Asianet Suvarna News Asianet Suvarna News

ಜಲಪ್ರಳಯವನ್ನು ಕಣ್ಣಾರೆ ಕಂಡ ಕೊಡಗು ಸಂತ್ರಸ್ತನ ಅನುಭವ ಕಥನವಿದು!

ಅದೇ ಸೂರ್ಯ, ಚಂದ್ರ ಗ್ರಹಣ ಆಯ್ತಲ್ಲ ಅದರ ಮಾರನೆ ದಿನ ಇರಬೇಕು, ಆವತ್ತು ಭೂಮಿ ನಡುಗಿತ್ತು. ಆಮೇಲೆ ಮಳೆಯೋ ಮಳೆ. ಅದರ ಮಾರನೆ ದಿನ ನಾನು ತೋಟದ ಕಡೆ ಹೋಗಿ ನೋಡ್ತೀನಿ ಎಲ್ಲಾ ನಾಶ. ಎಲ್ಲಾ ಅಂದರೆ ಎಲ್ಲಾ.
ಏನು ಅಂತ ಕೇಳ್ಬೇಡಿ. ಅದನ್ನು ವರ್ಣನೆ ಮಾಡೋದಕ್ಕೆ ನನ್ನಿಂದ ಆಗೋದಿಲ್ಲ. - ಕೊಡಗು ಸಂತ್ರಸ್ತನ ಅನುಭವದ ಮಾತುಗಳಿವು. 

Kodagu flood victim experience with Kannada Prabha
Author
Bengaluru, First Published Aug 26, 2018, 9:53 AM IST

ಕೊಡಗು (ಆ. 26): ನಮ್ಮ ಊರು ಮೊಕ್ಕಂದೂರು. ಆವತ್ತಿನ ಮಹಾಮಳೆಯಿಂದ ಇಲ್ಲಿಯೂ ಬಹಳ ಮನೆಗಳು ಹೋಗಿವೆ. ಇನ್ನೂ ಮೇಲೆ ಹೋದರೆ ತಂತಿಪಾಲ ಸಿಗುತ್ತೆ. ನಮ್ಮ ಊರಲ್ಲಿ ಸುಮಾರು ಏಳೆಂಟುನೂರು ಕುಟುಂಬ ಇದೆ. ಈ ಭಾಗಕ್ಕೆ ಇದು ದೊಡ್ಡ ಊರೇ. ಒಂದು ಮನೆಯಲ್ಲಿ ಏನಿಲ್ಲವೆಂದರೂ ನಾಲ್ಕು ಮಂದಿಯಂತಾದರೂ ಹತ್ತಿರ ಹತ್ತಿರ ಮೂರು ಸಾವಿರ ಮಂದಿ ಇದ್ದಾರೆ.ನಮ್ಮ ಜಮೀನಿನಿಂದ ಆಚೆಗೆ ತುಂಬಾ ಮನೆ ಹೋಗಿದೆ.

ಅದರಲ್ಲಿ ಕೆ.ಬಿ. ಶಿವಪ್ಪ ಅಂತ ಅವರ ಮನೆಯೂ ಒಂದು. ಮಳೆಬಿದ್ದು ರಸ್ತೆ ರಾಡಿಯಾಗಿದೆ. ತುಂಬಾ ದಿನದಿಂದ ಯಾರಿಗೂ ಕೆಲಸವೂ ಇಲ್ಲ. ಮಳೆ ಬಂದರೆ ಇಲ್ಲಿ ತಿರುಗಾಡುವುದೇ ಕಷ್ಟ. ಇನ್ನು ಜಮೀನಿನಲ್ಲಿ ಕೆಲಸ ಮಾಡುವುದು ಎಂಥ ಇರುತ್ತದೆ ಅಲ್ವಾ? ನಾನು ಮಕ್ಕಂದೂರಿಗೆ ಬಂದು ಬಹಳ ವರ್ಷವೇ ಆಯ್ತು. ಮೊದಲು ಸೋಮವಾರಪೇಟೆ ಕಡೆ ಇದ್ದೆ. ಆ ಮೇಲೆ ಇಲ್ಲಿಗೆ ಬಂದೆ. ನಾನು ನೋಡಿಕೊಳ್ತಿರೋ ತೋಟ ಸುಮಾರು ಏಳು ಎಕ್ರೆ ಇದೆ. ನಮ್ಮ ಮನೆಯೇನೂ ತೋಟಕ್ಕೆ ಹೊಂದಿಕೊಂಡಿಲ್ಲ. ಹಾಲೇರಿ ರಸ್ತೆಯಲ್ಲಿ ಮನೆ ಇದೆ. ಆದ್ದರಿಂದ ನಮ್ಮ ಮನೆ ಉಳಿಯಿತು.

