Asianet Suvarna News Asianet Suvarna News

ಪಕ್ಷಿಗಳಿಂದ ಮಂಗನ ಕಾಯಿಲೆ ಭಾರತಕ್ಕೆ ಪ್ರವೇಶ! ವಿಕಿಲೀಕ್ಸ್ ದಾಖಲೆಯಿಂದ ಸ್ಪಷ್ಟವಾಯ್ತು ಸಂಶಯ

ಮಲೆನಾಡನ್ನು ಬಾಧಿಸುತ್ತಿರುವ ಮಂಗನ ಕಾಯಿಲೆಗೂ, ಭಾರತದ ಖ್ಯಾತ ಪಕ್ಷಿತಜ್ಞ  ಸಲೀಂ ಆಲಿಗೂ ಸಂಬಂಧವಿದೆಯೇ ಎಂದು ಕೇಳಿದರೆ ಯಾರಾದರೂ ಒಂದೇ ಮಾತಿಗೆ ಇಲ್ಲವೆನ್ನಬಹುದು. ಆದರೆ ವಿಕಿಲೀಕ್ಸ್ ಕೆಲ ವರ್ಷಗಳ ಹಿಂದೆ ಬಿಡುಗಡೆ ಮಾಡಿರುವ ದಾಖಲೆಯು ಇವರಿಬ್ಬರ ನಡುವೆ ಸಂಬಂಧವನ್ನು ಸಾಕ್ಷೀಕರಿಸಿದೆ.

Kyasanur Forest Disease Come From Birds

ಶಿವಮೊಗ್ಗ (ಜ.25):  ಮಲೆನಾಡನ್ನು ಬಾಧಿಸುತ್ತಿರುವ ಮಂಗನ ಕಾಯಿಲೆಗೂ, ಭಾರತದ ಖ್ಯಾತ ಪಕ್ಷಿತಜ್ಞ  ಸಲೀಂ ಆಲಿಗೂ ಸಂಬಂಧವಿದೆಯೇ ಎಂದು ಕೇಳಿದರೆ ಯಾರಾದರೂ ಒಂದೇ ಮಾತಿಗೆ ಇಲ್ಲವೆನ್ನಬಹುದು. ಆದರೆ ವಿಕಿಲೀಕ್ಸ್ ಕೆಲ ವರ್ಷಗಳ ಹಿಂದೆ ಬಿಡುಗಡೆ ಮಾಡಿರುವ ದಾಖಲೆಯು ಇವರಿಬ್ಬರ ನಡುವೆ ಸಂಬಂಧವನ್ನು ಸಾಕ್ಷೀಕರಿಸಿದೆ.

ಕ್ಯಾಸನೂರು ಕಾಡಿನ ಕಾಯಿಲೆ ಎಂದೂ ಕರೆಯಲ್ಪಡುವ ಮಂಗನ ಕಾಯಿಲೆ ಹೊರರಾಜ್ಯಗಳಿಂದ ವಲಸೆ ಬರುವ ಪಕ್ಷಿಗಳ ಮೂಲಕ ಭಾರತಕ್ಕೆ ಪ್ರವೇಶಿಸಿರಬಹುದು ಎಂಬ ಸಂಶಯವನ್ನು ಸಲೀಂ ಆಲಿ ವ್ಯಕ್ತಪಡಿಸಿದ್ದು, ಈ ಮೂಲಕ ನಮ್ಮ ದೇಶದ ಮೇಲೆ ಜೈವಿಕ ದಾಳಿ ನಡೆದಿರುವ ಸಾಧ್ಯತೆಯನ್ನು ಅವರು ಊಹಿಸಿದ್ದಾರೆ.

