ಬೆಂಗಳೂರು, (ಸೆ,7): ಪ್ರಧಾನಿ ಮೋದಿ ಪ್ರಶ್ನಾತೀತ ವ್ಯಕ್ತಿ‌ನಾ..?  ಪ್ರಧಾನಿ ಮೇಲೆ ಒತ್ತಡ ತರುವ ಶಕ್ತಿ ಸಿಎಂ ಬಿಎಸ್ ವೈ ಗೆ ಇಲ್ವಾ..? ಅಷ್ಟೊಂದು ಅಸಹಾಯಕರಾ? ಇಷ್ಟೊಂದು ದುರ್ಬಲರಾಗಿದ್ದೀರಾ..? ಅಥವಾ ಧೈರ್ಯ ಇಲ್ವಾ..? ಹೀಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಕಿಡಿಕಾರಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಬೆಂಗಳೂರಿಗೆ ಬಂದಾಗ ನೆರೆ ವಿಚಾರದಲ್ಲಿ ಪಿಎಂ ಮೋದಿ ಭೇಟಿಗೆ ಅವಕಾಶ ಕೇಳಿದ್ದೆವು. ಬಿಜೆಪಿ ಅವರು ಚಂದ್ರಯಾನ ಸಕ್ಸಸ್ ಜತೆಯಲ್ಲಿ ನೆರೆಯಲ್ಲಿ ಸಿಕ್ಕಿರುವವರಿಗೆ ಒಳ್ಳೆಯ ಸುದ್ದಿ ಕೊಡುತ್ತಾರೆ ಎನ್ನುವ ಭರವಸೆಯಲ್ಲಿ ಇದ್ದೆವು. ಅರ್ಧಗಂಟೆ ಸಮಯ ಕೊಡಬೇಕಿತ್ತು. ವಿರೋಧ ಪಕ್ಷಗಳನ್ನು ಕೇರ್ ಮಾಡಲ್ಲ. ಸ್ವತಃ ಅವರದ್ದೇ ಸರ್ಕಾರ ಇದೆ. ಅವರ ಸಿಎಂ ಮತ್ತು ಕಂದಾಯ ಮಂತ್ರಿಗಳ ಜತೆ ಆದ್ರೂ ಮಾತನಾಡಬಹುದಿತ್ತು ಎಂದು ಹೇಳಿದರು.

ಪ್ರಧಾನಿ ಬಂದಾಗ ನೆರೆ ಬಗ್ಗೆ ಚರ್ಚೆ ಆಗಲಿದೆ ಅಂತ ಹೇಳಿದ್ದರು. ಆದರೆ ಪ್ರಧಾನಿ ಭೇಟಿ ವೇಳೆ ನೆರೆಯ ಬಗ್ಗೆ ಪ್ರಸ್ತಾಪವೇ ಮಾಡಿಲ್ಲ.
ಇದು ರಾಜ್ಯಕ್ಕೆ ಪ್ರಧಾನಿ ಮಾಡಿರುವ ಅಪಮಾನ ಎಂದು ರಾಜ್ಯ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

25 ಜನ ಸಂಸದರನ್ನ ಕಳಿಸಿರುವ ರಾಜ್ಯವನ್ನ ತಾತ್ಸಾರ ಮನೋಭಾವನೆಯಿಂದ ನೋಡಿದೀರಿ. ರಷ್ಯಾಗೆ ಹೋಗೋಕೆ ಸಮಯ ಇದೆ. ಒಂದು ಮಿಲಿಯಲ್ ಡಾಲರ್ ಘೋಷಣೆ ಮಾಡೋದಕ್ಕೆ ಸಮಯ ಇದೆ. ಆದ್ರೆ ರಾಜ್ಯದ ವಿಚಾರದಲ್ಲಿ ಯಾಕೆ ಇಷ್ಟೊಂದು ಕ್ರೂರವಾಗಿ ನಡೆದುಕೊಳ್ಳುತ್ತಿದ್ದೀರಾ..? ಬಿಜೆಪಿ ನಾಯಕರ ಅಸಹಾಯಕತೆ ನೋಡಿ ನನಗೆ ವ್ಯಥೆ ಆಗ್ತಿದೆ ಎಂದು ವ್ಯಂಗ್ಯವಾಡಿದರು. 

ಇನ್ನು ಚಂದ್ರಯಾನ2 ಬಗ್ಗೆ ಪ್ರತಿಕ್ರಿಯಿಸಿದ ದಿನೇಶ್,  ಇಸ್ರೋ ಸಂಸ್ಥೆ ಮೇಲೆ ನಮಗೆ ಅತಿ ಹೆಚ್ಚು ವಿಶ್ವಾಸವಿದೆ. ವಿಜ್ಞಾನ ಕ್ಷೇತ್ರದಲ್ಲಿ ಬೇರೆ ದೇಶಗಳಿಗಿಂತ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದೆ. ಇಸ್ರೋ ವಿಜ್ಞಾನಿಗಳ ವೈಫಲ್ಯ ಅಲ್ಲ. ಅವರ ಜತೆ ನಾವಿದ್ದೇವೆ. ಕಾಂಗ್ರೆಸ್ ಅವರ ಕೆಲಸಕ್ಕೆ ಅಭಿನಂದನೆ ಸಲ್ಲಿಸುತ್ತದೆ. ಮುಂದೆ ದೊಡ್ಡ ಮಟ್ಟದ ಯಶಸ್ಸು ಅವರು ಪಡೆದುಕೊಳ್ಳುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ತಿಳಿಸಿದರು.