Asianet Suvarna News Asianet Suvarna News

ನಾಮಪತ್ರ ಮುಕ್ತಾಯ: 224 ಕ್ಷೇತ್ರಗಳಿಗೆ 3700ಕ್ಕೂ ಹೆಚ್ಚು ನಾಮಪತ್ರ ಸಲ್ಲಿಕೆ

ರಾಜ್ಯ ವಿಧಾನಸಭಾ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಹುರಿಯಾಳುಗಳ ಉಮೇದುವಾರಿಕೆ ಸಲ್ಲಿಕೆಯ ಕಾರ್ಯ ಮುಕ್ತಾಯಗೊಂಡಿದ್ದು, ಬುಧವಾರದಿಂದ ಬಿರುಬಿಸಿಲಿನ ನಡುವೆ ಮತಯಾಚನೆ ಭರಾಟೆ ಮತ್ತಷ್ಟುಜೋರಾಗಲಿದೆ. ಈ ಮೂಲಕ ಚುನಾವಣಾ ಕಣ ರಂಗೇರಲಿದೆ.

Last-day rush in many constituencies to file nomination papers

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಹುರಿಯಾಳುಗಳ ಉಮೇದುವಾರಿಕೆ ಸಲ್ಲಿಕೆಯ ಕಾರ್ಯ ಮುಕ್ತಾಯಗೊಂಡಿದ್ದು, ಬುಧವಾರದಿಂದ ಬಿರುಬಿಸಿಲಿನ ನಡುವೆ ಮತಯಾಚನೆ ಭರಾಟೆ ಮತ್ತಷ್ಟುಜೋರಾಗಲಿದೆ. ಈ ಮೂಲಕ ಚುನಾವಣಾ ಕಣ ರಂಗೇರಲಿದೆ.

ಏ.17ರಿಂದ ಏ.24ರವರೆಗೆ (ಮಂಗಳವಾರ) ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗಕ್ಕೆ ಈವರೆಗೆ ಒಟ್ಟು 3700ಕ್ಕೂ ಹೆಚ್ಚು ಉಮೇದುವಾರಿಕೆ ಸಲ್ಲಿಕೆಯಾಗಿವೆ. ಬುಧವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ವಾಪಸ್‌ ಪಡೆಯಲು ಶುಕ್ರವಾರ ಕೊನೆಯ ದಿನವಾಗಿದೆ.

ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಮಂಗಳವಾರ ಬಾದಾಮಿ ಕ್ಷೇತ್ರದಿಂದ ಕಾಂಗ್ರೆಸ್‌ ಹುರಿಯಾಳಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪ್ರತಿಸ್ಪರ್ಧಿಯಾಗಿ ಬಿಜೆಪಿಯ ಶ್ರೀರಾಮುಲು ನಾಮಪತ್ರ ಸಲ್ಲಿಸಿದರು. ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ ನಟ ಜಗ್ಗೇಶ್‌, ಬಿಟಿಎಂ ಲೇಔಟ್‌ ಕ್ಷೇತ್ರದಿಂದ ಎಂಇಪಿ ಪಕ್ಷದಿಂದ ನರ್ಸ್‌ ಜಯಲಕ್ಷ್ಮಿ ಸೇರಿದಂತೆ ಹಲವು ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದರು.

ಕೊನೆಯ ದಿನವಾದ ಮಂಗಳವಾರ ರಾಜ್ಯದಲ್ಲಿ ಎರಡು ಸಾವಿರಕ್ಕೂ ಅಧಿಕ ನಾಮಪತ್ರ ಸಲ್ಲಿಕೆಯಾಗಿವೆ. ಬಿಜೆಪಿಯಿಂದ 258, ಕಾಂಗ್ರೆಸ್‌ನಿಂದ 244 ಮತ್ತು ಜೆಡಿಎಸ್‌ನಿಂದ 208 ಉಮೇದುವಾರಿಕೆ ಸಲ್ಲಿಕೆಯಾಗಿವೆ. ಪಕ್ಷೇತರ ಅಭ್ಯರ್ಥಿಗಳು ಅಧಿಕವಾಗಿ ಸಲ್ಲಿಸಿದ್ದು, ಒಟ್ಟು 1084 ನಾಮಪತ್ರಗಳು ಸಲ್ಲಿಕೆಯಾಗಿವೆ. ಕೊನೆಯ ದಿನದಂದು ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳು ಚುನಾವಣಾಧಿಕಾರಿ ಕಚೇರಿಗೆ ಮುಗ್ಗಿ ಬಿದ್ದಿದ್ದು, ತಡರಾತ್ರಿವರೆಗೆ ನಾಮಪತ್ರ ಸಲ್ಲಿಕೆಯ ಕಾರ್ಯ ನಡೆಯಿತು. ಮಧ್ಯಾಹ್ನ 3 ಗಂಟೆಗೂ ಮುನ್ನ ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿದ ಅಭ್ಯರ್ಥಿಗಳಿಗೆ ಚೀಟಿಯೊಂದನ್ನು ನೀಡಿದ ಚುನಾವಣಾ ಸಿಬ್ಬಂದಿ ರಾತ್ರಿವರೆಗೆ ಉಮೇದುವಾರಿಕೆ ಪಡೆದರು.

