ಹಾಡಹಗಲೇ ಮನೆಗೆ ನುಗ್ಗಿದ ದುಷ್ಕರ್ಮಿಯೊಬ್ಬ ಗೃಹಿಣಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಾಮಾಕ್ಷಿಪಾಳ್ಯ ಠಾಣಾ ಸರಹದ್ದಿನ ಸುಂಕದಟ್ಟೆಯ ಕೆಬ್ಬೆಹಳ್ಳದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ಬೆಂಗಳೂರು (ಡಿ.27): ಹಾಡಹಗಲೇ ಮನೆಗೆ ನುಗ್ಗಿದ ದುಷ್ಕರ್ಮಿಯೊಬ್ಬ ಗೃಹಿಣಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಾಮಾಕ್ಷಿಪಾಳ್ಯ ಠಾಣಾ ಸರಹದ್ದಿನ ಸುಂಕದಟ್ಟೆಯ ಕೆಬ್ಬೆಹಳ್ಳದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ತಸ್ಲೀಮಬಾನು (29) ಕೊಲೆಯಾದ ಗೃಹಿಣಿ.

ಮನೆಯಲ್ಲೆ ಯಾವುದೇ ವಸ್ತುಗಳು ಕಳವು ಆಗಿಲ್ಲ. ಪರಿಚಿತರೇ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆರೋಪಿ ಬಂಧನಕ್ಕೆ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.

ಮೂಲತಃ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ತಸ್ಲೀಮಾಬಾನು ಅವರು ಅಬ್ದುಲ್ ರಜಾಕ್ ಎಂಬುವರನ್ನು ವಿವಾಹವಾಗಿದ್ದು, ದಂಪತಿ ಸುಂಕದಕಟ್ಟೆ ಸಮೀಪದ ಕಬ್ಬೆಹಳ್ಳದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ದಂಪತಿಗೆ ಕ್ರಮವಾಗಿ ಏಳು ಮತ್ತು ನಾಲ್ಕು ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಅಬ್ದುಲ್ ರಜಾಕ್ ಗಿರಿನಗರದಲ್ಲಿರುವ ಕಾರು ಗ್ಯಾರೇಜ್ ವೊಂದಲ್ಲಿ ಮೆಕ್ಯಾನಿಕ್ ಆಗಿದ್ದು, ಸೋಮವಾರ ಬೆಳಗ್ಗೆ 9.30ರ ಸುಮಾರಿಗೆ ಕೆಲಸಕ್ಕೆ ತೆರಳಿದ್ದರು. ಮಕ್ಕಳು ಸುಂಕದಕಟ್ಟೆಯಲ್ಲಿರುವ ಶಾಂತಿಧಾಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

 ಅಪರಿಚಿತನ ಕೃತ್ಯ: ತಸ್ಲೀಮಾಬಾನು ಅವರ ವಾಸವಿದ್ದ ಕಟ್ಟಡಕ್ಕೆ ಬಂದಿದ್ದ ಅಪರಿಚಿತ ದುಷ್ಕರ್ಮಿಯೊಬ್ಬ ಮುಸ್ಲಿಂರಿರುವ ಮನೆ ಯಾವುದು ಎಂದು ಪಕ್ಕದ ಮನೆಯ ಮಹಿಳೆಯೊಬ್ಬರನ್ನು ಕೇಳಿದ್ದ. ಮಹಿಳೆ ತಸ್ಲೀಮಾಬಾನು ತೋರಿಸಿ ಬಾಗಿಲು ಹಾಕಿಕೊಂಡು ಒಳಗೆ ಹೋಗಿದ್ದರು.

ನಿತ್ಯ ತಸ್ಲೀಮಾಬಾನು ಮಕ್ಕಳನ್ನು ಕರೆ ತರಲು ಶಾಲೆಗೆ ಹೋಗುತ್ತಿದ್ದರು. ಶಾಲೆ ಬಿಟ್ಟು ಎಷ್ಟು ಹೊತ್ತಾದರೂ ತಾಯಿ ಬಾರದ ಕಾರಣ ಮಕ್ಕಳು ಅಲ್ಲಿಯೇ ಸಮೀಪ ಇರುವ ಮಾವನ ಮನೆಗೆ ತೆರಳಿದ್ದರು. ಸಂಜೆ ಮಕ್ಕಳು ಟ್ಯೂಟರಿಯಲ್ ತರಗತಿಗೆ ಹೋಗಬೇಕಾದ ಕಾರಣ ತಾವೇ ಮನೆಗೆ ಬಂದಿದ್ದು, ಮನೆ ಒಳಗಡೆ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ನೆರೆ ಮನೆ ನಿವಾಸಿ ಮಹಿಳೆಗೆ ತಿಳಿಸಿದ್ದರು.

ಮಹಿಳೆ ಬಂದು ನೋಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು. ಮನೆಯಲ್ಲಿ ಯಾವುದೇ ವಸ್ತುಗಳು ಕಳವು ಆಗಿಲ್ಲ. ಪರಿಚಯವಿರುವ ವ್ಯಕ್ತಿಯೇ ಮನೆಗೆ ಬಂದು ಕೃತ್ಯ ಎಸಗಿದ್ದಾನೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.