ಮುಖ್ಯಮಂತ್ರಿ ಸಿದ್ದರಾಮಯ್ಯ ಗೂಂಡಾಗಿರಿ ಹಾಗೂ ಭ್ರಷ್ಟಾಚಾರ ಬೆಂಬಲಿಸುತ್ತಿದ್ದು, ಜೈಲಿಗೆ ಹೋಗುವುದು ಗ್ಯಾರಂಟಿ ಎಂದು ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

ಯಾದಗಿರಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಗೂಂಡಾಗಿರಿ ಹಾಗೂ ಭ್ರಷ್ಟಾಚಾರ ಬೆಂಬಲಿಸುತ್ತಿದ್ದು, ಜೈಲಿಗೆ ಹೋಗುವುದು ಗ್ಯಾರಂಟಿ ಎಂದು ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

ಬುಧವಾರ ಕೂಡಲಸಂಗಮದಲ್ಲಿ ನಡೆಯಲಿರುವ ಬಿಜೆಪಿ ಹಿಂದುಳಿದ ವರ್ಗಗಳು ಮತ್ತು ದಲಿತರ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜೈಲಿನಲ್ಲಿರುವ ತಮಿಳುನಾಡಿನ ಶಶಿಕಲಾ ನಟರಾಜನ್‌ ಅವರಿಗೆ ವಿಶೇಷ ಭದ್ರತೆ ನೀಡುವಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ. ಪರಪ್ಪನ ಅಗ್ರಹಾರದಲ್ಲಿರುವ ಶಾಸಕ ಹ್ಯಾರಿಸ್‌ ಪುತ್ರ ನಲಪಾಡ್‌ನಿಗೆ ಚಿಕನ್‌ ಬಿರಿಯಾನಿ ತಿನ್ನಿಸಲು ವ್ಯವಸ್ಥೆ ಮಾಡಿಸಿದ್ದಾರೆ. ಇದನ್ನೆಲ್ಲ ನೋಡಿದರೆ ಸಿಎಂ ಸಿದ್ದರಾಮಯ್ಯ ಗೂಂಡಾ, ಭ್ರಷ್ಟರಿಗೆ ಮಣೆ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ನಡುವೆ, ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, ಸಿದ್ದರಾಮಯ್ಯ ಅವರಿಗೆ ಕೊಲೆಗಡುಕರು, ಕ್ರಿಮಿನಲ್‌ಗಳು ಅಣ್ಣತಮ್ಮಂದಿರು ಇದ್ದಂತೆ. ಸಿದ್ದರಾಮಯ್ಯ ಜೈಲಿಗೆ ಹೋಗುವವರೆಗೂ ಅವರ ಇಂಥ ಬೀಗರಿಗೆ ಜೈಲಿನಲ್ಲಿ ರಾಯಲ್‌ ಟ್ರೀಟ್‌ಮೆಂಟ್‌ ಸಿಗುತ್ತದೆ. ಸಿದ್ದರಾಮಯ್ಯ ಜೈಲಿಗೆ ಹೋದಾಗ ನಾವು ಬಿಜೆಪಿಯವರು ಸಿದ್ದರಾಮಯ್ಯ ಹಾಗೂ ಅವರ ಬೀಗರಿಗೆ ಸಮಾನ ಟ್ರೀಟ್‌ಮೆಂಟ್‌ ನೀಡುತ್ತೇವೆ ಎಂದು ವ್ಯಂಗ್ಯವಾಡಿದರು.

ರಾಜ್ಯದ ಸ್ಥಿತಿ ಚಿಂತಾಜನಕವಾಗಿದೆ. ಕೊಲೆ, ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಿವೆ. ಸಿಎಂ ಅವರು ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್‌ ಅವರಿಗೆ ರಕ್ಷಣೆಗಾಗಿ ಪತ್ರ ಬರೆದರೆ ಒಳಿತು ಎಂದರು. ರಾಜ್ಯದಲ್ಲಿ ಕೊಲೆ, ದರೋಡೆಗಳನ್ನು ನಿಯಂತ್ರಿಸುವ ಬದಲು ಸಿಎಂ ಅತ್ಯಾಚಾರಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ಅವರೊಂದಿಗೆ ನೇರವಾಗಿ ಸಂಬಂಧ ಹೊಂದಿದ್ದಾರೆ. ಇದರಿಂದ ರಾಜ್ಯ ಸಂಪೂರ್ಣ ಅದೋಗತ್ತಿಯತ್ತ ಸಾಗುತ್ತಿದೆ ಎಂದು ಕಿಡಿಕಾರಿದರು.