ಕಾಂಗ್ರೆಸ್‌ ಶಾಸಕರಿಗೆ  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರೇ ಕರೆ ಮಾಡಿ ಸರ್ಕಾರ ಅಸ್ಥಿರಗೊಳಿಸುವುದಕ್ಕೆ ಯತ್ನಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆರೋಪಿಸಿದ್ದಾರೆ.

ಬೆಂಗಳೂರು : ಕಾಂಗ್ರೆಸ್‌ ಶಾಸಕರಿಗೆ ನೇರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರೇ ಕರೆ ಮಾಡಿ ಸರ್ಕಾರ ಅಸ್ಥಿರಗೊಳಿಸುವುದಕ್ಕೆ ಯತ್ನಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆರೋಪಿಸಿದ್ದಾರೆ.

ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಅವರು, ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಸಮಾಲೋಚನೆ ನಡೆದಿದೆ. ಆಪರೇಷನ್‌ ಕಮಲದ ಬಗ್ಗೆಯೂ ಚರ್ಚೆ ನಡೆಸಿದ್ದೇವೆ. ಆಪರೇಷನ್‌ ಕಮಲದ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸುವುದಕ್ಕೆ ಪ್ರಯತ್ನ ಮಾಡುತ್ತಾ ನೀತಿಗೆಟ್ಟಕೆಲಸ ಮಾಡುತ್ತಿದ್ದಾರೆ. ಅದನ್ನು ತಡೆಯುವುದು ಹೇಗೆ ಎಂಬುದು ಗೊತ್ತಿದೆ ಎಂದು ಕಿಡಿಕಾರಿದರು.

ಸಿಎಂ ಕುಮಾರಸ್ವಾಮಿ ಮಾತನಾಡುವ ಭರದಲ್ಲಿ ದಂಗೆ ಹೇಳಿಕೆ ನೀಡಿದ್ದಾರೆ. ಅನೇಕ ಬಿಜೆಪಿ ನಾಯಕರು ದೊಡ್ಡ ಗಲಾಟೆ ಮಾಡುತ್ತೇವೆಂದು ಇಡೀ ಜಿಲ್ಲೆಗೆ ಬೆಂಕಿ ಹಚ್ಚುತ್ತೇವೆಂದು ಹೇಳಿರುವ ಹಲವು ಉದಾಹರಣೆಗಳಿವೆ. ಬಿಜೆಪಿಯವರು ರಾಜ್ಯಪಾಲರಿಗೆ ಕೊಡುವ ದೂರಿಗೆ ಯಾವುದೇ ಮಹತ್ವವಿಲ್ಲ. ಸ್ಥಿರ ಸರ್ಕಾರ ರಾಜ್ಯದಲ್ಲಿದೆ. ಅದು ಸ್ಥಿರವಾಗಿಯೇ ಇರುತ್ತದೆ ಎಂದರು.