ಬೆಂಗಳೂರು :  ಕಳೆದು ಹೋಗಿದ್ದ ಮೊಬೈಲ್‌ ಹುಡುಕಿ ಹಿಂದಿರುಗಿಸಲು ಪೊಲೀಸರು 2500 ಲಂಚ ಪಡೆದರು ಎಂದು ಆರೋಪಿಸಿ ಯುವತಿಯೊಬ್ಬರು ಸಾಮಾಜಿಕ ಜಾಲತಾಣ ‘ಫೇಸ್‌ಬುಕ್‌’ ಪೇಜ್‌ನಲ್ಲಿ ಬರೆದು ನಗರ ಪೊಲೀಸ್‌ ಆಯುಕ್ತರ ಖಾತೆಗೆ ಟ್ಯಾಗ್‌ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ರಿತು ರಾವತ್‌ ಎಂಬ ಯುವತಿ ಪೊಲೀಸರ ಮೇಲೆ ಲಂಚದ ಆರೋಪ ಮಾಡಿದ್ದು, ಈ ಸಂಬಂಧ ಏ.23ರಂದು ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಂದೇ ಪ್ರಕರಣವನ್ನು ಪೊಲೀಸ್‌ ಆಯುಕ್ತರು ಸಂಬಂಧಪಟ್ಟಬೆಳ್ಳಂದೂರು ಠಾಣೆಗೆ ವರ್ಗಾಯಿಸಿದ್ದಾರೆ. ಆದರೆ, ಕಳೆದ ಐದು ದಿನಗಳಿಂದ ಯುವತಿಯನ್ನು ಠಾಣೆಗೆ ಬರುವಂತೆ ಸೂಚಿಸಿದರೂ ಠಾಣೆಗೆ ಬರುತ್ತಿಲ್ಲ. ಅವರ ಮೊಬೈಲ್‌ ಸಂಖ್ಯೆಯನ್ನು ನೀಡುತ್ತಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಲಂಚದ ಆರೋಪ: ನಾನು ನನ್ನ ಸ್ನೇಹಿತೆ ಜತೆ ಕ್ಯಾಬ್‌ನಲ್ಲಿ ಹೋಗುತ್ತಿದ್ದೆವು. ಕ್ಯಾಬ್‌ನಿಂದ ಇಳಿಯುವಾಗ ನನ್ನ ಸ್ನೇಹಿತೆ ಕ್ಯಾಬ್‌ನಲ್ಲಿ ಮೊಬೈಲ್‌ ಮರೆತು ಬಿಟ್ಟಿದ್ದಾಳೆ. ಸ್ನೇಹಿತೆ ಕ್ಯಾಬ್‌ನಲ್ಲಿ ಮೊಬೈಲ್‌ ಬಿಟ್ಟವಿಚಾರವನ್ನು ಬೆಳ್ಳಂದೂರು ಪೊಲೀಸರಿಗೆ ತಿಳಿಸಿ, ಕ್ಯಾಬ್‌ ಚಾಲಕನ ಮಾಹಿತಿ ನೀಡಿದ್ದೆವು. ಕೂಡಲೇ ಕ್ಯಾಬ್‌ ಚಾಲಕನಿಗೆ ಕರೆ ಮಾಡಿದ್ದ ಪೊಲೀಸರು ವಿಚಾರಿಸಿದ್ದರು. ಮರು ದಿನ ಕ್ಯಾಬ್‌ ಚಾಲಕ ಠಾಣೆಗೆ ಬಂದು ಮೊಬೈಲ್‌ ವಾಪಸ್‌ ಕೊಟ್ಟು ಹೋಗಿದ್ದ. ಮೊಬೈಲ್‌ ಪಡೆಯಲು ಠಾಣೆಗೆ ಹೋದಾಗ ಅಲ್ಲಿನ ಪೊಲೀಸರು .7000 ಮೊಬೈಲ್‌ಗೆ ಅರ್ಧ ಬೆಲೆ ಕೊಟ್ಟು ಮೊಬೈಲ್‌ ತೆಗೆದುಕೊಂಡು ಹೋಗುವಂತೆ ಸೂಚಿಸಿದರು. ಅಷ್ಟುಹಣ ಕೊಡಲು