Asianet Suvarna News Asianet Suvarna News

ಮೆತ್ತಗಾದ ಈಶ್ವರಪ್ಪ; ಯಡಿಯೂರಪ್ಪ ಮೇಲುಗೈ

ಹೆಚ್ಚೂ ಕಡಮೆ ಯಡಿಯೂರಪ್ಪ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಈಶ್ವರಪ್ಪ ಮತ್ತವರ ಬೆಂಬಲಿಗ ಮುಖಂಡರು ಈ ಮೊದಲು ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳದೇ ಇರಲು ನಿರ್ಧರಿಸಿದ್ದರು. ಅದರ ಬದಲು ಸೋಮವಾರ ರಾಯಚೂರಿನ ಬ್ರಿಗೇಡ್‌ನ ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಕ್ಕೂ ತಯಾರಿ ನಡೆಸಿದ್ದರು. ಮೂರ್ನಾಲ್ಕು ದಿನಗಳ ಹಿಂದಷ್ಟೇ ಈಶ್ವರಪ್ಪ ಅವರು ರಾಯಚೂರಿಗೆ ತೆರಳಿ ಸಭೆಯ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿ ಬಂದಿದ್ದರು.

KSE Silent BSY ahead

ಬೆಂಗಳೂರು(ಮೇ.05): ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನಡುವಿನ ಜಂಗೀ ಕುಸ್ತಿಯಲ್ಲಿ ಸದ್ಯಕ್ಕೆ ಯಡಿಯೂರಪ್ಪ ಅವರ ಕೈ ಮೇಲಾಗಿದೆ.

ಯಡಿಯೂರಪ್ಪ ಅವರ ಬಿಗಿಪಟ್ಟಿನ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ನೀಡಿದ ಸೂಚನೆ ಅನ್ವಯ ಈಶ್ವರಪ್ಪ ಅವರು ಸೋಮವಾರ ರಾಯಚೂರಿನಲ್ಲಿ ನಡೆಯಬೇಕಿದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಭೆಯನ್ನು ಮುಂದೂಡಿದ್ದು, ಶನಿವಾರದಿಂದ ಮೈಸೂರಿನಲ್ಲಿ ನಡೆಯಲಿರುವ ಎರಡು ದಿನಗಳ ಕಾರ್ಯಕಾರಿಣಿ ಸಭೆಯಲ್ಲೂ ಈಶ್ವರಪ್ಪ ಅವರು ಭಾಗವಹಿಸಲು ಮುಂದಾಗಿದ್ದಾರೆ.

ಹೀಗಾಗಿ, ಮೈಸೂರಿನ ಕಾರ್ಯಕಾರಿಣಿ ಸಭೆಯಲ್ಲಿ ಹಿಂದೆ ಕಲಬುರಗಿಯಲ್ಲಿ ನಡೆದ ಕಾರ್ಯಕಾರಿಣಿ ಸಭೆಯಂತೆ ಬ್ರಿಗೇಡ್ ಭಿನ್ನಮತ ವಿಷಯ ಪ್ರಸ್ತಾಪವಾಗಿ ಗದ್ದಲ ಉಂಟಾಗಲಿದೆಯೇ ಎಂಬುದನ್ನು ಕಾದು ನೋಡಬೇಕು.

ಹೆಚ್ಚೂ ಕಡಮೆ ಯಡಿಯೂರಪ್ಪ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಈಶ್ವರಪ್ಪ ಮತ್ತವರ ಬೆಂಬಲಿಗ ಮುಖಂಡರು ಈ ಮೊದಲು ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳದೇ ಇರಲು ನಿರ್ಧರಿಸಿದ್ದರು. ಅದರ ಬದಲು ಸೋಮವಾರ ರಾಯಚೂರಿನ ಬ್ರಿಗೇಡ್‌ನ ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಕ್ಕೂ ತಯಾರಿ ನಡೆಸಿದ್ದರು. ಮೂರ್ನಾಲ್ಕು ದಿನಗಳ ಹಿಂದಷ್ಟೇ ಈಶ್ವರಪ್ಪ ಅವರು ರಾಯಚೂರಿಗೆ ತೆರಳಿ ಸಭೆಯ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿ ಬಂದಿದ್ದರು.

