ಇಷ್ಟಾರ್ಥಗಳನ್ನ ಈಡೇರಿಸಲಿ ಅಂತಾ ಜನ ದೇವರಲ್ಲಿ ಹರಕೆ ಹೊತ್ತಿಕೊಳ್ಳೋದು ಸಾಮಾನ್ಯ. ಇಷ್ಟಾರ್ಥ ನೆರವೇರಿದ ಬಳಿಕ ಭಕ್ತರು ಇಷ್ಟ ದೇವರಿಗೆ ಹರಕೆಯನ್ನು ಒಪ್ಪಿಸುತ್ತಾರೆ. ಇಲ್ಲೊಬ್ಬರು ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿದ್ದಕ್ಕೆ ನಾಡಿನ ಅಧಿದೇವತೆಗೆ ಭಾರೀ ಉಡುಗೊರೆಯನ್ನೇ ಹರಕೆ ರೂಪದಲ್ಲಿ ಸಲ್ಲಿಸಿದ್ದಾರೆ.
ಮೈಸೂರು(ಅ.30): ಚಿನ್ನದ ಬಾಗಿಲು ಒಂದಲ್ಲ, ಎರಡಲ್ಲ ನಾಲ್ಕು ಕೆಜಿ ಸ್ವರ್ಣ ದ್ವಾರ. ಕೋಟಿ ಮೌಲ್ಯದ ಬೆಲೆ ಬಾಳೋ ಚಿನ್ನದ ಬಾಗಿಲು ಈಗ ನಾಡ ಅಧಿದೇವತೆ ಚಾಮುಂಡಿ ಗರ್ಭಗುಡಿಯಲ್ಲಿ ಭಕ್ತರ ಕಣ್ಮನ ಸೆಳೆಯುತ್ತಿದೆ. ಅಂದ್ಹಾಗೇ ಇದು ಭಕ್ತರೊಬ್ಬರು ತಾಯಿಗೆ ಒಪ್ಪಿಸಿದ ಹರಕೆ. ಯೆಸ್, ಬೆಂಗಳೂರು ಮೂಲದ ವಕೀಲೆ ಜಯಶ್ರೀ ಶ್ರೀಧರ್ ಅನ್ನೋರು ಇಂಥದ್ದೊಂದು ದುಬಾರಿ ಹರಕೆ ತೀರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಎರಡು ವರ್ಷಗಳ ಹಿಂದೆ ಚಾಮುಂಡಿಬೆಟ್ಟಕ್ಕೆ ಬಂದಿದ್ದ ಜಯಶ್ರೀ ಶ್ರೀಧರ್ ಇಷ್ಟಾರ್ಥ ಪೂರೈಸಿದ್ರೆ ಚಿನ್ನದ ಬಾಗಿಲು ಸಮರ್ಪಿಸೋ ಹರಕೆ ಹೊತ್ತಿದ್ದರಂತೆ.. ಅದರಂತೆ ಈಗ ಗರ್ಭಗುಡಿಯ ದ್ವಾರಕ್ಕೆ ನವದುರ್ಗೆಯರಿರುವ ಚಿನ್ನದ ಪಟ್ಟಿ ಸಮರ್ಪಿಸಿ ಹರಕೆ ತೀರಿಸಿದ್ದಾರೆ.
ಭಕ್ತರು ಹರಕೆ ತೀರಿಸುತ್ತಾರೆ ಅನ್ನೋದನ್ನ ಕೇಳಿದ್ದೇವೆ. ಶಕ್ತ್ಯಾನುಸಾರ ಹರಕೆ ತೀರಿಸೋದನ್ನೂ ನೋಡಿದ್ದೇವೆ. ಆದ್ರೆ, ಚಾಮುಂಡಿ ತಾಯಿ ಭಕ್ತರೊಬ್ಬರು ಇಷ್ಟು ದೊಡ್ಡ ಮಟ್ಟದ ಹರಕೆಯನ್ನು ಒಪ್ಪಿಸಿದ್ದು ಭಕ್ತರ ಹುಬ್ಬೇರಿಸುವಂತೆ ಮಾಡಿದೆ.. ಜೊತೆಗೆ ಕೆಲ ಚರ್ಚೆಗಳನ್ನೂ ಹುಟ್ಟುಹಾಕಿದೆ.
