ಧರ್ಮ ಮೀರಿ ಸಂಗೀತ ಲೋಕ  ಬೆಳಗಿದವರು

ಫಯಾಜ್ ಖಾನ್

ಕನ್ನಡದ ಭಕ್ತಿ ಸಂಗೀತದಲ್ಲಿ ದೊಡ್ಡ ಹೆಸರು ಉಸ್ತಾದ್‌ ಫಯಾಜ್‌ ಖಾನ್‌. ಅವರ ಕಂಠದಲ್ಲಿ ಮೂಡಿಬಂದ ಭಕ್ತಿಗೀತೆಗಳು, ದೇವರ ನಾಮ ಗಳು, ದಾಸರ ಪದಗಳು ಹಾಗೂ ತತ್ವಪದಗಳು ಕನ್ನಡಿಗರ ಮನೆ-ಮನೆಯಲ್ಲಿ ಭಕ್ತಿಸುಧೆ ಹರಿಸುತ್ತಿವೆ. ಎಂತಹವರನ್ನೂ ಭಾವಪರವಶ ಗೊಳಿಸುವ ಅವರ ಮಾಧುರ್ಯ ತುಂಬಿದ ಗೀತೆಗಳು ಜನಪ್ರಿಯತೆ ಗಳಿಸಿವೆ. ಅವರ ದಾಸರ ಪದಗಳು, ಭಕ್ತಿಗೀತೆ ಕ್ಯಾಸೆಟ್‌ಗಳು ದಾಖಲೆ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ.

ಪರ್ವೀನ್ ಸುಲ್ತಾನಾ
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಶ್ರೇಷ್ಠ ಗಾಯಕಿಯರಲ್ಲಿ ಪರ್ವೀನ್ ಸುಲ್ತಾನಾ ಒಬ್ಬರು. ಶಾಸ್ತ್ರೀಯ ಸಂಗೀತದೊಂದಿಗೆ ಸಿನಿಮಾ ಹಿನ್ನೆಲೆ ಗಾಯಕಿಯಾಗಿಯೂ, ಭಜನ್‌ ಹಾಗೂ ಭಕ್ತಿಪ್ರಧಾನ ಗೀತೆಗಳ ಹಾಡು­ ಗಾರ್ತಿಯಾಗಿಯೂ ಅವರು ತಮ್ಮ ಪ್ರತಿಭೆ ಮೆರೆದಿದ್ದಾರೆ. ಭಜನ್‌, ಖಯಾಲ್‌, ಠುಮರಿ ಪ್ರಕಾರಗಳಲ್ಲಿ ಸಮಾನ ಸಾಧನೆ ಮಾಡಿರುವ ಪರ್ವೀನ್, ತಮ್ಮ 12ನೇ ವಯಸ್ಸಿಗೇ ಸಂಗೀತ ಕಛೇರಿ ನೀಡಿದ ಮೇರು ಕಲಾವಿದೆ.

ಉಸ್ತಾದ್‌ ಬಿಸ್ಮಿಲ್ಲಾ ಖಾನ್‌
ಉಸ್ತಾದ್‌ ಬಿಸ್ಮಿಲ್ಲಾ ಖಾನ್‌ ತಮ್ಮ ಜೀವಮಾನ ವಿಡೀ ಶಹನಾಯ್‌ ವಾದನದಲ್ಲಿ ಭಕ್ತಿ ಸಂಗೀತ ನುಡಿಸುವುದರಲ್ಲೇ ನೆಮ್ಮದಿ ಕಂಡು ಕೊಂಡವರು. ಕಾಶಿ ವಿಶ್ವನಾಥ ದೇವಾಲಯ ದಲ್ಲಿ ಶಹನಾಯ್‌ ನುಡಿಸುವುದಲ್ಲೇ ಸಂಗೀತದ ಸಾರ್ಥಕತೆಯಿದೆ ಎಂದು ನಂಬಿದ್ದ ಅವರು, ಶಹನಾಯ್‌ನಂತಹ ಜಾನಪದ ವಾದ್ಯಕ್ಕೆ ಶಾಸ್ತ್ರೀಯ ಮಾನ್ಯತೆ ತಂದುಕೊಟ್ಟಮಹಾನ್‌ ಕಲಾವಿದ. ಅವರ ಕಲೋಪಾಸನೆಗೆ ಯಾವ ಧರ್ಮದ ಹಂಗೂ ಇರಲಿಲ್ಲ.

