ಉನ್ನತ ಶಿಕ್ಷಣ ಖಾತೆ ನಿರಾಕರಿಸಿದ್ದ ಸಚಿವ ಜಿ.ಟಿ.ದೇವೇಗೌಡ ಅವರಿಗೆ ಅಬಕಾರಿ ಖಾತೆ ಸಿಗುವುದು ನಿಶ್ಚಿತವಾಗಿದ್ದು, ಬರುವ ಸೋಮವಾರ ಆದೇಶ ಹೊರಬೀಳುವ ಸಾಧ್ಯತೆಯಿದೆ. 

ಬೆಂಗಳೂರು :  ಉನ್ನತ ಶಿಕ್ಷಣ ಖಾತೆ ನಿರಾಕರಿಸಿದ್ದ ಸಚಿವ ಜಿ.ಟಿ.ದೇವೇಗೌಡ ಅವರಿಗೆ ಅಬಕಾರಿ ಖಾತೆ ಸಿಗುವುದು ನಿಶ್ಚಿತವಾಗಿದ್ದು, ಬರುವ ಸೋಮವಾರ ಆದೇಶ ಹೊರಬೀಳುವ ಸಾಧ್ಯತೆಯಿದೆ.

ಆರಂಭದಲ್ಲಿ ಉನ್ನತ ಶಿಕ್ಷಣ ಖಾತೆ ಬದಲು ಅಬಕಾರಿ ಕೊಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಹೇಳಿದಾಗ ಅದನ್ನೂ ನಿರಾಕರಿಸಿದ್ದ ದೇವೇಗೌಡರು ಜನರೊಂದಿಗೆ ಸಂಪರ್ಕದಲ್ಲಿರುವ ಖಾತೆ ನೀಡುವಂತೆ ಮನವಿ ಮಾಡಿದ್ದರು.

ಆದರೆ, ಸಹಕಾರ ಖಾತೆಯನ್ನು ಬಿಟ್ಟುಕೊಡಲು ಬಂಡೆಪ್ಪ ಕಾಶೆಂಪೂರ್‌ ಒಪ್ಪದೇ ಇದ್ದುದರಿಂದ ದೇವೇಗೌಡರು ಅನಿವಾರ್ಯವಾಗಿ ಇದೀಗ ಅಬಕಾರಿ ಖಾತೆಯನ್ನೇ ಇಟ್ಟುಕೊಳ್ಳಬೇಕಾಗಿದೆ.

ಈ ಬಗ್ಗೆ ಶುಕ್ರವಾರ ರಾತ್ರಿ ಕನ್ನಡಪ್ರಭ ದೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಜಿ.ಟಿ.ದೇವೇಗೌಡರು ತಮಗೆ ಅಬಕಾರಿ ಖಾತೆ ನೀಡುವುದನ್ನು ಖಚಿತಪಡಿಸಿದರು. ನಾನು ಉನ್ನತ ಶಿಕ್ಷಣ ಖಾತೆ ಬೇಡ ಎಂದಿದ್ದೆ. ಹೀಗಾಗಿ, ಅಬಕಾರಿ ಖಾತೆ ನೀಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ನಾನೂ ಇದಕ್ಕೆ ಒಪ್ಪಿಕೊಂಡಿದ್ದೇನೆ ಎಂದು ತಿಳಿಸಿದರು.