ನವದೆಹಲಿ(ಸೆ. 10): ಎಡ ಮೈತ್ರಿಕೂಟದ ಗೀತಾ ಕುಮಾರಿ ಅವರು ಜೆಎನ್'ಯು ವಿದ್ಯಾರ್ಥಿ ಒಕ್ಕೂಟದ ನೂತನ ಅಧ್ಯಕ್ಷೆಯಾಗಿ ಚುನಾಯಿತರಾಗಿದ್ದಾರೆ. ಎಬಿವಿಪಿಯ ನಿಧಿ ತ್ರಿಪಾಠಿ ವಿರುದ್ಧ ಗೀತಾ ಕುಮಾರಿ 400ಕ್ಕೂ ಹೆಚ್ಚು ಓಟುಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಈ ಚುನಾವಣೆಯಲ್ಲಿ ಎಡಪಂಥೀಯರು ಕ್ಲೀನ್ ಸ್ವೀಪ್ ಮಾಡಿದ್ದಾರೆ. ಇತ್ತೀಚೆಗೆ ಹಲವು ವಿವಾದಗಳಿಗೆ ವಿವಿ ಸಿಲುಕಿದ್ದ ಹಿನ್ನೆಲೆಯಲ್ಲಿ ಈ ಚುನಾವಣೆಯ ಮೇಲೆ ಎಲ್ಲರ ಗಮನ ಹರಿದಿತ್ತು. ಸ್ಟೂಡೆಂಟ್ ಯೂನಿಯನ್'ನ ಎಲ್ಲಾ ನಾಲ್ಕು ಹುದ್ದೆಗಳು ಎಡಸಂಘಟನೆಗಳ ಮೈತ್ರಿಕೂಟಕ್ಕೆ ಹೋಗಿವೆ. ಭಾರತೀಯ ಜನತಾ ಪಕ್ಷದ ವಿದ್ಯಾರ್ಥಿ ಘಟಕವಾದ ಎಬಿವಿಪಿಗೆ ಒಂದೂ ಹುದ್ದೆ ಸಿಗದೇ ನಿರಾಸೆ ಅನುಭವಿಸಿತಾದರೂ, ವಿಶ್ವವಿದ್ಯಾಲಯದಲ್ಲಿ ಅತೀ ಹೆಚ್ಚು ವೋಟ್ ಗೆದ್ದ ವೈಯಕ್ತಿಕ ವಿದ್ಯಾರ್ಥಿ ಸಂಘಟನೆ ಎನಿಸಿದೆ.

ಸಿಪಿಐ ಹೊರತುಪಡಿಸಿ, ಎಡಪಂಥೀಯ ಧೋರಣೆಯ ಎಐಎಸ್'ಎ, ಎಸ್'ಎಫ್'ಐ ಮತ್ತು ಡಿಎಸ್'ಎಫ್ ಸಂಘಟನೆಗಳು ಮೈತ್ರಿ ಮಾಡಿಕೊಂಡು ಈ ಬಾರಿಯ ಚುನಾವಣೆ ಎದುರಿಸಿದ್ದವು. ಎಬಿವಿಪಿ ಪ್ರಬಲವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಈ ಮೈತ್ರಿಕೂಟದ ರಚನೆಯಾಗಿತ್ತು. ಈ ಮೈತ್ರಿಕೂಟದ ಗೆಲುವು ನಿರೀಕ್ಷಿತವೇ ಆಗಿತ್ತಾದರೂ ಎಬಿವಿಪಿಯಿಂದ ಎಷ್ಟರಮಟ್ಟಿಗೆ ಪೈಪೋಟಿ ಬರಬಹುದೆಂಬ ಕುತೂಹಲ ಇತ್ತು.

ಅಧ್ಯಕ್ಷೆ ಹುದ್ದೆಗೆ ನಡೆದ ಚುನಾವಣೆಯಲ್ಲಿ ಎಡಮೈತ್ರಿಕೂಟದ ಗೀತಾ ಕುಮಾರಿ 1,501 ವೋಟು ಪಡೆದರೆ, ಎಬಿವಿಪಿಯ ನಿಧಿ ತ್ರಿಪಾಠಿ 1,042 ವೋಟು ಪಡೆದರು. ಭಗತ್ ಸಿಂಗ್ ಅಂಬೇಡ್ಕರ್ ಫುಲೇ ವಿದ್ಯಾರ್ಥಿ ಸಂಘ(ಬಿಎಪಿಎಸ್'ಎ) ಅಭ್ಯರ್ಥಿ ಶಬಾನಾ ಅಲಿ 935 ಓಟುಗಳೊಂದಿಗೆ ಮೂರನೇ ಸ್ಥಾನ ಪಡೆದರು. ಎಐಎಸ್'ಎಫ್'ನ ಅಪರಾಜಿತಾ ರಾಜಾ 416 ಓಟು ಪಡೆದರು. ಆದರೆ, ಎಲ್ಲರಿಗಿಂತ ಹೆಚ್ಚು ಗಮನ ಸೆಳೆದದ್ದು ಸೆರೆಬ್ರಲ್ ಪಾಲ್ಸಿ ಎಂಬ ಮೆದುಳು ಕಾಯಿಲೆಯಿಂದ ಬಳಲುತ್ತಿರುವ ಮೊಹಮ್ಮದ್ ಫಾರೂಕಿ ಅಲಮ್ ಅವರು. ಸ್ವತಂತ್ರವಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಈ ವಿದ್ಯಾರ್ಥಿ 419 ವೋಟು ಪಡೆದು 4ನೇ ಸ್ಥಾನ ಪಡೆದರು. ಕಾಂಗ್ರೆಸ್'ನ ವಿದ್ಯಾರ್ಥಿ ಘಟಕ ಎನ್'ಎಸ್'ಯುಐ ಕೇವಲ 82 ವೋಟು ಪಡೆದು ಹೀನಾಯ ಸೋಲನುಭವಿಸಿತು.

ಗೌರಿಗೆ ಸಮರ್ಪಣೆ:
ಇನ್ನು, ಅಧ್ಯಕ್ಷೆ ಹುದ್ದೆ ಜಯಿಸಿದ ಗೀತಾ ಕುಮಾರಿ ಅವರು ಈ ಗೆಲುವನ್ನು ಗೌರಿ ಲಂಕೇಶ್ ಅವರಿಗೆ ಡೆಡಿಕೇಟ್ ಮಾಡಿದ್ದಾರೆ. ಗೌರಿ ಲಂಕೇಶ್ ಹಾಗೂ ಅವರ ಮೌಲ್ಯಗಳಿಗೆ ಈ ಗೆಲುವು ಸಮರ್ಪಣೆ ಎಂದು ಗೀತಾ ಕುಮಾರಿ ಹೇಳಿದ್ದಾರೆ. ಕ್ಯಾಂಪಸ್'ನ ಸಮಸ್ಯೆಗಳು, ನಜೀಬ್ ಅಹ್ಮದ್ ಪ್ರಕರಣ, ಲಿಂಗಭೇದ ವಿರುದ್ಧ ಹೋರಾಡುವುದಾಗಿ ಅವರು ತಿಳಿಸಿದ್ದಾರೆ.

ಇತರ ಹುದ್ದೆಗಳು:
ಎಡಮೈತ್ರಿಕೂಟದ ಅಭ್ಯರ್ಥಿಗಳಾದ ಸಿಮೋನ್ ಜೋಯಾ ಖಾನ್, ದುಗ್ಗಿರಾಲಾ ಕೃಷ್ಣ ಮತ್ತು ಶುಭಾಂಷು ಕುಮಾರ್ ಅವರು ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಸ್ಥಾನಗಳನ್ನು ಜಯಿಸಿದ್ದಾರೆ. ಈ ಎಲ್ಲಾ ಹುದ್ದೆಗಳ ಚುನಾವಣೆಯಲ್ಲಿ ಎಬಿವಿಪಿ ಎರಡನೇ ಸ್ಥಾನ ಗಳಿಸಿದೆ.

ಎಬಿವಿಪಿಗೆ ಸೋಲಿನಲ್ಲೂ ಸಮಾಧಾನ ಯಾಕೆ?
ಜೆಎನ್'ಯು ವಿಶ್ವವಿದ್ಯಾಲಯದಲ್ಲಿ ಮೊದಲಿಂದಲೂ ಕಮ್ಯೂನಿಸ್ಟ್ ಸಂಘಟನೆಗಳದ್ದೇ ಪಾರಮ್ಯ. ಇಲ್ಲಿ ಎಬಿವಿಪಿಗೆ ಸಿಗುವ ಬೆಂಬಲ ಅಷ್ಟಕಷ್ಟೇ. ಕಳೆದ ಬಾರಿ ಎರಡು ಸ್ಥಾನಗಳಲ್ಲಿ ಎರಡನೇ ಸ್ಥಾನ ಪಡೆದದ್ದೇ ಅದರ ಈವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. ಆದರೆ, ಈ ಬಾರಿ ಎಲ್ಲಾ 4 ಸ್ಥಾನಗಳಲ್ಲಿ ಎರಡನೆ ಸ್ಥಾನ ಗಳಿಸಲು ಯಶಸ್ವಿಯಾಗಿದೆ. ನಾಲ್ಕೂ ಸ್ಥಾನಗಳಿಂದ 4 ಸಾವಿರಕ್ಕೂ ಹೆಚ್ಚು ವೋಟುಗಳನ್ನು ಗಳಿಸಿದೆ. ಇದು ಕೂಡ ಎಬಿವಿಪಿ ಮಟ್ಟಕ್ಕೆ ಹೊಸ ದಾಖಲೆಯೇ. ವಿಜ್ಞಾನ ವಿಭಾಗದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಎಬಿವಿಪಿಗೆ ಬೆಂಬಲ ನೀಡಿದ್ದಾರೆ. ಅಷ್ಟೇ ಅಲ್ಲ, 10 ಕೌನ್ಸಿಲರ್ ಸೀಟ್'ಗಳನ್ನೂ ಎಬಿವಿಪಿ ಜಯಿಸಿದೆ. ಇದೂ ಕೂಡ ಆ ಸಂಘಟನೆಗೆ ದಾಖಲೆಯೇ.