ಒಟ್ಟಾರೆ 3700ಕ್ಕೂ ಅಧಿಕ ನಾಮಪತ್ರಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ ಎರಡು-ಮೂರು ಸೆಟ್‌ ನಾಮಪತ್ರ ಸಲ್ಲಿಸಿದವರನ್ನೂ ಗಣನೆಗೆ ತೆಗೆದುಕೊಂಡರೆ ಒಟ್ಟು 2054 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಬುಧವಾರ (ಏ.25) ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ತಿರಸ್ಕೃತ ಮತ್ತು ಕ್ರಮಬದ್ಧವಾದ ನಾಮಪತ್ರಗಳ ಪಟ್ಟಿಯನ್ನು ಆಯಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಪ್ರಕಟಿಸಲಿದ್ದಾರೆ. ಏ.27ರವರೆಗೆ ನಾಮಪತ್ರಗಳನ್ನು ವಾಪಸ್‌ ಪಡೆಯಲು ಕೊನೆಯ ದಿನವಾಗಿದೆ. ಬಳಿಕವಷ್ಟೇ ಅಖಾಡದಲ್ಲಿರುವ ಅಭ್ಯರ್ಥಿಗಳ ಸಂಖ್ಯೆ ಮತ್ತು ಯಾರಿದ್ದಾರೆ ಎಂಬ ಮಾಹಿತಿ ನಿಖರವಾಗಿ ಲಭ್ಯವಾಗಲಿದೆ. ನಾಮಪತ್ರ ಸಲ್ಲಿಕೆ ಕಾರ್ಯ ಮುಕ್ತಾಯವಾದ ಹಿನ್ನೆಲೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಕೊನೆಯ ದಿನದಂದು ಪಕ್ಷೇತರರು ಮತ್ತು ಎಲ್ಲಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಕೆಗೆ ಆಗಮಿಸಿದ್ದರು. ಪರಿಣಾಮ ಎಲ್ಲಾ ಚುನಾವಣಾಧಿಕಾರಿ ಕಚೇರಿಯಲ್ಲಿ ಸ್ವೀಕಾರ ಕಾರ್ಯ ತಡವಾಗಿದೆ. ಮಧ್ಯಾಹ್ನ 3 ಗಂಟೆಯೊಳಗೆ ಕಚೇರಿಯೊಳಗೆ ಆಗಮಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಚೀಟಿಯೊಂದನ್ನು ನೀಡಿ ನಂತರ ನಾಮಪತ್ರ ಸ್ವೀಕರಿಸಲಾಯಿತು. ನಂತರ ಬಂದ ಅಭ್ಯರ್ಥಿಗಳ ನಾಮಪತ್ರಗಳನ್ನು ಸ್ವೀಕರಿಸಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ.

ಬುಧವಾರದಿಂದ ಅಭ್ಯರ್ಥಿಗಳು ಸಭೆ-ಸಮಾರಂಭಗಳ ಮೂಲಕ ಪ್ರಚಾರದಲ್ಲಿ ತೊಡಗುವುದರಿಂದ ನೀತಿ ಸಂಹಿತಿ ಉಲ್ಲಂಘನೆಯಾಗಲಿದೆಯೇ ಎಂಬುದರ ಬಗ್ಗೆ ಅಧಿಕಾರಿಗಳು ಮತ್ತಷ್ಟುಎಚ್ಚರಿಕೆಯಿಂದ ನಿಗಾವಹಿಸಲಿದ್ದಾರೆ. ನೀತಿಸಂಹಿತೆ ಉಲ್ಲಂಘನೆಯಾದರೆ ದಿಟ್ಟಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪಕ್ಷಪಾತವಾಗಿ ಅಧಿಕಾರಿಗಳು ನಡೆದುಕೊಂಡಿರುವುದು ಗಮನಕ್ಕೆ ಬಂದರೆ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Follow Us:
Download App:
  • android
  • ios