ಇದರಿಂದ ಕೆಂಡಾಮಂಡಲವಾಗಿದ್ದ ಯಡಿಯೂರಪ್ಪ ಅವರು ಪಕ್ಷದ ರಾಜ್ಯ ಉಸ್ತುವಾರಿ ಪಿ.ಮುರಳೀಧರ ರಾವ್ ಅವರೊಂದಿಗೆ ಮಾತನಾಡಿ ಯಾವುದೇ ಕಾರಣಕ್ಕೂ ಈಶ್ವರಪ್ಪ ಅವರು ಬ್ರಿಗೇಡ್ ಸಭೆಯಲ್ಲಿ ಪಾಲ್ಗೊಳ್ಳದಂತೆ ತಡೆಯಬೇಕು. ಒಂದು ವೇಳೆ ಪಾಲ್ಗೊಂಡಿದ್ದೇ ಆದಲ್ಲಿ ತಕ್ಷಣ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂಬ ಮಾತನ್ನೂ ಖಡಕ್ಕಾಗಿ ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ದೆಹಲಿಯಿಂದ ಮುರಳೀಧರ ರಾವ್ ಅವರು ದೂರವಾಣಿ ಮೂಲಕ ಈಶ್ವರಪ್ಪ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದರು. ಇದೇ ವೇಳೆ ಈಶ್ವರಪ್ಪ ಅವರು ಯಡಿಯೂರಪ್ಪ ಅವರು ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದು ನೋವು ತಂದಿದೆ. ಹೀಗಾಗಿ, ತಾವು ಮೈಸೂರಿನ ಕಾರ್ಯಕಾರಿಣಿ ಸಭೆಯಿಂದ ದೂರ ಉಳಿಯಲು ನಿರ್ಧರಿಸಿರುವುದಾಗಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುರಳೀಧರ ರಾವ್ ಅವರು ಏನೇ ಇದ್ದರೂ ನೀವು ಪಕ್ಷದ ಸಭೆ ಗೈರು ಹಾಜರಾಗುವುದು ಅಶಿಸ್ತು ಆಗುತ್ತದೆ. ಅದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು ಎನ್ನಲಾಗಿದೆ.

ಅಲ್ಲದೆ, ಪಕ್ಷದಲ್ಲಿ ಬಿಕ್ಕಟ್ಟಿಗೆ ಕಾರಣವಾಗಿರುವ ರಾಯಚೂರಿನ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಸಭೆಯನ್ನು ಸದ್ಯಕ್ಕೆ ಮುಂದೂಡಬೇಕು ಅಥವಾ ಅದರಿಂದ ನೀವು ದೂರ ಉಳಿಯಬೇಕು. ನಿಮ್ಮ ಬೇಡಿಕೆಗಳ ಬಗ್ಗೆ ಹೈಕಮಾಂಡ್ ಪರಿಶೀಲನೆ ನಡೆಸುವ ವೇಳೆ ನೀವು ಬ್ರಿಗೇಡ್ ಸಭೆ ನಡೆಸಿದರೆ ಏನು ಸಂದೇಶ ನೀಡಿದಂತಾಗುತ್ತದೆ ಎಂಬುದನ್ನು ಯೋಚಿಸಿ. ನೀವಾಗಿಯೇ ಪಕ್ಷದ ವಿರುದ್ಧ ಚಟುವಟಿಕೆ ನಡೆಸಿದಂತಾಗುತ್ತದೆ. ಆಗ ಪರಿಸ್ಥಿತಿ ಬಿಗಡಾಯಿಸುತ್ತದೆ ಎಂಬ ಎಚ್ಚರಿಕೆಯನ್ನು ಮುರಳೀಧರ ರಾವ್ ನೀಡಿದರು ಎಂದು ಮೂಲಗಳು ತಿಳಿಸಿವೆ.

ಪರಿಣಾಮ, ಬಿಗುವಿನಿಂದ ಕೂಡಿದ್ದ ಈಶ್ವರಪ್ಪ ಅವರು ಅನಿವಾರ್ಯವಾಗಿ ಮೆತ್ತಗಾದರು. ತಮ್ಮ ಬೆಂಬಲಿಗ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಮೈಸೂರಿನಲ್ಲಿ ನಡೆಯುವ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳುವ ನಿರ್ಧಾರ ಕೈಗೊಂಡರು. ಜತೆಗೆ ರಾಯಚೂರಿನಲ್ಲಿ ಸೋಮವಾರ ನಡೆಯಬೇಕಿದ್ದ ರಾಯಣ್ಣ ಬ್ರಿಗೇಡ್‌ನ ಸಭೆಯನ್ನು ಮುಂದೂಡಿದರು ಎಂದು ತಿಳಿದು ಬಂದಿದೆ.

(ಕನ್ನಡಪ್ರಭ ವಾರ್ತೆ)

Follow Us:
Download App:
  • android
  • ios