ಮಂಗನ ಕಾಯಿಲೆ ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತದೆ. ಕಳೆದ ಡಿಸೆಂಬರ್‌ನಲ್ಲಿ ಮಹಿಳೆಯೊಬ್ಬರು ತೀರ್ಥಹಳ್ಳಿ ತಾ ಘಂಟೆಜನಗಲ್ ಗ್ರಾಮದಲ್ಲಿ ಸಾವು ಕಂಡಿದ್ದಾರೆ. ಸೊರಬ ತಾ ಉಳವಿ ಹೋಬಳಿಯ ಕಟ್ಟಿನಕೆರೆಯಲ್ಲಿ ಸಾವು ಕಂಡ ಮಂಗನಲ್ಲಿ ಕೆಎಫ್‌'ಡಿ ವೈರಾಣು ಪತ್ತೆಯಾಗಿದೆ. ಮಲೆನಾಡಿನ ತಾಲೂಕುಗಳಲ್ಲಿ ಮಂಗಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಮಂಗನ ಕಾಯಿಲೆ ಹೊರ ದೇಶಗಳಿಂದ ಕಲಿಸಲ್ಪಟ್ಟ ವೈರಾಣುಗಳಿಂದ ಹುಟ್ಟಿರುವ ಕಾಯಿಲೆ ಇರಬಹುದೇ ಎಂಬ ಚರ್ಚೆ ಭುಗಿಲ್ಲೆದ್ದಿದೆ. ಈ ಚರ್ಚೆಗೆ ಮೂಲ ಆಧಾರವಾಗಿರುವುದು ವಿಕಿಲೀಕ್ಸ್ ಬಿಡುಗಡೆ ಮಾಡಿರುವ ಒಂದು ದಾಖಲೆ.

ವಿಕಿಲೀಕ್ಸ್‌ನಲ್ಲಿ ಏನೇನಿದೆ:

ನವದೆಹಲಿಯ ಅಮೇರಿಕಾ ರಾಯಭಾರ ಕಚೇರಿಯಿಂದ ವಾಷಿಂಗ್ಟನ್ ಡಿಸಿಯಲ್ಲಿರುವ ಕಚೇರಿಗೆ ಬರೆದ ಪತ್ರವನ್ನು ವಿಕಿಲೀಕ್ಸ್ ಬಿಡುಗಡೆ ಮಾಡಿದೆ. ಇದು 1974 ರಲ್ಲಿ ಬರೆದ ಪತ್ರ. ಈ ಪತ್ರವು ‘ಮೈಸೂರು ಪ್ರಾಂತ್ಯದಲ್ಲಿ ವ್ಯಾಪಕವಾಗಿರುವ ಕ್ಯಾಸನೂರು ಕಾಡಿನ ಕಾಯಿಲೆ’ ಬಗ್ಗೆ ಪಕ್ಷಿ ತಜ್ಞ ಸಲೀಂ ಆಲಿ ಜಿನಿವಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ವಿವರಗಳಿವೆ.

