Asianet Suvarna News Asianet Suvarna News

4 ದಿನವಾಯ್ತು ಬಿಸಿಲೂರು ಕಲಬುರಗಿಯಲ್ಲಿ 'ಸೂರ್ಯ'ನ ದರುಶನವೇ ಇಲ್ಲ..!

ಉರಿ ಬೇಸಿಗೆ ಹಾಗೂ ಪ್ರಖರ ಬಿಸಿಲಿನಿಂದಾಗಿ ಕಲಬುರಗಿಗೆ ಸೂರ್ಯ ನಗರಿ, ಬಿಸಿಲೂರು ಎಂಬ ಅನ್ವರ್ಥಕ ನಾಮಗಳಿವೆ, ಈ ಅಡ್ಡ ನಾಮಗಳಿಂದಲೇ ಕಲಬುರಗಿಗೆ ಹೆಚ್ಚಿನ ಖ್ಯಾತಿಯೂ ಇದೆ. ಆದರೀಗ ' ಫಾರ್ ಎ ಚೆಂಜ್ ' ಕಳೆದ 3 ವರ್ಷಗಳ ನಂತರ ಈ ಬಾರಿ ಶ್ರಾವಣ ಮಾಸದಲ್ಲಿ ಕಲಬುರಗಿ ಅಪ್ಪಟ 'ಮಳೆಯೂರು' ಆಗಿ ಮಾರ್ಪಟ್ಟಿದೆ..!

Known For Hot Weather Kalaburagi  Spends 4 Days Without Sun
Author
Bengaluru, First Published Aug 3, 2019, 4:39 PM IST

ಕಲಬುರಗಿ, (ಆ.03): ಕಳೆದ ನಾಲ್ಕು ದಿನದಿಂದ ಕಲಬುರಗಿ ಮಹಾನಗರ ಹಾಗೂ ಜಿಲ್ಲೆಯಾದ್ಯಂತ ದಟ್ಟ ಮೋಡಗಳು ಕವಿದುಕೊಂಡಿರುವ ಕಪ್ಪನೆಯ ಆಗಸ, ಜಿಟಿಜಿಟಿ ಸುರಿಯುವ ಮಳೆಯಿಂದಾಗಿ ಸೂರ್ಯ ನಗರಿ ತೊಯ್ದು ತೊಪ್ಪೆಯಾಗುತ್ತಿದೆ. ಬಿಸಿಲೂರು ಮಂಜಿನ ನಗರಿಯಾಗಿದೆಯಲ್ಲದೆ ಮಳೆಯ ಊರಾಗಿ ಎಲ್ಲರಿಗೂ ಆಪ್ಯಾಯಮಾನವಾಗಿದೆ.

ಕಲಬುರಗಿ ನಗರ ಹಾಗೂ ಜಿಲ್ಲೆಯ ಇಲ್ಲಿನ ಜನರೇ ಹೇಳುವಂತೆ ಮಳೆ ಬರಲಿ ಬಿಡ್ರಿ, ಕಳೆದ 3 ವರ್ಷದಿಂದ ಇಂತಹ ಮಳೆ ವಾತಾವರಣ ಕಂಡೇ ಇರಲಿಲ್ಲ, ಈಗಲಾದರೂ ನಾಲ್ಕು ದಿನ ಮಳೆ ಸುರಿಯುತ್ತಿದೆ, ಮಳೆಗಾಲ ಅಂತಾದರೂ ನಮಗೆಲ್ಲರಿಗೂ ಅನಿಸಿಕೆಯಾಗುತ್ತಿದೆಯಲ್ಲ ಎಂದು ಮಳೆಯ ಆಗಮನವನ್ನು ಹರುಷದಿಂದ ಸ್ವಾಗತಿಸಿ ಸಂಭ್ರಮಿಸುತ್ತಿದ್ದಾರೆ.

ಭಾರೀ ಮಳೆ : 4 ಜಿಲ್ಲೆಗಳಿಗೆ ಪ್ರವಾಹ ಭೀತಿ

ರೈತರ ಮೊಗದಲ್ಲಿ ಮಂದಹಾಸ
ಈ ಮಳೆ ನಗರ/ ಪಟ್ಟಣ ವಾಸಿಗರಲ್ಲಿ ಹೊಸತನಕ್ಕೆ ಕಾರಣವಾದರೆ ರೈತರ ಮೊಗದಲ್ಲಂತೂ ಮಂದಹಾಸ ತಾನಾಗಿಯೇ ಮೂಡಿದೆ. ಮುಂಗಾರು ಹಂಗಾಮಿನ ಬೆಳೆಗೆ ಈ ಪರಿ ವೈನಾಗಿ, ಹದವಾಗಿ ಮಳೆಯೇ ಸುರಿದಿರಿಲ್ಲ, ಹೀಗಾಗಿ ಇದೀಗ ಸುರಿಯುತ್ತಿರೋ ಮಳೆ ಸುರಿಯಲಿ ಬಿಡ್ರಿ, ಬೆಳೆಗೆ ತುಂಬ ಅನುಕೂಲವಾಗಿದೆ. ಹೆಸರು, ಉದ್ದು, ಎಳ್ಳು ವೈನಾಗಿ ಬೆಳೆಯುತ್ತವೆ ಎಂದು ಹರುಷದಲ್ಲಿದ್ದಾರೆ.

