ಬೆಂಗಳೂರು :  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ವು ಆಂಧ್ರಪ್ರದೇಶ ಪ್ರವಾಸ ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಆರಂಭಿಸಿದ್ದ ಬೆಂಗಳೂರು-ತಿರುಪತಿ ಪ್ಯಾಕೇಜ್‌ ಟೂರ್‌ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಹೊಸದಾಗಿ ಮಂಗಳೂರು, ದಾವಣಗೆರೆ, ಶಿವಮೊಗ್ಗ ಹಾಗೂ ಮೈಸೂರಿನಿಂದ ತಿರುಪತಿ-ತಿರುಮಲಕ್ಕೆ ಪ್ಯಾಕೇಜ್‌ ಟೂರ್‌ ಆರಂಭಿಸಿದೆ.

ಮಂಗಳೂರು, ದಾವಣಗೆರೆ, ಶಿವಮೊಗ್ಗ ಪ್ಯಾಕೇಜ್‌ ಟೂರ್‌ನಲ್ಲಿ ಐರಾವತ ಕ್ಲಬ್‌ ಕ್ಲಾಸ್‌ ಬಸ್‌ (ಹವಾ ನಿಯಂತ್ರಿತ)ನಲ್ಲಿ ಪ್ರಯಾಣ, ಹೋಟೆಲ್‌ನಲ್ಲಿ ಸ್ನಾನದ ವ್ಯವಸ್ಥೆ, ಪದ್ಮಾವತಿದೇವಿ ದೇವಸ್ಥಾನ ದರ್ಶನ, ಉಪಾಹಾರ, ಬಳಿಕ ಆಂಧ್ರಪ್ರದೇಶ ರಾಜ್ಯ ಸಾರಿಗೆ ಸಂಸ್ಥೆ ಬಸ್‌ ಮೂಲಕ ತಿರುಪತಿಯಿಂದ ತಿರುಮಲಕ್ಕೆ ಪ್ರಯಾಣ ಮಾಡಿ ತಿರುಮಲದಲ್ಲಿ ಶೀಘ್ರ ದೇವರ ದರ್ಶನ ಮಾಡಿಸಲಾಗುತ್ತದೆ. 

ಬಳಿಕ ಊಟದ ವ್ಯವಸ್ಥೆ ಇರುತ್ತದೆ. ನಂತರ ತಿರುಪತಿಯ ಸ್ಥಳೀಯ ದೇವಸ್ಥಾನಗಳ ದರ್ಶನವಿರುತ್ತದೆ. ರಾತ್ರಿ ಕಾಳಹಸ್ತಿಯಲ್ಲಿ ಊಟ ಹಾಗೂ ತಂಗಲು ವ್ಯವಸ್ಥೆ ಇರುತ್ತದೆ. ಬೆಳಗ್ಗೆ ಕಾಳಹಸ್ತಿ ದೇವಸ್ಥಾನ ದರ್ಶನದ ಬಳಿಕ ಉಪಾಹಾರ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆ ಇರಲಿದೆ. ಬಳಿಕ ಹಿಂದಿರುಗಲಾಗುವುದು. ಪ್ಯಾಕೇಜ್‌ ಟೂರ್‌ ಪ್ರವಾಸದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 7760990034/ 7760990035 ಸಂಪರ್ಕಿಸುವಂತೆ ಕೆಎಸ್‌ಆರ್‌ಟಿಸಿ ಕೋರಿದೆ.