ಸಮಾವೇಶದಲ್ಲಿ ಸಲೀಂ ಆಲಿ ಈ ಕಾಯಿಲೆಗೆ ಕಾರಣವಾಗುವ ಮಂಗಗಳಲ್ಲಿ ಇದ್ದ ವಿಷಾಣುಗಳು ರಷ್ಯಾದ ವಸಂತ ಗ್ರೀಷ್ಮ ಮಸ್ತಿಷ್ಕ ರೋಗ’ ವೈರಾಣುವಿಗೆ ಅತಿ ಸಮೀಪದ ವಿಶಿಷ್ಟ ವೈರಾಣು ಎಂದು ಗುರುತಿಸಿದ್ದರು. ಈ ವೈರಾಣುಗಳು ರಷ್ಯಾದಿಂದ ಸೊರಬಕ್ಕೆ ವಲಸೆ ಬರುವ (ಇದೇ ತಾಲೂಕಿನಲ್ಲಿರುವ ಗುಡವಿ ಪಕ್ಷಿಧಾಮಕ್ಕೆ ರಷ್ಯಾದ ಪಕ್ಷಿಗಳು ಪ್ರತಿವರ್ಷ ಬರುತ್ತವೆ) ಪಕ್ಷಿಗಳ ರಕ್ತ ಪರೀಕ್ಷೆ ಮಾಡುವ ಬಗ್ಗೆ ಒಲವು ತೋರಿದ್ದರು. ರಷ್ಯಾದಲ್ಲಿರುವ ಹಕ್ಕಿಗಳು, ಅಲ್ಲಿಂದ ವಲಸೆ ಬರುವ ಹಕ್ಕಿಗಳ ಪರೀಕ್ಷೆ ಕೆಲ ಕಾಲ ನಡೆದಿತ್ತು. ಅಂದಿನ ಯುಎಸ್‌'ಎಸ್‌'ಆರ್ ಒಮಾಸ್ಕ್‌'ನಲ್ಲಿದ್ದ ಸಂಶೋಧನಾಲಯಕ್ಕೆ ಪೂನಾದ ಪ್ರಯೋಗಾಲಯದಲ್ಲಿ ನಡೆದ ಸಂಶೋಧನೆಗಳ ವರದಿಯನ್ನೂ ಕಳಿಸಲಾಗಿತ್ತು. ಈ ಯೋಜನೆ ಸಂಶೋಧನೆ ನಡೆಸಲು 1966 ರ ವರೆಗೆ ವಿಶ್ವ ಆರೋಗ್ಯ ಸಂಸ್ಥೆಯು 5, 000 ಡಾಲರ್ ನೆರವನ್ನು ಒದಗಿಸಿತ್ತು. ಆದರೆ ಸಂಶೋಧನೆ ಪೂರ್ಣವಾಗಲಿಲ್ಲ.

ಏನಿದು ಮಂಗನ ಕಾಯಿಲೆ?

ಸೊರಬ ತಾಲೂಕಿನ ಕ್ಯಾಸನೂರು ರಕ್ಷಿತಾರಣ್ಯ ಹಾಗೂ ಸುತ್ತಮುತ್ತಲಿನ ಕಾಡುಗಳಲ್ಲಿ ಮೊಟ್ಟಮೊದಲು 1957  ರಲ್ಲಿ ಈ ಕಾಯಿಲೆ ಕಾಣಿಸಿಕೊಂಡಾಗ ಇದಕ್ಕೆ ಕ್ಯಾಸನೂರು ಫಾರೆಸ್ಟ್ ಡಿಸೀಜ್ ಎಂದೇ ಹೆಸರಿಡಲಾಯಿತು. ಮಂಗಗಳ ಮೂಲಕ ಪಸರಿಸುವ ಮಾಹಿತಿ ಎಲ್ಲೆಡೆ ಹರಡಿದ ನಂತರ ಮಂಗನ ಕಾಯಿಲೆ ಎಂದು ಕರೆಸಿಕೊಂಡಿತು.

ಮೊದಲ ಕೆಲ ವರ್ಷ ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಈ ಕಾಯಿಲೆ ನಂತರ ಮಲೆನಾಡಿನ ವಿವಿಧ ಭಾಗಗಳಿಗೂ ವಿಸ್ತರಿಸಿತು. ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗೂ ಹರಡಿ ಹಲವರನ್ನು ಬಲಿ ತೆಗೆದುಕೊಂಡಿತು. ಈಗಲೂ ಕಾಯಿಲೆಯ ಆಟಾಟೋಪ ನಿಂತಿಲ್ಲ. ರಾಜ್ಯದಲ್ಲಿ 1983-84 ರಲ್ಲಿ ಅತಿ ಹೆಚ್ಚು ಎಂದರೆ, 2,167  ಜನರಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿತ್ತು. ಆ ವರ್ಷ 69 ಮಂದಿ ಸಾವು ಕಂಡಿದ್ದರು. ಈಗಲೂ ವರ್ಷಕ್ಕೆ ಒಂದೆರಡು ಸಾವುಗಳು ಅಲ್ಲಲ್ಲಿ ಆಗುತ್ತಲೇ ಇವೆ. ಜಾನುವಾರುಗಳ ರಕ್ತ ಹೀರುವ ಉಣ್ಣೆ ಹುಳುಗಳ ಮೂಲಕ ವೈರಾಣುಗಳು ಮನುಷ್ಯನ ದೇಹವನ್ನು ಪ್ರವೇಶಿಸುತ್ತವೆ. ಆರೋಗ್ಯ ಇಲಾಖೆ ಪ್ರತಿ ವರ್ಷ ಮಲೆನಾಡ ಪ್ರದೇಶದಲ್ಲಿ ಮಂಗನ ಕಾಯಿಲೆ ನಿರೋಧಕ ಲಸಿಕೆಗಳನ್ನು ಜನರಿಗೆ ಹಾಕುತ್ತಿದೆ.

