ಇದೀಗ ಕೇವಲ ಅರಣ್ಯ ಭೂಮಿ ಮಾತ್ರವಲ್ಲ ಸರಕಾರಿ ಕಂದಾಯ ಇಲಾಖೆಯ 13.47 ಎಕರೆ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ವಿಷಯ ಕಂದಾಯ ಹಾಗೂ ಅರಣ್ಯ ಇಲಾಖೆಯ ಜಂಟಿ ಸರ್ವೆಯಲ್ಲಿ ಬಹಿರಂಗಗೊಂಡಿದೆ.
ಬಳ್ಳಾರಿ(ನ.2): ಶಾಸಕ ಅನಿಲ್ ಲಾಡ್ ಸಂಬಂಧಿಕರ ಮಾಲಿಕತ್ವದ ಅಮೇಜಿಂಗ್ ವ್ಯಾಲಿ ರೆಸಾರ್ಟ್ ಜಾಗ ಮತ್ತೆ ಹೊಸ ವಿವಾದದಲ್ಲಿ ಸಿಲುಕಿದೆ. ಈ ಹಿಂದೆ ಈ ರೆಸಾರ್ಟ್ ನಿರ್ಮಿಸಲು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂದು ಅರಣ್ಯ ಇಲಾಖೆ ನ್ಯಾಯಾಲಯದ ಮೋರೆಹೋಗಿತ್ತು. ಇದೀಗ ಕೇವಲ ಅರಣ್ಯ ಭೂಮಿ ಮಾತ್ರವಲ್ಲ ಸರಕಾರಿ ಕಂದಾಯ ಇಲಾಖೆಯ 13.47 ಎಕರೆ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ವಿಷಯ ಕಂದಾಯ ಹಾಗೂ ಅರಣ್ಯ ಇಲಾಖೆಯ ಜಂಟಿ ಸರ್ವೆಯಲ್ಲಿ ಬಹಿರಂಗಗೊಂಡಿದೆ.
ಸರ್ವೆ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಎರಡು ವರುಷದ ಹಿಂದೆ ಬಳ್ಳಾರಿಯ ಅಂದಿನ ಎಸಿ ಅನಿರುದ್ಧ ಶ್ರವಣ್, ಅಂದಿನ ಡಿಸಿಯಾಗಿದ್ದ ಸಮೀರ್ ಶುಕ್ಲಾ ಅವರಿಗೆ ಪತ್ರೆ ಬರೆದಿದ್ದರು. ಬಳಿಕ ಅಂದಿನ ಡಿಸಿ ಸಮೀರ್ ಶುಕ್ಲಾ ಸಂಡೂರು ತಹಶೀಲ್ದಾರ್ ಅವರಿಗೆ ಪತ್ರ ಬರೆದಿದ್ದರು. ಕಳೆದ ಎರಡು ವರುಷಗಳಿಂದ ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ತೆರವು ಮಾಡಲು ಅಲ್ಲಿನ ತಹಶೀಲ್ದಾರ್ ಜಾಣಕುರುಡು ಮೌನ ವಹಿಸಿದ್ದಾರೆ. ಇದೀಗ ಅದರ ಪ್ರತಿ ಸೂವರ್ಣನ್ಯೂಸ್ ಗೆ ಲಭ್ಯವಾಗಿದೆ.
