Asianet Suvarna News Asianet Suvarna News

ಜೆಡಿಎಸ್ ಅಧ್ಯಕ್ಷ ಪಟ್ಟ ಯಾರಿಗೆ..?

ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಹೈರಾಣದಲ್ಲಿ ಸಿಲುಕಿದ್ದು, ಸದ್ಯ ಜೆಡಿಎಸ್ ಅಧ್ಯಕ್ಷ ಯಾರಾಗಲಿದ್ದಾರೆ ಎನ್ನುವ ವಿಚಾರವಾಗಿ ನಿರ್ಣಯ ತೆಗೆದುಕೊಳ್ಳಲಾಗಿದೆ. 

Kumaraswamy Continue As JDS President

ಬೆಂಗಳೂರು : ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಹೈರಾಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನೇ ಜೆಡಿಎಸ್‌ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ನಿರ್ಣಯ ಕೈಗೊಳ್ಳಲಾಗಿದೆ.

ಮಂಗಳವಾರ ಪಕ್ಷದ ಕಚೇರಿಯಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅಧ್ಯಕ್ಷತೆಯಲ್ಲಿ ನಡೆದ ಹಿರಿಯ ಮುಖಂಡರ ಸಭೆಯಲ್ಲಿ ಕುಮಾರಸ್ವಾಮಿ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು ಎಂದು ತಿಳಿದು ಬಂದಿದೆ.

ಸಮ್ಮಿಶ್ರ ಸರ್ಕಾರವನ್ನು ಸಮರ್ಪಕವಾಗಿ ನಡೆಸಿಕೊಂಡು ಹೋಗಬೇಕಿರುವ ಕಾರಣ ಕುಮಾರಸ್ವಾಮಿ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಬಿಡುಗಡೆ ಮಾಡುವ ಬಗ್ಗೆ ವಿಷಯ ಪ್ರಸ್ತಾಪವಾಯಿತು. ಆದರೆ, ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆಗಿಂತ ಹೆಚ್ಚಾಗಿ ಸ್ಥಳೀಯ ಸಂಸ್ಥೆಯ ಚುನಾವಣೆಯನ್ನು ಎದುರಿಸಬೇಕಾಗಿದೆ. ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವ ಮತ್ತು ಜನರನ್ನು ಸೆಳೆಯುವ ನಾಯಕತ್ವ ಗುಣಗಳನ್ನು ಕುಮಾರಸ್ವಾಮಿ ಅವರು ಹೊಂದಿದ್ದಾರೆ. ಹೀಗಾಗಿ ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವುದು ಸೂಕ್ತ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾದ ಕಾರಣ ಕುಮಾರಸ್ವಾಮಿ ಅವರನ್ನು ಮುಂದುವರಿಸುವ ತೀರ್ಮಾನ ಕೈಗೊಳ್ಳಲಾಯಿತು ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಹುದ್ದೆಯ ಹೊಣೆಗಾರಿಕೆಯ ಜತೆಗೆ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯೂ ಕುಮಾರಸ್ವಾಮಿಯ ಹೆಗಲ ಮೇಲಿದೆ. ಅಲ್ಲದೇ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಸಹ ತಾವು ಪಕ್ಷದ ಅಧ್ಯಕ್ಷ ಸ್ಥಾನದ ಜತೆಗೆ ಮುಖ್ಯಮಂತ್ರಿಯಾಗಿ ಚುನಾವಣೆ ಎದುರಿಸಿದ್ದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಜೆಡಿಎಸ್‌ ಕಚೇರಿಗೆ ಬರುವಂತೆ ಸಚಿವರಿಗೆ ಗೌಡರ ಸೂಚನೆ

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿರುವ ಪಕ್ಷದ ನಾಯಕರು ವಾರಕ್ಕೊಮ್ಮೆ ಪಕ್ಷದ ಕಚೇರಿಗೆ ಆಗಮಿಸಿ ಕಾರ್ಯಕರ್ತರ ಸಭೆ ನಡೆಸಬೇಕು. ಪಕ್ಷವನ್ನು ಬಲಗೊಳಿಸಲು ಇದು ಅತ್ಯಗತ್ಯ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಖಡಕ್‌ ಸೂಚನೆ ನೀಡಿದ್ದಾರೆ.

ಸಭೆಯಲ್ಲಿ ಪಕ್ಷದ ಬಲವರ್ಧನೆ ಕುರಿತು ಗಂಭೀರವಾಗಿ ಚರ್ಚಿಸಿ, ಸಚಿವ ಸ್ಥಾನದ ಜತೆಗೆ ಪಕ್ಷದ ಸಂಘಟನೆಯತ್ತಲೂ ನಾಯಕರು ಗಮನಹರಿಸಬೇಕು. ಸಚಿವರಾದ ಮಾತ್ರಕ್ಕೆ ಕಚೇರಿಗೆ ಬರುವುದನ್ನು ನಿಲ್ಲಿಸಬಾರದು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಧಿಕ ಮತಗಳನ್ನು ಪಡೆಯುವ ನಿಟ್ಟಿನಲ್ಲಿ ಸಚಿವರು ಹೆಚ್ಚಿನ ಗಮನ ಹರಿಸಬೇಕು. ಪಕ್ಷವನ್ನು ಸಂಘಟನೆಗೊಳಿಸುವಲ್ಲಿ ಸಚಿವರು ತೊಡಗಿಸಿಕೊಳ್ಳಬೇಕು ಎಂಬ ನಿರ್ದೇಶನವನ್ನು ಮಂಗಳವಾರ ನಡೆದ ಸಭೆಯಲ್ಲಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಪಕ್ಷದ ಸಂಘಟನೆಗಾಗಿ ಅಗತ್ಯ ಬಿದ್ದರೆ ವಿಭಾಗವಾರು ಸಮಿತಿಗಳನ್ನು ರಚಿಸಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಬೇಕು. ಜಿಲ್ಲಾಮಟ್ಟಮತ್ತು ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ಪ್ರತ್ಯೇಕ ರಚಿಸಿ ಪಕ್ಷದ ಬಲವರ್ಧನೆಗೆ ಸ್ಥಳೀಯ ಮಟ್ಟದ ನಾಯಕರು ಒತ್ತು ನೀಡಬೇಕು. ಪಕ್ಷವು ಎಲ್ಲೆಲ್ಲಿ ದುರ್ಬಲ ಇದೆಯೋ ಅಂತಹ ಪ್ರದೇಶದಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡಬೇಕಿದೆ. ಸ್ಥಳೀಯ ಸಂಸ್ಥೆ ಮತ್ತು ಲೋಕಸಭೆ ಚುನಾವಣೆ ವೇಳೆಗೆ ಪಕ್ಷವನ್ನು ಗಟ್ಟಿಗೊಳಿಸಬೇಕು ಎಂಬ ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios