ಬೆಂಗಳೂರು(ಸೆ. 13): ಕಾವೇರಿ ಕದನಕ್ಕೆ ಉಮೇಶ್ ನಂತರ ಮತ್ತೊಬ್ಬ ವ್ಯಕ್ತಿಯ ಬಲಿಯಾಗಿದೆ. ನಿನ್ನೆ ಹೆಗ್ಗನಹಳ್ಳಿ ಕಟ್ಟಡವೊಂದರ ಮೇಲಿನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಕುಮಾರ್ ಎಂಬುವವರು ಮಂಗಳವಾರ ನಿಧನರಾಗಿದ್ದಾರೆ. ಕುಮಾರ್ ಅವರು ಮೂರನೇ ಮಹಡಿಯಿಂದ ಬಿದ್ದು ಗಾಯಗೊಂಡಿದ್ದರು. ಸುಂಕದಕಟ್ಟೆಯ ಲಕ್ಷ್ಮೀ ಆಸ್ಪತ್ರೆಯಲ್ಲಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.
ಆದರೆ, ಕುಮಾರ್'ಗೆ ಯಾವುದೇ ಪರಿಹಾರ ನೀಡಲಾಗುವುದಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಇಂದು ಸುದ್ದಿಗೋಷ್ಠಿ ವೇಳೆ ಈ ವಿಚಾರ ಪ್ರಸ್ತಾಪಿಸಿದ ಸಿಎಂ, ಪೊಲೀಸರ ಲಾಠಿಪ್ರಹಾರ ಅಥವಾ ಗುಂಡೇಟಿನಿಂದ ಕುಮಾರ್ ಸತ್ತಿಲ್ಲ. ಆಯತಪ್ಪಿ ಕೆಳಗೆ ಬಿದ್ದಿದ್ದರಿಂದ ಸಾವನ್ನಪ್ಪಿದ್ದಾರೆ. ಹೀಗಾಗಿ ಪರಿಹಾರ ನೀಡಲು ಬರುವುದಿಲ್ಲ, ಎಂದು ತಿಳಿಸಿದ್ದಾರೆ.
ನಿನ್ನೆ ಹೆಗ್ಗನಹಳ್ಳಿಯಲ್ಲಿ ಕಾವೇರಿ ಹೋರಾಟ ಹಿಂಸಾರೂಪಕ್ಕೆ ತಿರುಗಿತ್ತು. ಉದ್ರಿಕ್ತ ಜನರು ಹಿಂಸಾಚಾರದಲ್ಲಿ ತೊಡಗಿದ್ದರು. ಪೊಲೀಸ್ ವಾಹನವನ್ನೇ ಬೆಂಕಿಗಾಹುತಿ ನೀಡಿದ್ದರು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಪ್ರಹಾರ ಹಾಗೂ ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು. ಲಾಠಿ ಪ್ರಹಾರಕ್ಕೆ ಹಲವು ಜನರು ಗಾಯಗೊಂಡರು. ಗುಂಡಿನೇಟಿಗೆ ಉಮೇಶ್ ಎಂಬ ಅಮಾಯಕ ವ್ಯಕ್ತಿ ನಿನ್ನೆಯೇ ಬಲಿಯಾಗಿದ್ದರು.
