2 ದಿನಗಳ ಹಿಂದೆ ಕೊಪ್ಪಳದ ಅತಿಥಿ ಉಪನ್ಯಾಸಕ ಶಿವಕುಮಾರ್ ಕುಕನೂರ್ ಮನೆಯಲ್ಲಿ ಖೋಟಾನೋಟು ಹಾಗೂ ಮಷಿನ್ ಪತ್ತೆಯಾಗಿತ್ತು. ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಖೋಟಾನೋಟು ಪ್ರಕರಣದ ಹಿಂದೆ ಸಂಘಟನೆಯೊಂದರ ಅಧ್ಯಕ್ಷನ ಕೈವಾಡವಿರೋದನ್ನು ಪತ್ತೆ ಹಚ್ಚಿರೋ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೊಪ್ಪಳ: ಕಳೆದ ಎರಡು ದಿನಗಳ ಹಿಂದೆ ಕೊಪ್ಪಳ ನಗರದಲ್ಲಿ ಹೈಡ್ರಾಮಾವೇ ನಡೀದಿತ್ತು. ನಗರದ ಕುಂಬಾರ ಓಣಿಯ ಅತಿಥಿ ಉಪನ್ಯಾಸಕ ಶಿವಕುಮಾರ್ ಕುಕನೂರ್ ಮನೆ ಪರಿಶೀಲನೆ ನಡೆಸಿದ್ದಾಗ ಕಂತೆ ಕಂತೆ ಖೋಟಾನೋಟು ಹಾಗೂ ಪ್ರೀಂಟರ್ ಮಷಿನ್ ಪತ್ತೆಯಾಗಿತ್ತು. ಅದ್ರಲ್ಲೂ 2 ಸಾವಿರ ಮುಖಬೆಲೆಯ ನೋಟುಗಳ ಕಂತೆ ಕಂತೆಯೇ ಸಿಕ್ಕಿತು. ಪೊಲೀಸರು ಶಿವಕುಮಾರ್‌'ನನ್ನು ಬಂಧಿಸುತ್ತಿದಂತೆ ಸಂಬಂಧಿಕರು, ಸ್ನೇಹಿತರು ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದರು. ಅಂದು ಇಡೀ ರಾತ್ರಿ ಹೈಡ್ರಾಮವೇ ನಡೆದಿತ್ತು.

ಹೊಸ ಟ್ವಿಸ್ಟ್:
ಇದೀಗ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಖೋಟಾ ನೋಟಿನ ಹಿಂದೆ ಕೆಲ ಸಂಘಟನೆಗಳ ಕೈವಾಡ ಇರೋದಾಗಿ ಅತಿಥಿ ಉಪನ್ಯಾಸಕ ಶಿವಕುಮಾರ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಕೆಲ ಸಂಘಟನೆಗಳು ನನ್ನ ಮೇಲೆ ಹಗೆ ಸಾಧಿಸುತ್ತಿದ್ದು, ನನ್ನ ವಿರುದ್ಧ ಷಡ್ಯಂತ್ರ ನಡೆಸಿವೆ ಎಂದು ಹೇಳಿಕೆ ನೀಡಿದ್ದಾರೆ. ಇದೀಗ ಶಿವಕುಮಾರ್ ಹೇಳಿಕೆ ಆಧಾರದ ಮೇಲೆ ಕೊಪ್ಪಳ ಎಸ್‌'ಪಿ ಅನೂಪ್ ಶೆಟ್ಟಿ ನೇತೃತ್ವದ ತಂಡ ಮೂವರನ್ನು ಬಂಧಿಸಿದೆ. ಆದ್ರೆ ಪ್ರಕರಣದ ಕಿಂಗ್'ಪಿನ್ ಕರ್ನಾಟಕ ನವನಿರ್ಮಾಣ ಸೇನೆಯ ಉತ್ತರ ಕರ್ನಾಟಕ ಅಧ್ಯಕ್ಷ ವಿಜಯಕುಮಾರ್​ ಕವಲೂರ್ ಮತ್ತು ಮತ್ತೋರ್ವ ಆರೋಪಿ ನಾಪತ್ತೆಯಾಗಿದ್ದಾರೆ.

ವೈಷಮ್ಯ ಕಾರಣ:
ಶಿವಕುಮಾರ್ ಹಾಗೂ ವಿಜಯಕುಮಾರ್ ನಡುವೆ ಕಳೆದ ಕೆಲ ವರ್ಷಗಳಿಂದ ವೈಷಮ್ಯವಿತಂತೆ. ಹೇಗಾದ್ರೂ ಮಾಡಿ ಶಿವಕುಮಾರ್‌'ನನ್ನು ಪ್ರಕರಣದಲ್ಲಿ ಸಿಲುಕಿಸಬೇಕೆಂದು ವಿಜಯಕುಮಾರ್ ಪ್ಲಾನ್ ಮಾಡಿದ್ದಾನೆ. ತನ್ನ ಸೇಹಿತರಾದ ಜೀವನ್, ಚೇತನ್ ಹಾಗೂ ಈಶ್ವರ್, ಪ್ರಸಾದ್ ಜೊತೆಗೂಡಿ ಹೊಸಪೇಟೆಯಲ್ಲಿ ಪ್ರಿಟಿಂಗ್ ಮಷಿನ್ ಖರೀದಿಸಿದ್ದಾನೆ. ಬಳಿಕ ಲಾಡ್ಡ್ ವೊಂದರಲ್ಲಿ 2 ಸಾವಿರ ಮುಖಬೆಲೆಯ 115 ನಕಲಿ ನೋಟುಗಳನ್ನು ಪ್ರಿಂಟ್ ಮಾಡಿದ್ದಾನರೆ. ನಂತರ ಸಂತೋಷ್ ಎಂಬುವನ ಸಹಾಯದಿಂದ ಶಿವಕುಮಾರ್ ಮನೆಯಲ್ಲಿಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದಾಗಿ ತನಿಖೆಯಲ್ಲಿ ಬಯಲಾಗಿದೆ.

ಒಟ್ಟಾರೆಯಾಗಿ ಹಳೆ ದ್ವೇಷದ ಹಿನ್ನೆಲೆಯಲ್ಲಿ ದ್ವೇಷ ಸಾಧಿಸಿದ ಹೋರಾಟಗಾರನ ಮುಖವಾಡ ಇದೀಗ ಬಯಲಾಗಿದೆ. ತಪ್ಪಲ್ಲದಿದ್ದರೂ ಬಂಧಿಸಲ್ಪಟ್ಟ ಉಪನ್ಯಾಸಕ ಶಿವಕುಮಾರ್ ನಿರಪರಾಧಿ ಎಂಬುದು ಸಾಬೀತಾಗಿದೆ. ಪ್ರಕರಣದಲ್ಲಿ 3 ಆರೋಪಿಗಳು ಈಗಾಗಲೇ ಅಂದರ್ ಆಗಿದ್ದು, ಪ್ರಮುಖ ಆರೋಪಿಗಳಾದ ವಿಜಯ್'​ಕುಮಾರ್ ಹಾಗೂ ಸಂತೋಷ್'ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

- ದೊಡ್ಡೇಶ್​ ಯಲಿಗಾರ್, ಕೊಪ್ಪಳ,​ ಸುವರ್ಣ ನ್ಯೂಸ್​
(ಫೋಟೋದಲ್ಲಿರುವುದು ವಿಜಯ್'ಕುಮಾರ್)