ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಸಂಘಟಿಸುವ ಕಾರಣಕ್ಕಾಗಿ ಹುಬ್ಬಳ್ಳಿಯಲ್ಲಿ ಮನೆ ಮಾಡುತ್ತಿರುವ ಕುಮಾರಸ್ವಾಮಿ

ಮಂಡ್ಯ(ಸೆ.01): ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಸಂಘಟಿಸುವ ಕಾರಣಕ್ಕಾಗಿ ಹುಬ್ಬಳ್ಳಿಯಲ್ಲಿ ಮನೆ ಮಾಡಲಿದ್ದೇನೆ. ಶೀಘ್ರದಲ್ಲೆ ಗೃಹ ಪ್ರವೇಶ ಮಾಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ , ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬುಧವಾರ ತಿಳಿಸಿದರು.

ನಗರದ ಸರ್ ಎಂ.ವಿ. ಕ್ರೀಡಾಂಗಣದಲ್ಲಿ ಸೆ.೨ರಂದು ನಡೆಯುವ ಜಾಗ್ವಾರ್ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದ ಹಿನ್ನೆಲೆಯಲ್ಲಿ ವೇದಿಕೆ ಸಿದ್ದತೆ ಕುರಿತು ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಮುಂಬರುವ ವಿಧಾನಸಭಾ ಚುನಾವಣೆ ವೇಳೆಗೆ ಜೆಡಿಎಸ್ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರಬೇಕು. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ವಾಸವಿದ್ದು ಪಕ್ಷ ಸಂಘಟನೆಯಲ್ಲಿ ತೊಡಗುವುದಾಗಿ ಹೇಳಿದರು.

ಬಿಬಿಎಂಪಿ ಅಂತಿಮವಾಗಿಲ್ಲ

ಬೃಹತ್ ಬೆಂಗಳೂರು ಮಹಾನಗರ ಮೇಯರ್ ಚುನಾವಣೆ ಸಂಬಂಧ ಕಾಂಗ್ರೆಸ್ , ಬಿಜೆಪಿ ಸೇರಿದಂತೆ ಯಾವುದೇ ಪಕ್ಷದೊಂದಿಗೆ ಇದುವರೆಗೂ ಯಾವುದೇ ಮಾತುಕತೆ ನಡೆದಿಲ್ಲ. ಯಾರನ್ನು ಬೆಂಬಲಿಸಬೇಕು ಎಂಬ ಬಗ್ಗೆ ಅಂತಿಮ ತೀರ್ಮಾನವಾಗಿಲ್ಲ ಎಂದು ತಿಳಿಸಿದರು.

೮ ಶಾಸಕರ ಬಗ್ಗೆ ಪ್ರಶ್ನೆ ಬೇಡ

ಜೆಡಿಎಸ್ ಪಕ್ಷದಿಂದ ಅಮಾನತ್ತಾಗಿರುವ ೮ ಮಂದಿ ಶಾಸಕರ ಬಗ್ಗೆ ಯಾವುದೇ ಚರ್ಚೆ ಬೇಡ. ಇದು ಮುಗಿದ ಅಧ್ಯಾಯ. ಈ ಶಾಸಕರ ಬಗ್ಗೆ ಇನ್ನು ಮುಂದೆ ನನ್ನನ್ನು ಏನು ಕೇಳಬೇಡಿ ಎಂದು ಮನವಿ ಮಾಡಿದರು.

೧೦ ಸಾವಿರ ಪರಿಹಾರ ಕೊಡಿ

ಕೆಆರ್‌ಎಸ್‌ನಿಂದ ಈ ಬಾರಿ ಬೆಳೆ ಬೆಳೆಯಲು ನೀರು ಕೊಡದಿದ್ದರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ ಸರ್ಕಾರ ರೈತರ ಪ್ರತಿ ಎಕರೆಗೆ ೧೦ ಸಾವಿರ ರು .ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ಸಂಕಷ್ಟದಲ್ಲಿರುವವರಿಗೆ ನೆರವು

ಮಂಡ್ಯದಲ್ಲಿ ಸೆ.೨ ರಂದು ನಡೆಯುವ ನಡೆಯುವ ಜಾಗ್ವಾರ್ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಹಿರಿಯ ನಟರು, ಹುತಾತ್ಮ ಯೋಧ ಕುಟುಂಬಗಳಿಗೆ ಗೌರವ ಸಲ್ಲಿಸಿ ನೆರವು ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಿತ್ರರಂಗದ ಹಿರಿಯ ನಟರು, ಸಿನಿಮಾದಲ್ಲಿ ನಟಿಸಿರುವ ನಟ, ನಟಿಯರು ಸೇರಿದಂತೆ ಎಲ್ಲರು ಭಾಗವಹಿಸಲಿದ್ದಾರೆ. ಸುಮಾರು ೨ ರಿಂದ ೩ ಲಕ್ಷ ಜನರ ಆಗಮಿಸುವ ನಿರೀಕ್ಷೆ ಇದೆ. ಸಮಾರಂಭದಲ್ಲಿ ಭಾಗವಹಿಸುವ ಎಲ್ಲರಿಗೂ ನೀರು, ಸಿಹಿ ಹಂಚಲಾಗುವುದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು