ರೌಡಿಶೀಟ್'ನಲ್ಲಿರುವ ರೌಡಿಗಳ ಪ್ರತಿಯೊಂದು ವಿವರವನ್ನೂ ಪೊಲೀಸರು ಕಲೆಹಾಕಿ ದಾಖಲಿಸುತ್ತಾರೆ. ಏನೇ ಮಾಹಿತಿ ಇದ್ದರೂ ಓಕೆ. ರೌಡಿ ಏನು ಕುಡಿಯುತ್ತಾನೆ; ಯಾವ ಖಯಾಲಿ ಇರುತ್ತೆ; ಯಾವ ವಾಹನ ಓಡಿಸುತ್ತಾನೆ; ಹುಡ್ಗೀರ ಜೊತೆ ಸಂಬಂಧ ಹೇಗೆ; ಕುಟುಂಬ, ಸ್ನೇಹಿತರ ವಿವರ; ರಾಜಕೀಯ ನಂಟು ಇತ್ಯಾದಿ ಏನೇ ಮಾಹಿತಿ ಸಿಕ್ಕರೂ ಅದರಲ್ಲಿ ದಾಖಲಿಸಲಾಗುತ್ತದೆ.

ಬೆಂಗಳೂರು(ಏ. 17): ಮೊನ್ನೆ ಮೊನ್ನೆ ರೌಡಿ ನಾಗನ ಮನೆಯಲ್ಲಿ ಕೋಟ್ಯಂತರ ಕ್ಯಾಷ್ ಪತ್ತೆಯಾದ ಸುದ್ದಿ ಕೇಳಿದ್ದೇವೆ. ರೌಡಿಗಳ ಬಗ್ಗೆ ಪತ್ರಿಕೆಗಳಲ್ಲಿ, ಮ್ಯಾಗಜಿನ್'ಗಳಲ್ಲಿ, ಟಿವಿಗಳಲ್ಲಿ ಓದಿ, ನೋಡಿ ಅರಿತುಕೊಂಡಿರುತ್ತೇವೆ. ರೌಡಿಗಳ ವಿಚಿತ್ರ ಹೆಸರುಗಳನ್ನು ನೋಡಿ ಅಚ್ಚರಿಪಟ್ಟಿರುತ್ತೇವೆ. ಇವರು ಯಾಕೆ ರೌಡಿಸಂಗೆ ಬಂದ್ರು? ಇವರ ಹೆಸರ್ಯಾಕೆ ವಿಚಿತ್ರ? ಎಲ್ಲರೂ 'ಎಣ್ಣೆ' ಹೊಡೀತಾರಾ? ಎಲ್ರಿಗೂ ಹುಡ್ಗಿ ಶೋಕಿ ಇರುತ್ತಾ? ಪೊಲೀಸರ ರೌಡಿಶೀಟ್ ಹೇಗೆ ತಯಾರುತ್ತೆ? ಇತ್ಯಾದಿ ಸಣ್ಣದೊಡ್ಡ ಕುತೂಹಲಗಳು ನಮ್ಮಲ್ಲನೇಕರಿಗೆ ಇರುತ್ತವೆ. ಇಂತಹ ಕೆಲ ಪ್ರಶ್ನೆಗಳಿಗೆ ಒಂದಷ್ಟು ಸಮಾಧಾನಗಳನ್ನು ನೀಡುವ ಯತ್ನ ಇದು.

