ಹುಬ್ಬಳ್ಳಿ[ಮೇ.10]: ಅತ್ತ ರಾಹುಲ್‌ ಗಾಂಧಿ ಮದುವೆಯಾಗಲ್ಲ, ಇತ್ತ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲ್ಲ. ಆದರೂ ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬ ಕನಸು ಕಾಣುವುದನ್ನು ಬಿಡುತ್ತಿಲ್ಲ. ಕಾಂಗ್ರೆಸ್‌ನವರಿಗಾಗಿಯೇ ಮುಖ್ಯಮಂತ್ರಿ ಸ್ಥಾನವನ್ನು 25ಕ್ಕೇರಿಸಬೇಕಿದೆ. ಏಕೆಂದರೆ ಅಷ್ಟೊಂದು ಜನ ಮುಖ್ಯಮಂತ್ರಿ ಆಗುವ ಕ್ಯೂನಲ್ಲಿ ನಿಂತಿದ್ದಾರೆ ಎಂದು ಬಿಜೆಪಿ ಮುಖಂಡ ಕೆ.ಎಸ್‌. ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಕುಂದಗೋಳ ಕ್ಷೇತ್ರದ ರಟಗೇರಿ, ಗೌಡಗೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡ ಪರ ಪ್ರಚಾರ ನಡೆಸಿದ ಅವರು, ಸಿದ್ದರಾಮಯ್ಯ, ಡಿಕೆಶಿ, ಎಂ.ಬಿ.ಪಾಟೀಲ್‌ ಹೀಗೆ ಮುಖ್ಯಮಂತ್ರಿ ಆಗಬೇಕೆನ್ನುವವರ ಪಟ್ಟಿಬೆಳೆಯುತ್ತಲೇ ಹೋಗುತ್ತದೆ. ಎಲ್ಲರೂ ಮುಖ್ಯಮಂತ್ರಿ ಕುರ್ಚಿ ಮೇಲೆ ಟಾವಲ್‌ ಹಾಕುವವರೇ ಆಗಿದ್ದಾರೆ. ಆದಕಾರಣ ಮುಖ್ಯಮಂತ್ರಿ ಸ್ಥಾನವನ್ನು 25ಕ್ಕೇರಿಸಬೇಕು ಎಂದು ವ್ಯಂಗ್ಯವಾಡಿದರು. ಒಳಬೇಗುದಿಯಿಂದ ಕಾಂಗ್ರೆಸ್‌ ತತ್ತರಿಸುತ್ತಿದೆ. ದಿನಕ್ಕೊಬ್ಬರು ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿ ಎಂದು ಹೇಳಿಕೆ ನೀಡುತ್ತಾ ತಿರುಗಾಡುತ್ತಿದ್ದಾರೆ. ಪರಮೇಶ್ವರ್‌ ಹಾಗೂ ದಿನೇಶ್‌ ಗುಂಡೂರಾವ್‌ ಈ ರೀತಿ ಹೇಳಿಕೆ ನೀಡಬೇಡಿ ಎಂದರೂ, ಯಾವೊಬ್ಬ ಶಾಸಕನೂ ಇವರ ಮಾತಿಗೆ ಕಿಮ್ಮತ್ತು ನೀಡುತ್ತಿಲ್ಲ. ಶಾಸಕರ ಹೇಳಿಕೆಯ ಹಿಂದೆ ಸಿದ್ದರಾಮಯ್ಯ ಕುಮ್ಮಕ್ಕಿದೆ ಎಂದು ಆರೋಪಿಸಿದರು.

ಉಪಚುನಾವಣೆ ಮುಗಿದ ಬಳಿಕ ಕುಮಾರಸ್ವಾಮಿ ಮನೆಗೆ ಹೋಗ್ತಾರೆ. ನಿಖಿಲ್‌ ಎಲ್ಲಿದಿಯಪ್ಪ ಅಂದಂತೆ ಕುಮಾರಸ್ವಾಮಿ ಎಲ್ಲಿದಿಯಪ್ಪ ಎನ್ನುವ ಪರಿಸ್ಥಿತಿ ಬರಲಿದೆ. ಆಗ ಸಿದ್ದರಾಮಯ್ಯನೇ ಕುಮಾರಸ್ವಾಮಿ ಎಲ್ಲಿದಿಯಪ್ಪ ಎಂದರೆ, ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಎಲ್ಲಿದ್ದೀಯಪ್ಪ ಅಂತಾರೆ. ನಂತರ ಇಬ್ಬರೂ ಒಬ್ಬರಿಗೊಬ್ಬರು ಸಿಕ್ಕು ರೆಸಾರ್ಟ್‌ಗೆ ಹೋಗಿ ರೆಸ್ಟ್‌ ಮಾಡುತ್ತಾರೆ ಎಂದು ಕಾಲೆಳೆದರು.