ಅಬಿದಾ ಪರ್ವೀನ್

ಸೂಫಿ ಸಂಗೀತದ ರಾಣಿ ಎಂದೇ ಜನಪ್ರಿಯರಾಗಿರುವ ಅಬಿದಾ ಪರ್ವೀನ್, ಪಾಕಿಸ್ತಾನ ಮೂಲದವರಾದರೂ, ಸೂಫಿ, ಗಜಲ್‌, ಖವ್ವಾಲಿ, ಸಂಗೀತಪ್ರಿಯರ ನಡುವೆ ವಿಶ್ವಾದ್ಯಂತ ಆದರಣೀಯ ಗಾಯಕಿ. ಅಷ್ಟೇ ಆಕರ್ಷಕವಾಗಿ ಹಿಂದೂ ಭಜನ್‌, ಭಕ್ತಿ ಪ್ರಧಾನ ಗೀತೆಗಳನ್ನೂ ಹಾಡಿದ್ದಾರೆ. ಸೂಫಿ ಸಂತರ ದರ್ಗಾಗಳಲ್ಲಿಯೂ ಹಾಡುವ ಅವರು, ಸಂಗೀತ ಆಧ್ಯಾತ್ಮದ ಒಂದು ಮಾರ್ಗವೆಂದೇ ಭಾವಿಸಿ ಆರಾಧಿಸುತ್ತಿದ್ದಾರೆ.

ಏಸುದಾಸ್‌
ಬಹುಶಃ ಶಬರಿಮಲೈ ಅಯ್ಯಪ್ಪ ಸ್ವಾಮಿ ಸೇರಿದಂತೆ ಹಲವು ಹಿಂದೂ ದೇವರುಗಳ ಸ್ತುತಿಗಳನ್ನು ಏಸುದಾಸ್‌ ಅವರಲ್ಲದೆ ಇತರರ ದನಿಯಲ್ಲಿ ಕಲ್ಪಿಸಿಕೊಳ್ಳಲಾಗದ ಮಟ್ಟಿಗೆ ಇವರ ಭಕ್ತಿಗೀತೆಗಳು ನಮ್ಮ ಕಿವಿಯೊಳಗೆ ಇಳಿದಿವೆ. ಭಕ್ತಿ ಮತ್ತು ಭಾವದ ಅಪೂರ್ವ ರಸಪಾಕದ ಅವರ ಹಾಡುಗಾರಿಕೆಗೆ ಒಲಿಯದ ಮನಸ್ಸೇ ಇಲ್ಲ. ಮೂಲತಃ ಕ್ರಿಶ್ಚಿಯನ್ನರಾಗಿದ್ದರೂ ಅವರು ಕೊಲ್ಲೂರು ಮೂಕಾಂಬಿಕೆ ಹಾಗೂ ಗುರುವಾಯೂರಿನ ಕೃಷ್ಣನ ಆರಾಧಕರು. 

ಶಂಶಾದ್‌ ಬೇಗಂ
ಭಾರತೀಯ ಸಿನಿಮಾದ ಆರಂಭದ ಹಿನ್ನೆಲೆ ಗಾಯಕಿಯರಲ್ಲೇ ಮೇರು ಹಾಡುಗಾತಿ ಶಂಶಾದ್‌ ಬೇಗಂ. ಅತ್ಯಂತ ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿಬೆಳೆದವರು. 16ನೇ ವಯಸ್ಸಿನಲ್ಲೇ ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾದರು. ಬದುಕಿನಲ್ಲಷ್ಟೇ ಅಲ್ಲ, ತಮಗೆ ಒಲಿದ ಕಲೆಯಲ್ಲೂ ಎಲ್ಲ ಎಲ್ಲೆಗಳನ್ನು ಮೀರಿ ಮನುಷ್ಯತ್ವವೇ ಪರಮಧರ್ಮವೆಂದು ನಂಬಿ ಬಾಳಿದರು. ಸಿನಿಮಾಗಳಲ್ಲಿ ಸಾಕಷ್ಟುಭಕ್ತಿಗೀತೆ, ದೇವರ ನಾಮಗಳನ್ನೂ ಹಾಡಿದರು.

ಸಂತ ಶಿಶುನಾಳ ಷರೀಫ ಸಾಹೇಬ

ಗೋವಿಂದ ಗುರುವಿನ ಹೆಸರಿನಲ್ಲೇ ತತ್ವಪದಗಳನ್ನು ರಚಿಸಿ, ಹಾಡಿ, ಜನರ ಮೌಢ್ಯ-ಮಂಕುಗಳಿಗೆ ಮದ್ದು ನೀಡಿದವರು ಸಂತ ಶಿಶುನಾಳ ಷರೀಫ ಸಾಹೇಬರು. ಧಾರ್ಮಿಕ ಸಾಮರಸ್ಯ, ಅರಿವು, ಒಳಿತಿನ ಕುರಿತೇ ಹಾಡಿದ ಅವರು, ವೇದಪುರಾಣಗಳ ಸಾರವನ್ನು ಸರಳೀಕರಿಸಿ, ಬದುಕಿನ ಸತ್ವವನ್ನು ತಮ್ಮ ತತ್ವಪದಗಳಲ್ಲಿ ಹಿಡಿದು ಹುಲುಮಾನ ವರಿಗೆ ಕೊಟ್ಟವರು. ಹಾಕಿದ ಜನಿವಾರವಾ ಸದ್ಗುರುನಾಥ ಗೀತೆ ಇವರದೇ ರಚನೆ.

