ಕೋಲ್ಕತ್ತಾ(ಜೂ.17): ಕೈ ಕಾಲುಗಳಿಗೆ ಸರಪಳಿ ಕಟ್ಟಿಕೊಂಡು ಬೋನಿನೊಳಗೆ ಬಂಧಿಯಾಗಿ, ನದಿಯಲ್ಲಿಳಿದು ಸುರಕ್ಷಿತವಾಗಿ ಮೇಲೆ ಬಂದು ಚಮತ್ಕಾರ ತೋರಿಸುತ್ತಿದ್ದ ಅಮೆರಿಕದ ಪ್ರಸಿದ್ಧ ಜಾದೂಗಾರ ಹ್ಯಾರಿ ಹೌದಿನಿ ಯಾರಿಗೆ ಗೊತ್ತಿಲ್ಲ ಹೇಳಿ?.

ಹ್ಯಾರಿ ಹೌದಿನಿಯ ಈ ಚಮತ್ಕಾರ ವಿಶ್ವ ಪ್ರಸಿದ್ಧ. ಆದರೆ ತಾನೂ ಆತನಂತೆಯೇ ಜಾದೂ ತೋರಿಸುತ್ತೇನೆ, ಭಾರತದ ಹ್ಯಾರಿ ಹೌದಿನಿಯಾಗುತ್ತೇನೆ ಎಂದು ಕೈಕಾಲು ಕಟ್ಟಿಕೊಂಡು ನದಿಗಿಳಿದ ಯುವಕನೋರ್ವ ನೀರುಪಾಲಾದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

ಚಂಚಲ್ ಲಹರಿ ಎಂಬ ಯುವಕ ಚಮತ್ಕಾರ ತೋರಿಸಲು ಹೋಗಿ ಗಂಗಾ ನದಿಯಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾನೆ. ಕೈ ಕಾಲುಗಳನ್ನು ಸರಪಳಿಯಿಂದ ಬಿಗಿದು, ಬೋನಿನೊಳಗೆ ಹೋಗಿ ನದಿಯಲ್ಲಿ ಮುಳುಗಿದ ಚಂಚಲ್, ಹಾವರಾ ಸೇತುವೆಯ 28ನೇ ಪಿಲ್ಲರ್ ಬಳಿ ಮೇಲೆ ಬರಲಾಗದೇ ಮುಳಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೌರಾ ಸೇತುವೆ ಸಮೀಪದ ಮಿಲೇನಿಯಂ ಪಾರ್ಕ್​ ಬಳಿ ತಾನು ಬಂಧಿಯಾಗಿದ್ದ ಪಂಜರದಿಂದ ಹೊರ ಬರಲಾರದೇ ಚಂಚಲ್ ಪ್ರಾಣ ಬಿಟ್ಟಿದ್ದಾನೆ ಎನ್ನಲಾಗಿದೆ. ಸದ್ಯ ಮುಳುಗು ತಜ್ಞರು ಜಲಸಮಾಧಿಯಾಗಿರುವ ಚಂಚಲ್ ಮೃತದೇಹಕ್ಕಾಗಿ ಶೋಧ ನಡೆಸುತ್ತಿದ್ದಾರೆ.