ಆಗಸ್ಟ್‌, ಸೆಪ್ಟೆಂಬರ್‌ ತಿಂಗಳಲ್ಲಿ ಸಾಮಾನ್ಯ ಮಳೆ

ಮಳೆಯ ಕೊರತೆ ಕಾಡಿದ್ದಾಗ ಚಿಂತೆಯಲ್ಲಿದ್ದ ಜಿಲ್ಲೆಯ ರೈತರು ಈ ಬಾರಿ ಶ್ರಾವಣ ಆರಂಭದೊಂದಿಗೇ ಮಳೆಯ ಶ್ರಾವಣಕ್ಕೆ ಹುರುಪಿನಿಂದ ಸ್ವಾಗತಿಸುತ್ತಿದ್ದಾರೆ. ಶ್ರಾವಣ ಈ ಬಾರಿ ಮಳೆಯೊಂದಿಗೆ ಚಿತ್ತಾರ ಮೂಡಿಸಿತಲ್ಲ... ಎಂದು ದೇವರಿಗೆ ಕೋಟಿ ನಮನ ಸಲ್ಲಿಸುತ್ತಿದ್ದಾರೆ.

ಗರಿಗೆದರಿವೆ ರೈತರ ಕೃಷಿ ಚಟುವಟಿಕೆ
ಮಳೆ ಆರಂಭದಲ್ಲಿ ಸುರಿದು ನಿಂತು ಹೋದಾಗ ಮಂಕಾಗಿದ್ದ ಮುಂಗಾರು ಬಿತ್ತನೆ, ಕಳೆ, ಸದೆ ತೆಗೆಯುವ ಚಟುವಟಿಕೆಗಳು ಕಲಬುರಗಿಯಲ್ಲಿ ಮತ್ತೆ ಗರಿಗೆದರಿವೆ. ಜುಲೈ ತಿಂಗಳಲ್ಲಿ ವಾಡಿಕೆಗಿಂತಲೂ (265 ಮಿಮಿ) ಕಮ್ಮಿ (189 ಮಿಮಿ) ಮಳೆ ಸುರಿದು ರೈತರನ್ನು ಚಿಂತೆಗೆ ತಳ್ಳಿತ್ತು.

ಶೇ. 40 ರಷ್ಟು ಕಾಡಿದ ಮಳೆ ಅಭಾವದಿಂದ ರೈತರು ತುಟ್ಟಿ ಬೀಜ- ಗೊಬ್ಬರ ಭೂಮ್ಯಾಗ ಹಾಕಿದ್ದಾಯ್ತು, ಮುಂದೇನೋ ದೇವರೆ ಎಂದು ಚಿಂತೆಯಲ್ಲಿದ್ದಾಗಲೇ ಈ ಮಳೆ ಸುರಿಯುತ್ತಿರುವದರಿಂದ ರೈತರ ಸಮುದಾಯದಲ್ಲಿ ನೆಮ್ಮದಿ. ವಾತಾವರಣ ಮೂಡಿದೆ.

ಜೂನ್ ತಿಂಗಳಲ್ಲೂ ವಾಡಿಕೆಗಿಂತಲೂ ಮಳೆ ಕಮ್ಮಿಯಾಗಿತ್ತು ವಾಡಿಕೆಯಂತೆ ಜೂನ್‍ನಲ್ಲಿ 113 ಮಿಮಿ ಮಳೆ ಸುರಿಯಬೇಕಿದ್ದ ಜಾಗದಲ್ಲಿ ಕೇವಲ 95 ಮಿಮಿ ಮಳೆಯಾಗಿತ್ತು, ಹೀಗಾಗಿ ಮಳೆಗಾಲವೇ ಇಲ್ಲವೇನೋ ಎಂಬಂತೆ ಜಿಲ್ಲೆಯ ಜನತೆ ಹೈಹಾರಿದ್ದರು. ಈ ಹಂತದಲ್ಲೇ ಉತ್ತಮ ಹಾಗೂ ಹದವಾದಂತಹ ಮಳೆ ಸಣ್ಣಗೆ ಜಿಲ್ಲೆಯಾದ್ಯಂತ ಸುರಿಯುವ ಮೂಲಕ ಜನಮನಕ್ಕೆ ಹರುಷದ ಅನುಭೂತಿ ನೀಡಿದೆ.

ಶೇ. 89 ರಷ್ಟು ಮುಂಗಾರು ಬಿತ್ತನೆ
ಜಿಲ್ಲೆಯಲ್ಲಿ ಇದುವರೆಗೂ ಶೇ. 89 ರಷ್ಟು ಮುಂಗಾರು ಬಿತ್ತನೆಯಾಗಿದೆ. ಮಳೆ ನಿರೀಕ್ಷೆಯಲ್ಲಿಯೇ ರೈತರೆಲ್ಲರೂ ಬಿತ್ತನೆ ಮಾಡಿದ್ದರು, ಇದೀಗ ದೇವರು ಅವರ ನಿರೀಕ್ಷೆಯಂತೆಯೇ ಮಳೆ ಸುರಿಸುತ್ತ ಹೊಸ ಚೈತನ್ಯ ಮೂಡಿಸಿದ್ದಾನೆ ಎಂಬ ಮಾತುಗಳು ಕೇಳಿಬರುತ್ತಿವೆ.

Follow Us:
Download App:
  • android
  • ios