವಾಧ್ವಾ ಮತ್ತು ನ್ಯಾ. ಸಯ್ಯದ್ ಶಾ ಮಹಮ್ಮದ್ ಅವರನ್ನೊಳಗೊಂಡ ನ್ಯಾಯಪೀಠ, 4 ಜನರಿಗೆ ಗಲ್ಲು, ಮೂವರಿಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿತ್ತು.