ಉಂಡು ಹೋದ ಕೊಂಡು ಹೋದ ಕೆ.ಬಿ ಕೋಳಿವಾಡ

First Published 25, Jul 2018, 7:22 AM IST
Koliwad offers to pay for furniture taken from Govt quarters
Highlights

ಸ್ಪೀಕರ್ ಆಗಿದ್ದ ಕೋಳಿವಾಡ ಅವರು ಇದೀಗ ಹೊಸ ವಿವಾದವೊಂದನ್ನು ಎಳೆದುಕೊಂಡಿದ್ದಾರೆ. ಕೋಳಿವಾಡ ಅವರು ಸರ್ಕಾರಿ ಬಂಗಲೆಯ ಪೀಠೋಪಕರಣದ ಜತೆಗೆ ವಿಧಾನಸಭೆ ಸಚಿವಾಲಯದ ಐಷಾರಾಮಿ ಸೋಫಾಗಳನ್ನು ಕೂಡ ಒಯ್ದಿ ದ್ದಾರೆ. 

ಬೆಂಗಳೂರು :  ಸ್ಪೀಕರ್ ಆಗಿದ್ದಾಗ ಹಲವು ವಿವಾದಾಸ್ಪದ ನಿರ್ಧಾರಗಳಿಂದ ಸುದ್ದಿಯಾಗಿದ್ದ ಕೆ.ಬಿ.ಕೋಳಿವಾಡ ಅವರು ಇದೀಗ ವಿಧಾನಸಭೆ ಸಚಿವಾಲಯದ ಪೀಠೋಪಕರಣಗಳನ್ನು ತಮ್ಮ ನಿವಾಸಕ್ಕೆ ಸಾಗಿಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಸ್ಪೀಕರ್ ಹುದ್ದೆಯಲ್ಲಿರುವವರಿಗೆ ನೀಡಲಾಗುವ ಸರ್ಕಾರಿ  ಬಂಗಲೆಯಲ್ಲಿ ಬಳಸುವ ಪೀಠೋಪಕರಣಗಳನ್ನು ಈ ಹಿಂದಿನ ಕೆಲ ಸ್ಪೀಕರ್‌ಗಳು ಅದರ ವೆಚ್ಚ ಭರಿಸಿ ತಮ್ಮ ನಿವಾಸಕ್ಕೆ ಒಯ್ದ ಉದಾಹರಣೆಯಿದೆ. 

ಆದರೆ, ಕೋಳಿವಾಡ ಅವರು ಸರ್ಕಾರಿ ಬಂಗಲೆಯ ಪೀಠೋಪಕರಣದ ಜತೆಗೆ ವಿಧಾನಸಭೆ ಸಚಿವಾಲಯದ ಐಷಾರಾಮಿ ಸೋಫಾಗಳನ್ನು ಕೂಡ ಒಯ್ದಿ ದ್ದಾರೆ. ಅದೂ ಯಾವ ವೆಚ್ಚವನ್ನೂ ಭರಿಸದೆ! ಕೋಳಿವಾಡ ಅವರ ಜಾಲಹಳ್ಳಿಯ ಗಂಗಮ್ಮ ವೃತ್ತದಲ್ಲಿರುವ ನಿವಾಸದಲ್ಲಿ ಈ  ಪೀಠೋಪಕರಣಗಳು ಪತ್ತೆಯಾದ ಬಗ್ಗೆ ಮಂಗಳವಾರ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆಯೇ ಕೋಳಿವಾಡ ಅವರು ವಿಧಾನಸಭೆ ಸಚಿವಾಲಯಕ್ಕೆ ಪತ್ರ ಬರೆದು ಪೀಠೋಪಕರಣದ ವೆಚ್ಚ ಭರಿಸುವುದಾಗಿ ಹೇಳಿದ್ದಾರೆ. 

ಆದರೆ, ನಿಯಮಗಳನ್ನು ಮೀರಿ ಸಚಿವಾಲಯದ ಪೀಠೋಪಕರಣಗಳನ್ನು ಸಾಗಿಸಿರುವುದು ವಿವಾದಕ್ಕೆ ಕಾರಣ ವಾಗಿದೆ. 14 ನೇ ವಿಧಾನಸಭೆಯ ಸ್ಪೀಕರ್ ಆಗಿದ್ದ ಸಂದರ್ಭ ದಲ್ಲಿ ಅವರಿಗೆ ನೀಡಲಾಗಿದ್ದ ಸರ್ಕಾರಿ ವಸತಿ ಗೃಹಕ್ಕೆ ಸಚಿವಾಲ ಯದಿಂದ ಬಳಕೆಗೆಂದು ಬೆಲೆಬಾಳುವ ಐಷಾರಾಮಿ ಎಂಡಿ ಎಫ್ ಬೋರ್ಡ್ ಸ್ಟೋರೇಜ್ ಸೌಲಭ್ಯ ಹೊಂದಿರುವ 2 ಮಂಚಗಳು, ಒಂದು ಸಣ್ಣ ಮಂಚ ನೀಡಲಾಗಿತ್ತು.  

