18ರಿಂದ ಬಿಎಸ್‌ವೈ ಬರ ಪ್ರವಾಸ: ಅದಕ್ಕೆ ಈಶ್ವರಪ್ಪ ಗೈರು ಸಾಧ್ಯತೆ15ರಿಂದ ಪ್ರತ್ಯೇಕವಾಗಿ ಬರ ಪ್ರವಾಸ ಕೈಗೊಳ್ಳಲು ಈಶ್ವರಪ್ಪ ಚಿಂತನೆ

ಬೆಂಗಳೂರು: ಬಿಜೆಪಿಯಲ್ಲಿನ ಭಿನ್ನಮತ ಬರ ಪ್ರವಾಸ​ದಲ್ಲಿಯೂ ಗೋಚರಿಸುವ ಸಾಧ್ಯತೆಗಳಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗಿಂತ ಮುನ್ನವೇ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಬರ ಅಧ್ಯಯನ ಪ್ರವಾಸ ಕೈಗೊಳ್ಳುವ ಬೆಳವಣಿಗೆಗಳು ಕಂಡುಬಂದಿವೆ. ಈಶ್ವರಪ್ಪ ಅವರು ಪ್ರತ್ಯೇಕವಾಗಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂಬ ಮಾತುಗಳು ಪಕ್ಷದಲ್ಲಿ ಕೇಳಿಬಂದಿವೆ.

ಯಡಿಯೂರಪ್ಪ ನೇತೃತ್ವದಲ್ಲಿ ಮೇ 18ರಿಂದ ಬಿಜೆಪಿಯ ಅಧಿಕೃತ ಬರ ಅಧ್ಯಯನ ಪ್ರವಾಸ ಆರಂಭವಾಗಲಿದೆ. ಆದರೆ, ಈಶ್ವರಪ್ಪ ಪ್ರತ್ಯೇಕವಾಗಿ ಮೇ 15ರಿಂದ ಬರ ಪ್ರವಾಸ ನಡೆಸುವ ಚಿಂತನೆಯಲ್ಲಿದ್ದಾರೆಂದು ಹೇಳಲಾ​ಗಿದೆ. ಪಕ್ಷದ ಮುಖಂಡರ ಮುನಿಸಿನಿಂದಾಗಿ ಬರ ಅಧ್ಯಯನ ಪ್ರವಾಸವು ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಉತ್ತರ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಮೇ 15ರಿಂದ 17ರವರೆಗೆ ಈಶ್ವರಪ್ಪ ಅವರ ಬರ ಪ್ರವಾಸ ನಡೆಯಲಿದೆ. ವಿಜಯಪುರ, ರಾಯಚೂರು, ಕೊಪ್ಪಳ ಜಿಲ್ಲೆಯಲ್ಲಿ ಬರ ಅಧ್ಯಯನವನ್ನು ಈಶ್ವರಪ್ಪ ನಡೆಸಲಿದ್ದಾರೆ. ಯಡಿಯೂರಪ್ಪ ನಾಯಕತ್ವದಲ್ಲಿ ಮೇ 18ರಿಂದ ತುಮಕೂರಿನಿಂದ ಆರಂಭವಾಗಲಿ​ರುವ ಬರ ಅಧ್ಯಯನ ಪ್ರವಾಸದಲ್ಲಿ ಎಲ್ಲಾ ನಾಯಕರು ಭಾಗಿಯಾಗಲು ಪಕ್ಷ ಸೂಚನೆ ನೀಡಿದೆ.

ಆದರೆ, ಈಶ್ವರಪ್ಪ ಭಾಗಿಯಾಗುವ ಸಾಧ್ಯತೆ ಕಡಿಮೆ ಇದೆ ಎಂದು ಮೂಲಗಳು ತಿಳಿಸಿವೆ. ಪಕ್ಷದಲ್ಲಿನ ಬಿಕ್ಕಟ್ಟು ಪರಿಹಾರಕ್ಕೆ ಮೇ 10ರವರೆಗೆ ಈಶ್ವರಪ್ಪ ಗಡುವು ನೀಡಿದ್ದರು. ಬಿಕ್ಕಟ್ಟು ಪರಿಹಾರವಾಗದ ಕಾರಣ ಮುನಿಸಿಕೊಂಡಿರುವ ಈಶ್ವರಪ್ಪ ಪ್ರವಾಸದಿಂದ ದೂರ ಉಳಿಯುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಈ ಬಗ್ಗೆ ಈಶ್ವರಪ್ಪ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಪಕ್ಷದಿಂದ ಹಮ್ಮಿಕೊಂಡಿರುವ ಪ್ರವಾಸದಲ್ಲಿ ತೆರಳಬೇಕೇ ಅಥವಾ ತಮ್ಮದೇ ಬಣದೊಂದಿಗೆ ಪ್ರತ್ಯೇಕ ಪ್ರವಾಸ ನಡೆಸಬೇಕೇ ಎಂಬುದರ ಕುರಿತು ಯಾವುದೇ ನಿರ್ಣಯ ಕೈಗೊಂಡಿಲ್ಲ ಎನ್ನಲಾಗಿದೆ.