ಒಪ್ಪದಿದ್ದಾಗ .2500 ಹಣವನ್ನು ಕೊಡಲೇ ಬೇಕು. ನಮ್ಮ ಅಧಿಕಾರಿ ಕೇಳುತ್ತಾರೆ ಎಂದರು. ಹೀಗಾಗಿ .2500 ಹಣ ನೀಡಿ ಮೊಬೈಲ್‌ ಪಡೆದು ಠಾಣೆಯಿಂದ ಬಂದೆವು. ಜನರು ತಮಗೆ ಸಮಸ್ಯೆಯಾದರೆ ಎಲ್ಲಿ ದೂರು ನೀಡಬೇಕು? ನಿಜಕ್ಕೂ ಇದು ನಾಚಿಕೆಗೇಡಿನ ಸಂಗತಿ. ನೀವು (ಪೊಲೀಸರು) ಪ್ರಮಾಣಿಕವಾಗಿ ಕೆಲಸ ಮಾಡಿ ಎಂದು ಯುವತಿ ಫೇಸ್‌ಪೇಜ್‌ನಲ್ಲಿ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನವಿಗೆ ಸ್ಪಂದಿಸದ ಯುವತಿ

ಆಯುಕ್ತರ ಫೇಸ್‌ಬುಕ್‌ ನಿರ್ವಹಣೆ ಮಾಡುವ ಸಿಬ್ಬಂದಿ ‘ನಿಮ್ಮ ದೂರನ್ನು ಸಂಬಂಧಪಟ್ಟಬೆಳ್ಳಂದೂರು ಠಾಣೆಗೆ ವರ್ಗಾಯಿಸಿದ್ದೇವೆ. ಠಾಣಾಧಿಕಾರಿಯನ್ನು ಸಂಪರ್ಕಿಸಿ ಎಂದು ಪ್ರತಿಕ್ರಿಯಿಸಿದ್ದಾರೆ. ಪ್ರಕರಣ ಪಡೆದ ಬೆಳ್ಳಂದೂರು ಠಾಣೆ ಇನ್ಸ್‌ಪೆಕ್ಟರ್‌, ಠಾಣೆಗೆ ಬಂದು ಹಣ ಪಡೆದವರನ್ನು ಗುರುತಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡದಿದ್ದಾಗ ಹಿರಿಯ ಅಧಿಕಾರಿಗಳ ಮೊಬೈಲ್‌ ಸಂಖ್ಯೆಯನ್ನು ಕೂಡ ಖಾತೆಯಲ್ಲಿ ಹಾಕಿದ್ದಾರೆ. ಇದ್ಯಾವುದಕ್ಕೂ ಯುವತಿ ಪ್ರತಿಕ್ರಿಯೆ ನೀಡಿಲ್ಲ.

ದೂರಿನ ಹಿನ್ನೆಲೆಯಲ್ಲಿ ಠಾಣೆಯ ಪ್ರತಿಯೊಬ್ಬ ಸಿಬ್ಬಂದಿಯನ್ನು ಕೂಡ ವಿಚಾರಣೆಗೆ ನಡೆಸಲಾಗಿದೆ. ಯಾರು ಕೂಡ ಅಂತಹ ದೂರು ಪಡೆದಿಲ್ಲ. ಯುವತಿ ಠಾಣೆಗೆ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಯುವತಿ ಠಾಣೆಗೆ ಬಂದು ‘ಲಂಚದ ಹಣ’ ಪಡೆದಿದ್ದಾರೆ ಎನ್ನಲಾದ ವ್ಯಕ್ತಿಯ ಗುರುತು ಪತ್ತೆ ಮಾಡಲಿ. ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿ ದೂರು ನೀಡಿ, ಸುಮ್ಮನಾದರೆ ಹೇಗೆ ತನಿಖೆ ನಡೆಸುವುದು ಎಂದು ಅಧಿಕಾರಿ ತಿಳಿಸಿದರು.