ಅಲ್ಲದೆ ಇದರ ಜೊತೆಗೆ ಒಂದು ಬಫೆಲೋ ಲೆದರ್ ಇಟಾಲಿಯನ್ ಸೋಫಾ ಸೆಟ್, ತಲಾ ಒಂದು ಮಸಾಜ್ ಚೇರ್, ಪೀಜನ್ ಬಾಕ್ಸ್ ನೀಡಲಾಗಿತ್ತು. ಅವರ ಅಧಿಕಾರ ಮುಗಿದ ನಂತರ ಸರ್ಕಾರಿ ವಸತಿ ಗೃಹ ಮತ್ತು ಸಚಿವಾಲಯದಿಂದ ನೀಡಲಾದ ಸಕಲ ವಸ್ತುಗಳನ್ನು ಹಿಂದಿರುಗಿಸಬೇಕಾದ್ದು ನಿಯಮ. ಆದರೆ, ಸಚಿವಾಲಯ ಕೊಟ್ಟಿದ್ದ ಪೀಠೋಪಕರಣಗಳಲ್ಲಿ ಕೆಲವು ಜಾಲಹಳ್ಳಿಯ ಗಂಗಮ್ಮ ವೃತ್ತ ಸಮೀಪವಿರುವ ಕೋಳಿವಾಡ ಅವರ ನಿವಾಸದಲ್ಲಿ ಪತ್ತೆಯಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಸಚಿವಾಲಯದ ಸ್ವತ್ತಾದ ಪೀಠೋಪಕರಣ ಗಳನ್ನು ತಮ್ಮ ಮನೆಗೆ ಸಾಗಿಸಿದ್ದಾರೆ ಎಂದು ಆರೋಪಿಸಲಾಗಿದೆ. 

ಈ ವಿಚಾರ ವಿವಾದವಾಗುತ್ತಿದ್ದಂತೆಯೇ ವಿಧಾನಸಭೆ ಸಚಿವಾಲಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿರುವ ಕೆ.ಬಿ.ಕೋಳಿವಾಡ ಅವರು, ಪೀಠೋಪಕರಣಗಳ ಮೊತ್ತವನ್ನು ಪಾವತಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಪತ್ರದಲ್ಲಿ ಈಗಾಗಲೇ ಮಸಾಜ್ ಚೇರ್ ಮತ್ತು ಪೀಜನ್ ಬಾಕ್ಸ್‌ಗಳನ್ನು ಸಚಿವಾಲಯಕ್ಕೆ ಹಿಂದಿರುಗಿಸಲಾಗಿದೆ. ಉಳಿದ ನಾಲ್ಕು ಪೀಠೋಪಕರಣಗಳಿಗೆ ಎಷ್ಟು ಹಣ ಪಾವತಿಸಬೇಕು ಎಂದು ತಿಳಿಸಿದರೆ ಪಾವತಿಸುವುದಾಗಿ ತಿಳಿಸಿದ್ದಾರೆ. 

ಕೇಳಿದರೆ ಅವರಿಗೇ ಮಾರಾಟ:  ಸಚಿವಾಲಯದ ಪೀಠೋಪಕರಣ ದುರ್ಬಳಕೆಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ  ಕಾರ್ಯದರ್ಶಿ ಎಸ್.ಮೂರ್ತಿ ಸ್ಪಷ್ಟನೆ ನೀಡಿದ್ದು, ಕೆ.ಬಿ.ಕೋಳಿವಾಡ ಸಭಾಧ್ಯಕ್ಷರಾಗಿ ದ್ದಾಗ ಕ್ರೆಸೆಂಟ್ ರಸ್ತೆಯಲ್ಲಿ ನಿವಾಸ ಕೊಟ್ಟಿದ್ದೆವು. ಆ ವೇಳೆ ಸರ್ಕಾರಿ ವಸತಿ ಗೃಹದ ಬಳಕೆಗೆ ಪೀಠೋಪಕರಣಗಳನ್ನು ಕೊಟ್ಟಿದ್ದು, ಅವುಗಳಲ್ಲಿ ನಾಲ್ಕು ಪೀಠೋಪಕರಣಗಳ ದರ ನಿಗದಿ ಮಾಡಿದರೆ ಪಾವತಿ ಮಾಡುತ್ತೇನೆ ಎಂದು ಕೋಳಿವಾಡ ಅವರು ಸ್ಪಷ್ಟನೆ ನೀಡಿದ್ದಾರೆ.

ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ದರ ನಿಗದಿ ಮಾಡಲಾಗುವುದು. ಅಲ್ಲದೇ ಪೀಠೋಪಕರಣಗಳನ್ನು ದಾಸ್ತಾನು ಮಾಡಲು ನಮ್ಮ ಬಳಿ ಜಾಗವಿಲ್ಲ. ಸಂಪ್ರದಾಯದ ಪ್ರಕಾರ ಪೀಠೋಪಕರಣ ಬಳಕೆ ಮಾಡಿದವರು ಕೇಳಿದರೆ ಬೆಲೆ ನಿಗದಿ ಮಾಡಿ ಅವರಿಗೇ ನೀಡುತ್ತೇವೆ ಎಂದು ತಿಳಿಸಿದ್ದಾರೆ. 

loader