ಗುಣ ಲಕ್ಷಣಗಳು

ವಿಪರೀತ ಜ್ವರ, ಕಣ್ಣು ಕೆಂಪಾಗುವುದು, ವಾಂತಿ, ತಲೆನೊವು, ಮೂಗು, ಕರುಳು ಮತ್ತು ಚರ್ಮದಲ್ಲಿ ರಕ್ತಸ್ರಾವ, ಕೀಲುನೊವು ಹಾಗೂ ಮಾಂಸ ಖಂಡಗಳಲ್ಲಿ ನೊವು ಕಾಣಿಸಿಕೊಳ್ಳುತ್ತದೆ. ಜ್ವರ ಉಲ್ಬಣಿಸಿದರೆ ಹತೋಟಿ ಸುಲಭವಲ್ಲ. ಇದರಿಂದ ಬಳಲಿಯೆ ರೋಗಿಗಳು ಮೃತಪಡುತ್ತಾರೆ.  ಮುಂಗಾರಿನ ಜೂನ್ ತಿಂಗಳಿಂದ ಸೆಪ್ಟೆಂಬರ್ ಅವಧಿಯಲ್ಲಿ ಪ್ರೌಢಾವಸ್ಥೆ ತಲುಪುವ ಉಣ್ಣೆಯು ಅಕ್ಟೊಬರ್‌ನಿಂದ ಡಿಸೆಂಬರ್ ವೇಳೆಗೆ ಪ್ರೌಢ ಲಾರ್ವಾ ಆಗಿ ರೂಪುಗೊಳ್ಳುತ್ತದೆ. ಜನವರಿಯಿಂದ ಮೆ ಅವಧಿಯಲ್ಲಿ ಕೆಎಫ್‌'ಡಿ ಸಾಂಕ್ರಾಮಿಕ ವೈರಾಣುವಾಗಿ ಪರಿವರ್ತನೆಗೊಂಡು ಮಂಗ, ಮೊಲ ಮುಂತಾದ ಪ್ರಾಣಿಗಳ ಮೂಲಕ ಮನುಷ್ಯನ ದೇಹ ಪ್ರವೇಶಿಸುತ್ತದೆ. ಮಕ್ಕಳು, ವಯೊವೃದ್ಧರು, ಕಾಡಂಚಿನಲ್ಲಿ ವಾಸಿಸುವವರು, ಕಾಡಿನೊಂದಿಗೆ ಸತತ ಸಂಪರ್ಕದಲ್ಲಿರುವವರಿಗೆ ಈ ಕಾಯಿಲೆ ಬೇಗ ಬರುತ್ತದೆ.

-ವರದಿ: ಹೊನ್ನಾಳಿ ಚಂದ್ರಶೇಖರ್

ಫೋಟೋ ಕೃಪೆ: ಡೆಕ್ಕನ್ ಕ್ರಾನಿಕಲ್

 

 

 

Follow Us:
Download App:
  • android
  • ios