ವಿಚಿತ್ರ ಹೆಸರುಗಳು:
ರೌಡಿಗಳ ವಿಚಿತ್ರ ಹೆಸರಿಗೆ ವಿವಿಧ ಕಾರಣಗಳಿರಬಹುದು. ತಮ್ಮನ್ನು ಮಾರ್ಕೆಟಿಂಗ್ ಮಾಡಿಕೊಳ್ಳಲು ರೌಡಿಗಳೇ ಸ್ವತಃ ಹೆಸರಿಟ್ಟುಕೊಳ್ಳುವುದುಂಟು. ರೌಡಿಯ ಸಹಚರರು ಆ ಹೆಸರಿಡಬಹುದು. ರೌಡಿಯ ಬಣ್ಣ ಅಥವಾ ಕಸುಬು ಅಥವಾ ನಡವಳಿಕೆ ಇತ್ಯಾದಿಗಳು ಆತನ ಪರ್ಯಾಯ ಹೆಸರಿಗೆ ಕಾರಣವಾಗಬಹುದು. ರೌಡಿ 'ಗಾಂಧಿ'ಗೆ ಆ ಹೆಸರು ಬರಲು ಆತ ಶಾಲೆಯ ದಿನಗಳಲ್ಲಿ 'ಗಾಂಧಿ' ಪಾತ್ರ ಮಾಡುತ್ತಿದ್ದುದು ಕಾರಣವಾಯಿತಂತೆ. ಜನರಲ್ಲಿ ಭೀತಿ ನಿರ್ಮಿಸಲು ಅಥವಾ ಬೇರೆ ರೌಡಿಗಳಿಂದ ತಾನು ವಿಭಿನ್ನವಾಗಿ ಗುರುತಿಸಿಕೊಳ್ಳಲು ರೌಡಿಗಳು ವಿಚಿತ್ರ ಹೆಸರುಗಳನ್ನು ಇಟ್ಟುಕೊಳ್ಳಬಹುದು. ಒಂದೇ ಹೆಸರಿನ ಹಲವು ವ್ಯಕ್ತಿಗಳಿರುತ್ತಾರೆ. ಆಗ ಪ್ರತ್ಯೇಕ ಗುರುತಿಗಾಗಿ ಹೆಸರಿನ ಜೊತೆಗೆ ಬೇರೆ ವಿಶೇಷಣಗಳನ್ನು ನೀಡಬಹುದು. ಉದಾಹರಣೆಗೆ, ಸೀನ ಎಂಬ ಹೆಸರು ರೌಡಿಗಳಲ್ಲಿ ಕಾಮನ್. ಹೀಗಾಗಿ ಡಾಬಾ ಸೀನ, ಕುಳ್ಳ ಸೀನ, ಮಡಕೆ ಸೀನ, ಮೊಟ್ಟೆ ಸೀನ ಹೀಗೆ ಬೇರೆ ಹೆಸರುಗಳನ್ನಿಟ್ಟುಕೊಳ್ಳುತ್ತಾರೆ.

ಸೈಕಲ್ ರವಿ, ಸೆಕ್ಸಿ ಗುಂಡ, ಕೆಂಚ ಕುಮಾರ, ಬೇಕರಿ ರಘು, ಕೇಬಲ್ ಶ್ರೀಧರ, ಬ್ರೇಕ್ ಜಗ್ಗಿ, ಆ್ಯಸಿಡ್ ರಾಜ, ಮೂಗ ನಾಗ, ಸೈಲೆಂಟ್ ಸುನೀಲ, ಕೊರಂಗು ಕೃಷ್ಣ, ಒಂಟೆ ರೋಹಿತ ಹೀಗೆ ವಿಶೇಷ ಹೆಸರುಳ್ಳ ರೌಡಿಗಳು ಬೆಂಗಳೂರಲ್ಲಿ ಬಹಳವಿದ್ದಾರೆ.

