ಗುಜರಾತ್ ಚುನಾವಣಾ ರ್ಯಾಲಿ ಸಂದರ್ಭದಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದ ವಿಡಿಯೋವೊಂದು ಬಹುದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆ ವಿಡಿಯೋದಲ್ಲಿ ರಾಹುಲ್ ಗಾಂಧಿ ‘ ಆಲೂವನ್ನು ಚಿನ್ನವಾಗಿ ಪರಿವರ್ತಿಸಬಹುದು’ ಎಂದಿರುವ ತುಣುಕಿದ್ದು ಸಾಮಾಜಿಕ ಮಾಧ್ಯಮದಲ್ಲಿ ಇದು ನಗೆಪಾಟಲಾಗಿ ಹರಿದಾಡುತ್ತಿದೆ.

ಹೊಸದಿಲ್ಲಿ(ನ.20): ಚುನಾವಣೆ ಸಂದರ್ಭದಲ್ಲಿ ಒಂದು ಪಕ್ಷ ಮತ್ತೊಂದು ಪಕ್ಷದ ಬಗ್ಗೆ ಆಪಾದಿಸುವುದು, ಗೇಲಿ ಮಾಡುವುದು ಸಾಮಾನ್ಯ. ಈ ಪ್ರವೃತ್ತಿ ಎಂದಿಗೂ ಬದಲಾದ ಉದಾಹರಣೆಯೇ ಇಲ್ಲ, ಬದಲಾಗುವುದೂ ಇಲ್ಲ. ಇದೀಗ ರಾಜಕೀಯ ಅಂಗಳದಲ್ಲಿ ಗುಜರಾತ್ ಚುನಾವಣೆಯದ್ದೇ ಮಾತು, ಆರೋಪ ಪ್ರತ್ಯಾರೋಪ.

ಗುಜರಾತ್ ಚುನಾವಣಾ ರ್ಯಾಲಿ ಸಂದರ್ಭದಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದ ವಿಡಿಯೋವೊಂದು ಬಹುದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆ ವಿಡಿಯೋದಲ್ಲಿ ರಾಹುಲ್ ಗಾಂಧಿ ‘ ಆಲೂವನ್ನು ಚಿನ್ನವಾಗಿ ಪರಿವರ್ತಿಸಬಹುದು’ ಎಂದಿರುವ ತುಣುಕಿದ್ದು ಸಾಮಾಜಿಕ ಮಾಧ್ಯಮದಲ್ಲಿ ಇದು ನಗೆಪಾಟಲಾಗಿ ಹರಿದಾಡುತ್ತಿದೆ. ಆ ವಿಡಿಯೋವನ್ನು ಹಲವರು ಶೇರ್ ಕೂಡಾ ಮಾಡಿದ್ದಾರೆ.

ಹಾಗಾದರೆ ನಿಜವಾಗಿಯೂ ರಾಹುಲ್ ಗಾಂಧಿ ಹೀಗೆ ಹೇಳಿದ್ದರೇ ಎಂದು ಇದರ ಸತ್ಯಾಸತ್ಯತೆಯನ್ನು ತಿಳಿಯಲು ಹೊರಟಾಗ ಬಯಲಾದ ಸತ್ಯವೇ ಬೇರೆಯದಾಗಿತ್ತು.

ರಾಹುಲ್ ಗಾಂಧಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡುವ ವೇಳೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೇವಲ ಭರವಸೆ ನೀಡುತ್ತಿದೆ. ಆಲೂವನ್ನು ಬಂಗಾರ ಮಾಡುತ್ತೇವೆಂದು ಜನರಿಗೆ ಮಂಕುಬೂದಿ ಎರಚುವ ಕೆಲಸ ಮಾಡುತ್ತಿದೆ ಎಂದು ಆಪಾದಿಸಿದ್ದರು. ಆದರೆ ಈ ವಿಡಿಯೋದಲ್ಲಿ ಮೋದಿ ಅವರ ಹೆಸರಿರುವ ತುಣುಕನ್ನು ಕತ್ತರಿಸಿ ಆಲೂ ಮತ್ತು ಬಂಗಾರದ ತುಣುಕನ್ನು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.

ನರೇಂದ್ರ ಮೋದಿ ಸರ್ಕಾರದ ಆಶ್ವಾಸನೆಯನ್ನು ಟೀಕಿಸುವಾಗ ರಾಹುಲ್‌ಗಾಂಧಿ ಈ ಆಲೂ ಮತ್ತು ಬಂಗಾರವನ್ನು ರೂಪಕವಾಗಿ ಬಳಸಿದ್ದಾರೆ. ಹಾಗಾಗಿ ಈ ವೈರಲ್ ಆದ ವಿಡಿಯೋ ಸುಳ್ಳು ಎಂಬಂತಾಯಿತು.