ಯುಗಾದಿ ಹಬ್ಬಕ್ಕೆ ನೀವು ನಿಮ್ಮ ಊರುಗಳಿಗೆ ತೆರಳುತ್ತಿದ್ದೀರಾ ಹಾಗಾದ್ರೆ. ನಿಮಗಿಲ್ಲಿದೆ ಗುಡ್ ನ್ಯೂಸ್. 

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಏ.5 ಮತ್ತು 6ರಂದು ನಗರದಿಂದ ರಾಜ್ಯ ಹಾಗೂ ಹೊರರಾಜ್ಯದ ವಿವಿಧ ಸ್ಥಳಗಳಿಗೆ 600 ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆ ಮಾಡುವುದಾಗಿ ತಿಳಿಸಿದೆ.

Add Asianetnews Kannada as a Preferred SourcegooglePreferred

ಕೆಂಪೇಗೌಡ ಬಸ್‌ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್‌, ತಿರುಪತಿ ಮೊದಲಾದ ಸ್ಥಳಗಳಿಗೆ ಹೆಚ್ಚುವರಿ ಬಸ್‌ ಸಂಚರಿಸಲಿವೆ. ಮೈಸೂರು ರಸ್ತೆಯ ಸ್ಯಾಟ್‌ಲೈಟ್‌ ಬಸ್‌ ಬಸ್‌ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆಗೆ ಕಾರ್ಯಾಚರಣೆ ಮಾಡಲಾಗುವುದು.

ಶಾಂತಿನಗರದ ಘಟಕ 2 ಮತ್ತು 4ರ ಎದುರಿನಿಂದ ಹೊರರಾಜ್ಯದ ಮಧುರೈ, ಕುಂಭಕೋಣಂ, ತಿರುಚಿ, ಚೆನ್ನೈ ಕೊಯಮತ್ತೂರು, ತಿರುಪತಿ, ವಿಜಯವಾಡ, ಹೈದರಾಬಾದ್‌ ಮೊದಲಾದ ನಗರಗಳಿಗೆ ಹವಾನಿಯಂತ್ರಿತ (ಎಸಿ) ಬಸ್‌ಗಳು ಕಾರ್ಯಾಚರಣೆಗೊಳ್ಳಲಿವೆ. ಪೀಣ್ಯದ ಬಸವೇಶ್ವರ ಬಸ್‌ ನಿಲ್ದಾಣ, ಜಯನಗರ, ಜಯನಗರ 4ನೇ ಬ್ಲಾಕ್‌, ಜಾಲಹಳ್ಳಿ ಕ್ರಾಸ್‌, ರಾಜಾಜಿನಗರದ ನವರಂಗ್‌, ಮಲ್ಲೇಶ್ವರ 18ನೇ ಕ್ರಾಸ್‌, ಬನಶಂಕರಿ, ಜೀವನ್‌ ಭೀಮಾನಗರ, ಗಂಗಾನಗರ, ಕೆಂಗೇರಿ ಉಪನಗರ ಮೊದಲಾದ ಸ್ಥಳಗಳಿಂದ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ಬಸ್‌ ಸಂಚರಿಸಲಿವೆ.

ಅಂತೆಯೆ ನಿಗಮದ ವ್ಯಾಪ್ತಿಯ ತಾಲೂಕು ಮತ್ತು ಜಿಲ್ಲಾ ಬಸ್‌ ನಿಲ್ದಾಣಗಳಿಂದ ಪ್ರಯಾಣಿಕರ ಸಂಚಾರ ಒತ್ತಡಕ್ಕೆ ಅನುಗುಣವಾಗಿ ಹೆಚ್ಚುವರಿ ಬಸ್‌ ಕಾರ್ಯಾಚರಣೆ ಮಾಡಲಾಗುವುದು. ಹಬ್ಬದ ನಂತರ ರಾಜ್ಯ ಹಾಗೂ ಹೊರರಾಜ್ಯಗಳಿಂದ ನಗರಕ್ಕೆ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಏ.7ರಂದು ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆ ಮಾಡಲಾಗುವುದು ಎಂದು ನಿಗಮ ತಿಳಿಸಿದೆ.