Asianet Suvarna News Asianet Suvarna News

ಎಲ್ಲಾ ಡಿನೋಟಿಫೈ ಕೇಸ್‌ನಿಂದ ಬಿಎಸ್‌ವೈ ಪಾರು

ರಾಚೇನಹಳ್ಳಿ ಅಕ್ರಮ ಡಿನೋಟಿಫಿಕೇಷನ್‌ ಪ್ರಕರಣ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಂಗಳವಾರ ತೀರ್ಪು ಪ್ರಕಟಿಸಿದೆ. ನಾಲ್ಕು ಪ್ರಕರಣದಲ್ಲಿ ದೋಷಮುಕ್ತಗೊಳಿಸಿದ ಕಾರಣವನ್ನೇ ನ್ಯಾಯಾಲಯವು ರಾಚೇನಹಳ್ಳಿ ಪ್ರಕರಣದಲ್ಲಿಯೂ ನೀಡಿದ್ದು, ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕಾಗಿ ಪ್ರಕರಣವನ್ನು ರದ್ದುಗೊಳಿಸಿದೆ.

Land Denotification Case Big Releap for BS Yeddyurappa
Author
Bengaluru, First Published Aug 29, 2018, 9:45 AM IST

ಬೆಂಗಳೂರು[ಆ.29]: ಅಕ್ರಮ ಡಿನೋಟಿಫಿಕೇಷನ್‌ ಆರೋಪದ ನಾಲ್ಕು ಪ್ರಕರಣಗಳಲ್ಲಿ ದೋಷಮುಕ್ತವಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಬಾಕಿ ಉಳಿದ ಮತ್ತೊಂದು ಪ್ರಕರಣದಲ್ಲಿಯೂ ಆರೋಪ ಮುಕ್ತವಾಗುವ ಮೂಲಕ ತಮ್ಮ ವಿರುದ್ಧ ದಾಖಲಾಗಿದ್ದ ಎಲ್ಲಾ ಪ್ರಕರಣಗಳಿಂದ ಮುಕ್ತಿ ಪಡೆದಿದ್ದಾರೆ. ಈ ಮೂಲಕ ಯಡಿಯೂರಪ್ಪ ಅವರಿಗೆ ರಾಜಕೀಯವಾಗಿ ಬಿಗ್‌ ರಿಲೀಫ್‌ ಸಿಕ್ಕಂತಾಗಿದೆ.

ರಾಚೇನಹಳ್ಳಿ ಅಕ್ರಮ ಡಿನೋಟಿಫಿಕೇಷನ್‌ ಪ್ರಕರಣ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಂಗಳವಾರ ತೀರ್ಪು ಪ್ರಕಟಿಸಿದೆ. ನಾಲ್ಕು ಪ್ರಕರಣದಲ್ಲಿ ದೋಷಮುಕ್ತಗೊಳಿಸಿದ ಕಾರಣವನ್ನೇ ನ್ಯಾಯಾಲಯವು ರಾಚೇನಹಳ್ಳಿ ಪ್ರಕರಣದಲ್ಲಿಯೂ ನೀಡಿದ್ದು, ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕಾಗಿ ಪ್ರಕರಣವನ್ನು ರದ್ದುಗೊಳಿಸಿದೆ.

2011ರಲ್ಲಿ ಯಡಿಯೂರಪ್ಪ ವಿರುದ್ಧ ಐದು ಪ್ರಕರಣಗಳಲ್ಲಿ 15 ಅಕ್ರಮ ಡಿನೋಟಿಫಿಕೇಷನ್‌ ಮಾಡಲಾಗಿದೆ ಎಂದು ಆರೋಪಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ದೂರುಗಳನ್ನು ವಕೀಲ ಸಿರಾಜಿನ್‌ ಪಾಷಾ ಅವರು ದೂರು ದಾಖಲಿಸಿದ್ದರು. ರಾಚೇನಹಳ್ಳಿ, ಅರಕೆರೆ, ಉತ್ತರಹಳ್ಳಿ, ಶ್ರೀರಾಂಪುರ ಮತ್ತು ನಾಗರಭಾವಿ ಪ್ರದೇಶದಲ್ಲಿ ಅಕ್ರಮವಾಗಿ ಡಿನೋಟಿಫಿಕೇಷನ್‌ಗಳನ್ನು ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಈ ನಡುವೆ ರಾಚೇನಹಳ್ಳಿಯಲ್ಲಿ 1.12 ಎಕರೆ ಪ್ರದೇಶವನ್ನು ಯಡಿಯೂರಪ್ಪ ಆಪ್ತರು ಖರೀದಿಸಿ ಅದನ್ನು ಸೌತ್‌ವೆಸ್ಟ್‌ ಮೈನಿಂಗ್‌ ಕಂಪನಿಗೆ 20 ಕೋಟಿ ರು.ಗೆ ಮಾರಾಟ ಮಾಡಲಾಯಿತು. ಈ ಮೊತ್ತವನ್ನು ಪ್ರೇರಣಾ ಟ್ರಸ್ಟ್‌ಗೆ ಕಿಕ್‌ಬ್ಯಾಕ್‌ ಪಡೆಯಲಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯವು ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು.

ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ದಾಖಲಾಗಿದ್ದ ದೂರನ್ನು ಪ್ರಶ್ನಿಸಿ ಯಡಿಯೂರಪ್ಪ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಸುಪ್ರೀಂಕೋರ್ಟ್‌ನಲ್ಲಿ ರಾಚೇನಹಳ್ಳಿ ಪ್ರಕರಣ ವಿಚಾರಣೆ ನಡೆಯುತ್ತಿದ್ದ ಕಾರಣ ಆ ಒಂದು ಪ್ರಕರಣವನ್ನು ಹೊರತುಪಡಿಸಿ ಇನ್ನುಳಿದ ನಾಲ್ಕು ಪ್ರಕರಣದಲ್ಲಿ ನ್ಯಾಯಾಲಯವು ಆರೋಪ ಮುಕ್ತಗೊಳಿಸಲಾಯಿತು. ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕಾಗಿ ಯಡಿಯೂರಪ್ಪ ಅವರನ್ನು ಡಿನೋಟೀಫಿಕೇಷನ್‌ ಪ್ರಕರಣದಿಂದ ದೋಷ ಮುಕ್ತಗೊಳಿಸಿತ್ತು. ಸಮಾಜ ಪರಿವರ್ತನಾ ಸಮುದಾಯದ ಮನವಿ ಮೇರೆಗೆ ಸುಪ್ರೀಂಕೋರ್ಟ್‌ ಸಿಬಿಐ ತನಿಖೆಗೆ ಸೂಚನೆ ನೀಡಿತ್ತು. ತನಿಖೆ ನಡೆಸಿದ ಸಿಬಿಐ, ಸುಪ್ರೀಂಕೋರ್ಟ್‌ಗೆ ಆರೋಪಪಟ್ಟಿಸಲ್ಲಿಸಿತ್ತು. ತರುವಾಯ ವಿಚಾರಣೆ ನಡೆಸಿದ ನ್ಯಾಯಾಲಯವು ಹೈಕೋರ್ಟ್‌ನ ಆದೇಶವನ್ನು ಎತ್ತಿ ಹಿಡಿದು ಪ್ರಕರಣ ರದ್ದುಗೊಳಿಸಿತ್ತು.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರಚನೆಯಾದ ಬಳಿಕ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿದ್ದ ಪ್ರಕರಣವು ವರ್ಗಾವಣೆಗೊಂಡಿತು. ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ರದ್ದಾಗುತ್ತಿದ್ದಂತೆ ನ್ಯಾಯಾಲಯದಲ್ಲಿದ್ದ ತಡೆಯಾಜ್ಞೆ ತೆರವುಗೊಂಡಿದೆ. ಹೀಗಾಗಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರಾಚೇನಹಳ್ಳಿ ಪ್ರಕರಣವನ್ನು ರದ್ದು ಮಾಡುವ ಮೂಲಕ ಮುಕ್ತಾಯಗೊಳಿಸಿದೆ. ರದ್ದಾಗಿರುವ ಅಕ್ರಮ ಡಿನೋಟಿಫಿಕೇಷನ್‌ ಆರೋಪದ ಐದು ಪ್ರಕರಣಗಳೇ ಮತ್ತೊಮ್ಮೆ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ದೂರಿನ ಅಂತಿಮ ಆದೇಶವನ್ನು ಆ.30ರಂದು ಹೊರಬೀಳಲಿದೆ ಎಂದು ಯಡಿಯೂರಪ್ಪ ಪರ ವಕೀಲರು ತಿಳಿಸಿದ್ದಾರೆ.

ಪ್ರಕರಣ ರದ್ದುಗೊಂಡಿರುವುದು ಸಂತೋಷದ ವಿಚಾರ. ನನ್ನ ವಿರುದ್ಧ ಪದೇ ಪದೇ ಪ್ರಕರಣಗಳನ್ನು ದಾಖಲಿಸುತ್ತಿದ್ದರು. ನಾನು ಮೊದಲಿನಿಂದಲೂ ನ್ಯಾಯಾಲಯದ ಮೇಲೆ ವಿಶ್ವಾಸ ಹೊಂದಿದ್ದೇನೆ.

-ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Follow Us:
Download App:
  • android
  • ios