ಲೂಧಿಯಾನ(ಜೂನ್ 10): ಸಹೋದ್ಯೋಗಿಯ ಕಿರುಕುಳದ ಕಾರಣವೊಡ್ಡಿ ಮಹಿಳಾ ಪೊಲೀಸ್ ಪೇದೆಯೊಬ್ಬಳು ಠಾಣೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ಪಂಜಾಬ್'ನಲ್ಲಿ ವರದಿಯಾಗಿದೆ. 23 ವರ್ಷದ ಅಮನ್'ಪ್ರೀತ್ ಕೌರ್ ಆತ್ಮಹತ್ಯೆಗೆ ಶರಣಾದ ಪೇದೆಯಾಗಿದ್ದಾರೆ. ಲೂಧಿಯಾನದ ಗ್ರಾಮೀಣ ಭಾಗದಲ್ಲಿರುವ ನಿಧಾನ್ ಪೊಲೀಸ್ ಠಾಣೆಯ ಒಳಗೆಯೇ ಸೀಲಿಂಗ್ ಫ್ಯಾನ್'ಗೆ ನೇಣುಬಿಗಿದುಕೊಂಡು ಅಮನ್'ಪ್ರೀತ್ ಸಾವನ್ನಪ್ಪಿರುವುದು ತಿಳಿದುಬಂದಿದೆ.

ಅಮನ್'ಪ್ರೀತ್'ಳ ಸಾವಿಗೆ ಅವರ ಸಹೋದ್ಯೋಗಿಯೇ ಕಾರಣ ಎಂದು ಮೃತಳ ತಂದೆ ಆರೋಪಿಸಿದ್ದಾರೆ. ನಿರ್ಭಯ್ ಸಿಂಗ್ ಅವರ ಕಿರುಕುಳದಿಂದ ತಮ್ಮ ಮಗಳು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ, ಆಕೆಯ ತಂದೆಯು ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ನಿರ್ಭಯ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.