ಕಾಂಗ್ರೆಸ್ ಮುಖಂಡರಾದ ಆಸ್ಕರ್ ಫರ್ನಾಂಡಿಸ್, ರಘು ಆಚಾರ್ಯ ಮೊದಲಾದವರು ಕೆ.ಪಿ.ನಂಜುಂಡಿ ನಾಮನಿರ್ದೇಶನಕ್ಕೆ ವಿರೋಧಿಸಿದ್ದು, ಹೈಕಮಾಂಡ್'ನಲ್ಲಿ ಇವರ ವಿರುದ್ಧ ಪ್ರಭಾವ ಬೀರಿದ್ದಾರೆ. ಇದರಿಂದಾಗಿ ನಂಜುಂಡಿಗೆ ವಿ.ಪ. ಅಭ್ಯರ್ಥಿಯಾಗುವ ಅವಕಾಶ ಕೈತಪ್ಪಿದೆ ಎನ್ನಲಾಗಿದೆ.
ಬೆಂಗಳೂರು(ಮೇ 02): ವಿಧಾನಪರಿಷತ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷ ಮೂವರು ನಾಯಕರ ಹೆಸರನ್ನು ಅಂತಿಮಗೊಳಿಸಿದೆ ಎಂಬ ಸುದ್ದಿ ವಿಧಾನಸೌಧ ಮೂಲಗಳಿಂದ ತಿಳಿದುಬಂದಿದೆ. ಕೊಂಡಜ್ಜಿ ಮೋಹನ್, ಸಿ.ಎಂ.ಲಿಂಗಪ್ಪ ಮತ್ತು ಪಿ.ಆರ್.ರಮೇಶ್ ಅವರಿಗೆ ವಿ.ಪ. ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ. ಈ ಮೂವರ ನಾಮ ನಿರ್ದೇಶನಕ್ಕೆ ಕಾಂಗ್ರೆಸ್ ಹೈಕಮಾಂಡ್ ಹಸಿರು ಸಿಗ್ನಲ್ ನೀಡಿದೆ. ಈ ಮೂವರಿರುವ ಪಟ್ಟಿಯನ್ನು ಕಾಂಗ್ರೆಸ್ ಪಕ್ಷವು ರಾಜ್ಯಪಾಲರಿಗೆ ಕಳುಹಿಸಿದೆ.
ಇದೇ ವೇಳೆ, ವಿಧಾನಪರಿಷತ್'ಗೆ ಆಯ್ಕೆಯಾಗುವ ಕೆ.ಪಿ.ನಂಜುಂಡಿಯವರ ಪ್ರಯತ್ನ ಈ ಬಾರಿಯೂ ವಿಫಲವಾಗಿದೆ. ಉದ್ಯಮಿ ಕೆ.ಪಿ.ನಂಜುಂಡಿಯವರ ಬದಲು ಮಾಜಿ ಮೇಯರ್ ಪಿ.ಆರ್.ರಮೇಶ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಕೆಲ ದಿನಗಳ ಹಿಂದಿನವರೆಗೂ ನಾಮನಿರ್ದೇಶನದ ಪಟ್ಟಿಯಲ್ಲಿ ಕೆ.ಪಿ.ನಂಜುಂಡಿಯವರ ಹೆಸರೂ ಇತ್ತೆಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿತ್ತು. ವಿಧಾನಪರಿಷತ್ ಸ್ಥಾನಕ್ಕಾಗಿ ನಂಜುಂಡಿಯವರು ಸಾಕಷ್ಟು ಲಾಬಿ ನಡೆಸಿದ್ದರು. ತಮ್ಮ ವಿಶ್ವಕರ್ಮ ಸಮುದಾಯದ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿ ತಾನೊಬ್ಬ ಸಮರ್ಥ ನಾಯಕ ಎಂದು ಬಿಂಬಿಸುವ ಕೆಲಸವನ್ನೂ ಅವರು ಮಾಡಿದ್ದರು. ಕೆ.ಪಿ.ನಂಜುಂಡಿಗೆ ವಿ.ಪ. ಸ್ಥಾನ ಬಹುತೇಕ ಖಚಿತವೆಂಬಂತಹ ಸ್ಥಿತಿ ಇತ್ತು. ಆದರೆ, ಕೊನೆಯ ಕ್ಷಣದಲ್ಲಿ ನಂಜುಂಡಿ ಹೆಸರು ಪಟ್ಟಿಯಿಂದ ಹೊರಬಿದ್ದಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಕೆಲ ಮೂಲಗಳ ಪ್ರಕಾರ, ಕಾಂಗ್ರೆಸ್ ಮುಖಂಡರಾದ ಆಸ್ಕರ್ ಫರ್ನಾಂಡಿಸ್, ರಘು ಆಚಾರ್ಯ ಮೊದಲಾದವರು ಕೆ.ಪಿ.ನಂಜುಂಡಿ ನಾಮನಿರ್ದೇಶನಕ್ಕೆ ವಿರೋಧಿಸಿದ್ದು, ಹೈಕಮಾಂಡ್'ನಲ್ಲಿ ಇವರ ವಿರುದ್ಧ ಪ್ರಭಾವ ಬೀರಿದ್ದಾರೆ. ಇದರಿಂದಾಗಿ ನಂಜುಂಡಿಗೆ ವಿ.ಪ. ಅಭ್ಯರ್ಥಿಯಾಗುವ ಅವಕಾಶ ಕೈತಪ್ಪಿದೆ ಎನ್ನಲಾಗಿದೆ.