ಸರಸರ ಅಂತ ಎಲ್ಲಾ ಹೋಯ್ತು!

ಮಹಾಮಳೆ ಬಂತಲ್ಲ ಅವತ್ತು ಎಂಥ ಶಬ್ದ ಬಂತು ಗೊತ್ತುಂಟ? ಕೇಳಬೇಕು ಅದನ್ನ. ಇಳಿಜಾರಲ್ಲಿ ಬೈಕ್ ಹೋಗುವಾಗ ಸರಸರಸರ ಅಂತ ಶಬ್ದ ಬರುತ್ತಲ್ಲ ಹಾಗೆ. ಇಲ್ಲಿ ಮಳೆ ಹಿಡಿದು ಸುಮಾರು ಒಂದೂವರೆ ತಿಂಗಳೇ ಕಳೀತು. ಆದರೆ ಜಾಸ್ತಿಯಾಗಿದ್ದು ಅದೇ ಸೂರ್ಯ, ಚಂದ್ರ ಗ್ರಹಣ ಆಯ್ತಲ್ಲ ನೋಡಿ, ಆಗ. ಆಮೇಲೆ ನೋಡಿ ಬಂತು ಬಂತು ಮಳೆ, ಅಯ್ಯೋ... ಭಯಂಕರ ಮಳೆ. ಎಲ್ಲಾ ಅಲೋಲ ಕಲ್ಲೋಲವಾಯ್ತು. ಗ್ರಹಣ ಆದ ಮಾರನೆ ದಿನ ಇರಬೇಕು, ಆವತ್ತು ಭೂಮಿ ನಡುಗಿತ್ತು.

ಆಮೇಲೆ ಮಳೆಯೋ ಮಳೆ. ಆ ಮಳೆಗೆ ಜನ ಭಯಪಟ್ಟು ಹೋಗಿದ್ದಾರೆ. ಎಷ್ಟೋ ಜನ ಮನೆ ಬಿಟ್ಟು ಬೇರೆ ಊರಿಗೂ ಹೋಗಿದ್ದಾರೆ. ಜೋರು ಮಳೆಯಾಗಿ ಪ್ರವಾಹ ಬಂತಲ್ಲ, ಅದರ ಮಾರನೆ ದಿನ ನಾನು ತೋಟದ ಕಡೆ ಹೋಗಿ ನೋಡ್ತೀನಿ.. ಎಲ್ಲಾ ನಾಶ. ಎಲ್ಲಾ ಅಂದರೆ ಎಲ್ಲಾ. ಏನು ಅಂತ ಕೇಳ್ಬೇಡಿ. ಅದನ್ನು ವರ್ಣನೆ ಮಾಡೋದಕ್ಕೆ ನನ್ನಿಂದ ಆಗೋದಿಲ್ಲ.

