ಕನಕನಿಗೊಲಿದ ಉಡುಪಿಯ ಕೃಷ್ಣ ಅಮೇರಿಕನ್ನರಿಗೂ ದರ್ಶನ ಭಾಗ್ಯ ನೀಡಿದ್ದಾನೆ. ಪುತ್ತಿಗೆ ಸ್ವಾಮೀಜಿಗಳು ನ್ಯೂಜೆರ್ಸಿಯ ಚರ್ಚ್’ವೊಂದನ್ನು ಖರೀದಿಸಿ ಕೃಷ್ಣ ದೇವಾಲಯವಾಗಿ ಮಾರ್ಪಾಟು ಮಾಡಿದ್ದಾರೆ. ಉಡುಪಿಯಿಂದ ಕೊಂಡೊಯ್ದ ಕಡಗೋಲು ಕೃಷ್ಣನ ಮೂರ್ತಿಯ ಪ್ರತಿಷ್ಟಾಪನಾ ಮಹೋತ್ಸವ ವೈಭವದಿಂದ ನಡೆಯುತ್ತಿದೆ.
ನ್ಯೂಜೆರ್ಸಿ (ಜೂ.10): ಕನಕನಿಗೊಲಿದ ಉಡುಪಿಯ ಕೃಷ್ಣ ಅಮೇರಿಕನ್ನರಿಗೂ ದರ್ಶನ ಭಾಗ್ಯ ನೀಡಿದ್ದಾನೆ. ಪುತ್ತಿಗೆ ಸ್ವಾಮೀಜಿಗಳು ನ್ಯೂಜೆರ್ಸಿಯ ಚರ್ಚ್’ವೊಂದನ್ನು ಖರೀದಿಸಿ ಕೃಷ್ಣ ದೇವಾಲಯವಾಗಿ ಮಾರ್ಪಾಟು ಮಾಡಿದ್ದಾರೆ. ಉಡುಪಿಯಿಂದ ಕೊಂಡೊಯ್ದ ಕಡಗೋಲು ಕೃಷ್ಣನ ಮೂರ್ತಿಯ ಪ್ರತಿಷ್ಟಾಪನಾ ಮಹೋತ್ಸವ ವೈಭವದಿಂದ ನಡೆಯುತ್ತಿದೆ.
ಅಮೇರಿಕಾದ ನ್ಯೂಜೆರ್ಸಿಯಲ್ಲಿ ಕೃಷ್ಣಜಪ ಅನುರಣಿಸುತ್ತಿದೆ. ಅಪೂರ್ವ ಕಾಷ್ಟಶಿಲ್ಪದ ಗರ್ಭಗುಡಿಯೊಳಗೆ ಕಂಗೊಳಿಸುವ ಕಡಗೋಲು ಕೃಷ್ಣಮೂರ್ತಿ. ಉಡುಪಿ ಕೃಷ್ಣ ದರ್ಶನಕ್ಕೆ ದಶಕಗಳಿಂದ ಕಾದ ಭಕ್ತರಿಗೆ ಸಂಭ್ರಮವೋ ಸಂಭ್ರಮ. ಉಡುಪಿಯ ಅಷ್ಟಮಠಗಳ ಪೈಕಿ ಒಂದಾದ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರ ತೀರ್ಥರ ಬಹುಕಾಲದ ಕನಸು ನನಸಾಗಿದೆ. ಕಳೆದ ಒಂದುವರೆ ದಶಕಗಳ ಕಾಲ ಕೃಷ್ಣನ ಉತ್ಸವಮೂರ್ತಿ ಇಟ್ಟು ಪೂಜಿಸಲಾಗುತ್ತಿದ್ದು, ಇದೀಗ ಸಾಲಿಗ್ರಾಮ ಶಿಲೆಯ ಸುಂದರ ಮೂರ್ತಿ ಪ್ರತಿಷ್ಟಾಪನೆಯಾಗಿದೆ. ಉಡುಪಿಯ ಕೃಷ್ಣಮಠದಲ್ಲಿರುವ ಕೃಷ್ಣಮೂರ್ತಿಯ ತದ್ರೂಪವನ್ನು ತಯಾರಿಸಿ ಅಮೇರಿಕಾದಲ್ಲಿ ಪ್ರತಿಷ್ಟಾಪಿಸಲಾಗಿದೆ. ನ್ಯೂಜರ್ಸಿಯ ಎಡಿಸನ್ ಮಹಾ ನಗರದಲ್ಲಿ ಚರ್ಚ್'ವೊಂದನ್ನು ಖರೀದಿಸಿ ಅದನ್ನು ಕೃಷ್ಣ ದೇವಾಲಯವಾಗಿ ಪರಿವರ್ತಿಸಲಾಗಿದೆ.
