Asianet Suvarna News Asianet Suvarna News

ಅಂತೂ ಇಂತೂ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ ಸಿಎಂ ಕುಮಾರಸ್ವಾಮಿ

ಕನ್ನಡಪ್ರಭ ಮುಖಪುಟದಲ್ಲಿ ಗುರುವಾರ ಪ್ರಕಟವಾಗಿದ್ದ ಕಾವೇರಿಯಲ್ಲಿ ನೀರುಂಟು, ರೈತರಿಗಿಲ್ಲ ಎಂಬ ವಿಶೇಷ ವರದಿಗೆ ತಕ್ಷಣ ಸ್ಪಂದಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ತಕ್ಷಣ ಮಂಡ್ಯ, ಮೈಸೂರು ಜಿಲ್ಲೆಗಳ ನಾಲೆಗಳಿಗೆ ನೀರು ಹರಿಸುವಂತೆ ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.
 

Kumaraswamy orders release of Cauvery water for crops in Mandya

ಮಂಡ್ಯ: ಅಂತೂ ಇಂತೂ ಸಿಎಂ ಕುಮಾರಸ್ವಾಮಿ ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಾರೆ. 

ಕನ್ನಡಪ್ರಭ ಮುಖಪುಟದಲ್ಲಿ ಗುರುವಾರ ಪ್ರಕಟವಾಗಿದ್ದ ಕಾವೇರಿಯಲ್ಲಿ ನೀರುಂಟು, ರೈತರಿಗಿಲ್ಲ ಎಂಬ ವಿಶೇಷ ವರದಿಗೆ ತಕ್ಷಣ ಸ್ಪಂದಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ತಕ್ಷಣ ಮಂಡ್ಯ, ಮೈಸೂರು ಜಿಲ್ಲೆಗಳ ನಾಲೆಗಳಿಗೆ ನೀರು ಹರಿಸುವಂತೆ ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.

ಇದರ ಅನ್ವಯ ಗುರುವಾರ ರಾತ್ರಿ 8 ಗಂಟೆಯಿಂದ ಜಿಲ್ಲೆಯ ವಿ.ಸಿ.ಸೇರಿದಂತೆ ಎಲ್ಲಾ ನಾಲೆಗಳಿಗೆ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ.  ವಿಶೇಷ ವರದಿಗೆ ಸ್ಪಂದಿಸಿ, ಕನ್ನಡಪ್ರಭದೊಂದಿಗೆ ಮಾತನಾಡಿದ ಕುಮಾರಸ್ವಾಮಿ,  ರಾಜ್ಯದ ರೈತರ ಹಿತಕಾಯಲು ನಾನು ಹಿಂದೆ ಮುಂದೆ ನೋಡುವ ಅಥವಾ ನಾಲೆಗೆ ನೀರು ಬಿಡುಗಡೆ ಮಾಡಲು ಅರ್ಜಿ ಹಾಕಿಕೊಂಡು ಕೂರುವ ಪ್ರಶ್ನೆಯೇ ಇಲ್ಲ. ರೈತರ ಕಬ್ಬಿನ ಬೆಳೆ ಒಣಗುತ್ತಿದೆ. ಆ ಬೆಳೆಯನ್ನು  ಕಾಪಾಡಲು ಹಾಗೂ ಕೆರೆ ಕಟ್ಟೆಗಳನ್ನು ತುಂಬಿಸಿಕೊಳ್ಳಲು ಕೂಡಲೇ ನೀರು ಬಿಡುವಂತೆ ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೂ ಸೂಚನೆ ನೀಡಿದ್ದೇನೆ ಎಂದರು. 

ಸಮಸ್ಯೆಯಾದರೆ ಎದುರಿಸುವೆ: ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಬೆಳೆಗೆ ನೀರಿನ ಅಗತ್ಯತೆ ಇದೆ ಎಂಬ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳು ನೀಡರಲಿಲ್ಲ. ಕನ್ನಡಪ್ರಭದಿಂದ ಸವಿಸ್ತಾರವಾಗಿ ನೀರಿನ ಅಗತ್ಯತೆ ಮತ್ತು ಬೆಳೆಗಳಿಗೆ ಎದುರಾಗಿರುವ ಸಮಸ್ಯೆಗಳ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿದೆ. ಈ ಬೆಳಗ್ಗೆ ಮಂಡ್ಯ ಜಿಲ್ಲಾಧಿಕಾರಿಗಳೊಂದಿಗೂ ನಾನು ಮಾತನಾಡಿದ್ದೇನೆ. ಕಾವೇರಿ ನಿರ್ವಹಣೆ ಮಂಡಳಿ ಆದೇಶ ಬರುವವರೆಗೆ ನಾವು ಕಾಯಲು ಆಗುವುದಿಲ್ಲ. ನಮ್ಮ ರೈತರಿಗೂ ಅನುಕೂಲವಾಗುವಂತೆ ಕೆರೆ ನಾಲೆಗಳಿಗೆ ನೀರು ಬಿಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದೇನೆ. ಕಾವೇರಿ ನದಿ ನೀರಿನ ವಿಚಾರವಾಗಿ ಯಾವುದೇ ಕಾನೂನು ಸಮಸ್ಯೆ ಬಂದರೂ ನಾನು ನೋಡಿಕೊಳ್ಳುತ್ತೇನೆ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. 

ಯಾವುದೇ ರೀತಿಯ ಕಾನೂನು ತೊಡಕಾದರೂ ನಾನೇ ಫೇಸ್ ಮಾಡುತ್ತೇನೆ. ಹೇಳಿದಷ್ಟು ಮಾಡಿ, ರೈತರ ಕಷ್ಟಗಳಿಗೆ ಸ್ಪಂದಿಸಿ ಎಂದು ಹೇಳಿದ್ದೇನೆ ಎಂದು ತಿಳಿಸಿದರು. ಕಳೆದ ನಾಲ್ಕೈದು ದಿನಗಳ ಹಿಂದೆ ತಮಿಳುನಾಡಿಗೆ ಕಬಿನಿಯಿಂದ 15 ರಿಂದ 20 ಟಿಎಂಸಿ ನೀರನ್ನು ನದಿ ಮೂಲಕ ಬಿಟ್ಟಿದ್ದೇವೆ. ಆಗ ನಾವು ಯಾರನ್ನೂ ಕೇಳಿರಲಿಲ್ಲ. ಈಗ ನಮ್ಮ ರಾಜ್ಯದ ರೈತ ಹಿತ ಕಾಯಲು ನಾಲೆಗಳಿಗೆ ನೀರು ಬಿಡಬೇಕಾದರೆ ಮೀನಮೇಷ ಎಣಿಸಬೇಕೆ ಎಂದು ಪ್ರಶ್ನೆ ಮಾಡಿದರು.

Follow Us:
Download App:
  • android
  • ios