50 ಅಡಿ ಆಳದ ಪ್ರಪಾತ ಸೃಷ್ಟಿ

ನಾನು ನೋಡಿಕೊಳ್ತಿರೋ ಜಮೀನು ಎಲ್ಲಾ ಜಮೀನಿನಂತೆ ಇಳಿಜಾರಾಗಿಯೇ ಇದೆ. ಆದರೆ ಮಳೆಯ ರಭಸಕ್ಕೆ ಭೂಮಿ ಕುಸಿದಿದೆ. ಅಬ್ಬಬ್ಬಾ ಅಂದ್ರೂ ಒಂದೈವತ್ತು ಅಡಿ ಆಳವಾಗಿದೆ. ನಾವು ನಿಂತಂತಯೇ ಇದ್ದ ಭೂಮಿ ಆ ಮಟ್ಟಿಗೆ ಕುಸಿದು ಹೋಗಿದೆ. ಹಾಗೆ ಮುಂದೆ ಕಣ್ಣಾಯಿಸಿದರೆ ನಮ್ಮ ಜಮೀನೇ ಇಲ್ಲ. ಹೀಗೆ ಸುಮಾರು ಒಂದೂವರೆ ಎಕರೆ ಜಾಗ ಕುಸಿದಿದೆ. ಜಮೀನಿನಿಂದಾಚೆಗೆ ಒಂದಷ್ಟು ಪೊದೆ, ಆಮೇಲೆ ಹಳ್ಳವಿತ್ತು. ಈಗ ನೋಡಿದರೆ ಜಮೀನೇ ಪಾತಾಳ ಸೇರಿದೆ. ಹಾಗೆ ಸ್ವಲ್ಪ ಮುಂದೆ ಹೋದರೆ ರಸ್ತೆ ಉದ್ದಕ್ಕೂ ಲೈಟಿನ ಕಂಬಗಳು ನೆಲಕ್ಕುರುಳಿವೆ.

ಅಂದಿನಿಂದಲೂ ಊರಲ್ಲಿ ಕರೆಂಟೇ ಇಲ್ಲ. ಜಮೀನಿಗೆ ಹೋಗುವ ಹಾದಿಯ ಈ ಮೂಲೆಯ ಮನೆಗಳು ಕುಸಿದುಹೋಗಿವೆ. ಇನ್ನು ಸ್ವಲ್ಪ ಮುಂದೆ ಹೋದರೆ ಶಿವಪ್ಪ ಅವರ ಮನೆ. ಮನೆಗೆ ಹೊಂದಿಕೊಂಡಂತೆಯೇ ಜಮೀನು ಇದೆ. ನಮ್ಮ ಕಾಲ ಮುಂದಿನ ಹಳ್ಳವೇ ಶಿವಪ್ಪ ಅವರಿಗಿದ್ದ ಚಿಕ್ಕ ಜಮೀನು (1.20 ಎಕರೆ). ಇನ್ನೂ ಸ್ವಲ್ಪ ದೂರ ಕಣ್ಣಾಯಿಸಿ ನೋಡಿದರೆ ಮನೆ ಕಾಣುತ್ತದೆ. ಮನೆ ಹೇಗೆ ಬಿದ್ದಿದೆ ಗೊತ್ತುಂಟ, ಒಂದಡಿ ಗೋಡೆಯೂ ಉಳಿಯದ ಹಾಗೆ ಇಡೀ ಮನೆ ಕುಸಿದು ನೀರಿನ
ಹೊಡೆತಕ್ಕೆ ಕೊಚ್ಚಿ ಹೋಗಿದೆ. ಅವರಿಗೆ ಇಬ್ಬರು ಮಕ್ಕಳು.