ಸುರಯ್ಯಾ

ಎರಡು ದಶಕಗಳ ಕಾಲ ಹಿಂದಿ ಸಿನಿಮಾ ರಂಗವನ್ನು ತನ್ನ ಅದ್ಭುತ ಗಾಯನ ಮತ್ತು ನಟನೆಯ ಮೂಲಕ ಆವರಿಸಿಕೊಂಡವರು ಸುರಯ್ಯಾ. ಸಿನಿಮಾದಲ್ಲಿ ಭಕ್ತಿಗೀತೆ, ದೇವರನಾಮ, ಗಜಲ್‌, ಲಘು ಸಂಗೀತವನ್ನು ಜನಪ್ರಿಯಗೊಳಿಸಿದವರಲ್ಲಿ ಒಬ್ಬರಾದ ಸುರಯ್ಯಾ, ಮಾಧುರ್ಯದ ರಾಣಿ ಎಂದೇ ಹೆಸರಾಗಿದ್ದರು. ತಮ್ಮ ಮೋಹಕ ರೂಪದಷ್ಟೇ ಆಕರ್ಷಕ ಕಂಠವನ್ನೂ ಹೊಂದಿದ್ದ ಅವರು ಅಸಂಖ್ಯಾತ ಹಿಂದೂಗಳ ಮನ ಗೆದ್ದಿದ್ದರು. 

ಮಹಮ್ಮದ್ ರಫಿ

ಹಿಂದಿ ಸೇರಿದಂತೆ ಬಹುತೇಕ ಭಾರತೀಯ ಭಾಷೆಗಳ ಸಿನಿಮಾಗಳಿಗೆ ಗಾಯನದ ಮಾಧುರ್ಯ ತುಂಬಿದ ಮೇರು ಗಾಯಕ. ಪ್ರೇಮಗೀತೆಗಳಿಂದ ಭಜನೆಗಳವರೆಗೆ, ದೇಶಭಕ್ತಿ ಗೀತೆಗಳಿಂದ ವಿಷಾದಗೀತೆಗಳವರೆಗೆ ರಫಿ ಸಾಹೇಬ್‌ ಹಾಡದ ಹಾಡುಗಳೇ ಇಲ್ಲ. ಬೈಜು ಬಾವ್ರಾದಂತಹ ಸಿನಿಮಾಗಳಲ್ಲಿನ ಅವರ ಭಜನೆ ಯಾರು ಮರೆಯಲು ಸಾಧ್ಯ? ಭಜನೆ ಗಳನ್ನೂ, ಖವ್ವಾಲಿಗಳನ್ನೂ, ಗಜಲ್‌ಗಳನ್ನೂ ಒಂದೇ ತಾದ್ಮಾತ್ಮ್ಯದಲ್ಲಿ ಹಾಡುತ್ತಿದ್ದವರು ರಫಿ.

ಬೇಗಂ ಅಕ್ತರ್
ಭಾರತೀಯ ಗಜಲ್‌ ಪರಂಪರೆಯ ಬಹುದೊಡ್ಡ ಗಾಯಕಿ. ಗಜಲ್‌ ಅಷ್ಟೇ ಅಲ್ಲದೆ ಹಿಂದೂಸ್ತಾನಿ ಸಂಗೀತದ ದಾದ್ರ, ಠುಮರಿ ಪ್ರಕಾರಗಳಲ್ಲೂ ತಮ್ಮ ಛಾಪು ಮೂಡಿಸಿದ ಮೇರು ಕಲಾವಿದೆ. ಗಜಲ್‌ ಹಾಗೂ ಹಿಂದೂಸ್ತಾನಿ ಸಂಗೀತದಷ್ಟೇ ಪ್ರಮುಖವಾಗಿ ಭಕ್ತಿಗೀತೆಗಳನ್ನೂ, ದೇವರ ನಾಮಗಳನ್ನೂ ಹಾಡಿದ್ದರು. 1974ರಲ್ಲಿ ಅಹಮದಾಬಾದ್‌ನ ಸಂಗೀತ ಕಛೇರಿಯಲ್ಲಿ ಹಾಡುವಾಗಲೇ ತೀವ್ರ ಅಸ್ವಸ್ಥರಾಗಿ ಸಾವು ಕಂಡರು.

--