ಚರ್ಚ್'ನ್ನು ದೇವಾಲಯವಾಗಿ ಮರುನಿರ್ಮಾಣ ಮಾಡುವಾಗ ಅಪೂರ್ವ ಕಾಷ್ಟಶಿಲ್ಪಗಳನ್ನು ಜೋಡಿಸಲಾಗಿದೆ. ಗರ್ಭಗುಡಿಯನ್ನು ಸಂಪೂರ್ಣವಾಗಿ ಮರದಿಂದಲೇ ನಿರ್ಮಿಸಲಾಗಿದೆ. ಅಪೂರ್ವ ಕೆತ್ತನೆಗಳಿಂದ ಕೂಡಿದ ಈ ಕಲಾಕೃತಿಯನ್ನು ಉಡುಪಿ ಜಿಲ್ಲೆಯ ಕಾರ್ಕಳದ ಶಿಲ್ಪಿಗಳು ನಿರ್ಮಿಸಿದ್ದಾರೆ. ಅದಕ್ಕಂತಲೇ ಬರ್ಮಾ ದೇಶದಿಂದ ಮರವನ್ನು ತರಿಸಿಕೊಂಡು ಈ ಸುಂದರ ರಚನೆ ಸಿದ್ದವಾಗಿದೆ. ಹಡಗಿನ ಮೂಲಕ ಇವುಗಳನ್ನು ಸಾಗಿಸಲಾಗಿದೆ. ಚರ್ಚ್ ಒಳಭಾಗದಲ್ಲಿ ಸ್ಥಾಪಿಸಲಾಗಿದೆ. ಇದೀಗ ಪ್ರತಿಷ್ಟಾಪನಾ ಮಹೋತ್ಸವ ವೈಭವದಿಂದ ನಡೆಯುತ್ತಿದ್ದು, 1008 ಕಳಶಗಳ ಅಭಿಷೇಕ ನಡೆಯುತ್ತಿದೆ. ಕೃಷ್ಣ, ಮುಖ್ಯಪ್ರಾಣ ದೇವರ ಜೊತೆಗೆ ರಾಘವೇಂದ್ರ ಗುರು ಸಾರ್ವಭೌಮರ ಗುಡಿಯೂ ನಿರ್ಮಾಣಗೊಂಡಿದೆ. ಆಚಾರ್ಯ ಮಧ್ವರ ತಂತ್ರಸಾರಕ್ಕೆ ಅನುಸಾರವಾಗಿ ಈ ಗುಡಿ ನಿರ್ಮಾಣಗೊಂಡಿದೆ.
ಉಡುಪಿ ಕೃಷ್ಣ ದೇವಾಲಯ ಅಮೇರಿಕಾದಲ್ಲಿರುವ ಭಕ್ತರಿಗೆ ಖುಷಿಕೊಟ್ಟಿದೆ. ಯತಿಯೊಬ್ಬರ ಸಾಘರೋಲ್ಲಂಘನದ ಈ ಸಾಧನೆ ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ.