ಅವರೂ ಅಲ್ಲಿ ಇಲ್ಲಿ ಕೆಲಸಕ್ಕೆ ಹೋಗ್ತಾ ರೆ. ತಮಗಿದ್ದ ಚಿಕ್ಕ ಜಮೀನಿನಲ್ಲಿ ಒಂದಷ್ಟು ಕಾಫಿ, ಮೆಣಸು, ಬಾಳೆ ಬೆಳೆದು ಜೀವನ ಮಾಡ್ತಾ ಇದ್ದರು. ಈಗ ಅವರಿಗೆ ಅದೂ ಇಲ್ಲ. ತಮ್ಮ ಮನೆಯ ಹಿಂದಿನ ಜಾಗ ದಲ್ಲಿ ಸದ್ಯಕ್ಕೆ ಉಳಿದಿದ್ದಾರೆ.
ಶಿವಪ್ಪ ಅವರ ಮನೆ ಯಿಂದ ಇನ್ನೂ ಕೆಳಗೆ ಹೋದರೆ ನಾಲ್ಕು ಮನೆ ಬಿದ್ದಿದೆ. ಅದೃಷ್ಟ ಎಂದರೆ ಯಾರಿಗೂ ಏನೂ ಆಗಿಲ್ಲ. ಎಲ್ಲರೂ ಆವತ್ತು ಪ್ರವಾಹದ ರಾತ್ರಿ ಹೊರಗೆ ಓಡಿ ಬಂದು ಪ್ರಾಣ ರಕ್ಷಣೆ ಮಾಡಿಕೊಂಡರು.

ಗದ್ದೆ ಯಾವುದು ಹೊಳೆ ಯಾವುದು?

ಮಳೆ ನೀರು ಎಲ್ಲಿಂದ ಬರುತ್ತೆ ಗೊತ್ತುಂಟ? ನಮ್ಮೂರಿನ ಮೇಲೆ ಒಂದು ದೊಡ್ಡ ಗುಡ್ಡ ಇದೆ. ಅದೇ ತಂತಿಪಾಲ. ಅಲ್ಲಿಂದ ಭಾರೀ ಪ್ರಮಾಣದಲ್ಲಿ ನೀರು ಬಂದಿದೆ. ಗುಡ್ಡ ಕುಸಿದು ತುಂಬಾ ಮರ ಬಿದ್ದುಹೋಗಿವೆ. ಮನೆಗಳೂ ಕುಸಿದು ಹೋಗಿವೆ. ಎಂಥ ಮಾಡೋದು ಹೇಳಿ. ಅಪ್ಪಾ, ಇಂತಹ ಮಳೆ ನಾನು ಜೀವಮಾನದಲ್ಲೇ ನೋಡಿಲ್ಲ. ನಮ್ಮೂರಿನ ಕೆಳಗೇ ಪಿ.ಕೆ. ಉತ್ತಪ್ಪ ಅಂತ ಒಬ್ಬರ ಕುಟುಂಬ ಇದೆ. ಮನೆಗೆ ಹೊಂದಿಕೊಂಡಂತೆಯೇ ಅವರ ತೋಟವೂ ಇದೆ. ಅವರ ಮನೆಯ
ಮೇಲಿನ ಒಂದಷ್ಟು ಕಾಫಿ ಗಿಡ ಚೆನ್ನಾಗಿಯೇ ಇವೆ. ಆದರೆ ಮನೆಯ ಹಿಂದಿನ ಭತ್ತದ ಗದ್ದೆ ನೀರಿನಲ್ಲಿ ಮುಳುಗಿ ಹೋಗಿದೆ.

ವರ್ಷಕ್ಕೊಮ್ಮೆ ಒಂದು ಬೆಳೆ ಭತ್ತ ತೆಗೆಯುತ್ತಿದ್ದರು. ತಂತಿಪಾಲದಿಂದ ಬಂದ ನೀರು ಇವರ ಗದ್ದೆಯ ಮೇಲೆ ಹರಿದು ಒಂದೂ ಸಸಿ ಇಲ್ಲದಂತೆ ಮಾಡಿತು. ಗದ್ದೆ ಯಾವುದು, ಹೊಳೆ ಸಾಲು ಯಾವುದು ಒಂದೂ ತಿಳಿಯದಂತೆ ಆಗಿದೆ. ಬಿ.ಎ. ಕೃಷ್ಣಪ್ಪ ಎಂಬವರ ಕುಟುಂಬವೂ ನಮ್ಮ ಊರಲ್ಲೇ ಇದೆ. ಅವರ ಮಗಳು ಕಟ್ಟಿಸುತ್ತಿದ್ದ ಮನೆಯೂ ಕೊಚ್ಚಿಕೊಂಡು ಹೋಗಿದೆ. ಗೋಡೆಯಷ್ಟೇ ನಿರ್ಮಾಣವಾ ಗಿತ್ತು. ಇನ್ನೂ ಆರ್‌ಸಿಸಿ ಹಾಕಿಸಿರಲಿಲ್ಲ. ಅಷ್ಟರಲ್ಲಿ ಮಳೆ ಬಂದು ಗೋಡೆಯೂ ಹೋಯ್ತು.

ಮುಂದೆ ಜೀವನಕ್ಕೇನು?  ಗೊತ್ತಿಲ್ಲ
ಈಗ ಊರಿನ ಬಸ್ ನಿಲ್ದಾಣದ ಬಳಿಯ ಸರ್ಕಾರಿ ಶಾಲೆಯಲ್ಲಿ ಕಾಳಜಿ ಕೇಂದ್ರ ಇದೆ. ಅಲ್ಲಿ ಅಕ್ಕಿ, ಬೇಳೆ, ಚಾಪೆ, ಬೆಡ್ ಶೀಟ್, ಬಟ್ಟೆ ಕೊಡುತ್ತಾರೆ. ಈಗೇನೋ ಕೊಡ್ತಾರೆ, ಆದ್ರೆ ಎಷ್ಟು ದಿನಾಂತ ಹೀಗೆ ಹೇಳಿ? ಮನೆ ಹೋಗಿದೆ ಅಂತ ಎಲ್ಲಿಯವರೆಗೆ ನೆಂಟರ ಮನೆಯಲ್ಲಿ, ನೆರೆ ಹೊರೆಯವರ ಮನೆಯಲ್ಲಿ ಇರಲು ಸಾಧ್ಯ? ಹೋಗ್ಲಿ ಮನೆ ಬಿದ್ದು ಹೋದ ಜಾಗದಲ್ಲೇ ಮನೆ ಕಟ್ಟೋಣ ಅಂದ್ರೆ ಅದೂ ಆಗೋದಿಲ್ಲ. ಮಣ್ಣೆಲ್ಲ ಸಡಿಲವಾಗಿದೆ. ಮನೆ ಕಟ್ಟಿದರೂ ಉಳಿಯೋದಿಲ್ಲ. ಭೂಮಿಯೇ ಕುಸಿದು ಹೋಗಿರೋದರಿಂದ ಜಮೀನನ್ನೂ ಸರಿ ಮಾಡೋಕೆ ಆಗೋದಿಲ್ಲ.

ಇದೆಲ್ಲ ಸರಿಹೋಗೋದಕ್ಕೆ ಏನಿಲ್ಲವೆಂದರೂ ಆರೇಳು ವರ್ಷವಾದರೂ ಬೇಕು. ಅಲ್ಲಿವರೆಗೆ ಜೀವನಕ್ಕೆ ಎಂಥ ಮಾಡೋದು ಗೊತ್ತಿಲ್ಲ. ಹೇಗೋ ಗಂಜಿ ಕುಡಿದು ಬದುಕುತ್ತಿದ್ದೇವೆ. ನೆರೆ ಕೊಟ್ಟ ದೇವರೇ ನಮಗೀಗ ಬದುಕನ್ನೂ ಕೊಡಬೇಕು. ಕೊಡುತ್ತಾನಾ?

-ಹೆನ್ರಿ ಮಕ್ಕಂದೂರು 

ಕೊಡಗು ನೆರೆ ಸಂತ್ರಸ್ತ 
 

Follow Us:
Download App:
  • android
  • ios