ರೌಡಿಶೀಟ್ ಹೇಗೆ ತಯಾರಾಗುತ್ತೆ?
ರೌಡಿಶೀಟ್ ಎಂಬುದು ಅಪರಾಧಿಗಳ, ಸಮಾಜಘಾತುಕ ಶಕ್ತಿಗಳ ವಿವರವಿರುವ ಪುಸ್ತಕ. ಪ್ರತೀ ಪೊಲೀಸ್ ಠಾಣೆಯಲ್ಲಿ ಅದರ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿರುವ ಇಂತಹ ರೌಡಿಗಳ ಹೆಸರು ಈ ರೌಡಿಶೀಟ್'ನಲ್ಲಿರುತ್ತವೆ. ಅಷ್ಟು ಸುಲಭಕ್ಕೆ ಪೊಲೀಸರು ಯಾವುದೇ ವ್ಯಕ್ತಿಯ ಹೆಸರನ್ನು ಪಟ್ಟಿಗೆ ಸೇರಿಸಲು ಸಾಧ್ಯವಿಲ್ಲ. ಅದಕ್ಕೆಂದೇ ಕಾನೂನು ನಿಯಮಗಳಿವೆ. ವ್ಯಕ್ತಿಯ ವಿರುದ್ಧ ಕನಿಷ್ಠ ಎರಡು ಪ್ರಕರಣಗಳು ದಾಖಲಾಗಿ ಚಾಲ್ತಿಯಲ್ಲಿರಬೇಕು. ಆ ಪ್ರಕರಣಗಳಲ್ಲಿ ಚಾರ್ಜ್'ಶೀಟ್ ಕೂಡ ಸಲ್ಲಿಸಿರಬೇಕು. ಅಂತಹ ವ್ಯಕ್ತಿಯ ಹೆಸರನ್ನು ಮಾತ್ರ ರೌಡಿ ಶೀಟ್'ನಲ್ಲಿ ದಾಖಲಿಸಬಹುದು.

ರೌಡಿಶೀಟ್'ನಲ್ಲಿರುವ ರೌಡಿಗಳ ಪ್ರತಿಯೊಂದು ವಿವರವನ್ನೂ ಪೊಲೀಸರು ಕಲೆಹಾಕಿ ದಾಖಲಿಸುತ್ತಾರೆ. ಏನೇ ಮಾಹಿತಿ ಇದ್ದರೂ ಓಕೆ. ರೌಡಿ ಏನು ಕುಡಿಯುತ್ತಾನೆ; ಯಾವ ಖಯಾಲಿ ಇರುತ್ತೆ; ಯಾವ ವಾಹನ ಓಡಿಸುತ್ತಾನೆ; ಹುಡ್ಗೀರ ಜೊತೆ ಸಂಬಂಧ ಹೇಗೆ; ಕುಟುಂಬ, ಸ್ನೇಹಿತರ ವಿವರ; ರಾಜಕೀಯ ನಂಟು ಇತ್ಯಾದಿ ಏನೇ ಮಾಹಿತಿ ಸಿಕ್ಕರೂ ಅದರಲ್ಲಿ ದಾಖಲಿಸಲಾಗುತ್ತದೆ. ವಿಚಾರಣೆಗಳಿಂದ, ಇನ್'ಫಾರ್ಮರ್'ಗಳಿಂದ, ನೆರೆಹೊರೆಯವರಿಂದ ಅಥವಾ ಬೇರಾವುದಾದರೂ ಮೂಲಗಳಿಂದ ಪೊಲೀಸರು ರೌಡಿಗಳ ಬಗ್ಗೆ ಮಾಹಿತಿ ಕಲೆಹಾಕುತ್ತಾರೆ.

ಮೂರು ಭಾಗ:
ಬೆಂಗಳೂರಲ್ಲಿ ಸುಮಾರು 10 ಸಾವಿರ ರೌಡಿಗಳಿರಬಹುದೆಂಬ ಅಂದಾಜಿದೆ. ಪೊಲೀಸರು ರೌಡಿಗಳನ್ನು ಸಾಮಾನ್ಯವಾಗಿ ಎ, ಬಿ ಮತ್ತು ಸಿ ಈ ಮೂರು ವಿಭಾಗಗಳಾಗಿ ವರ್ಗೀಕರಿಸುತ್ತಾರೆ. ಎ ವರ್ಗದ ರೌಡಿಗಳ ಕಾರ್ಯಾಚರಣೆ ಸಿಟಿ ಲಿಮಿಟ್'ನಲ್ಲೇ ಇರುತ್ತದೆ. ಬಿ ವರ್ಗದ ರೌಡಿಗಳು ನಗರದ ಹೊರಗಿನಿಂದ ರೌಡಿಸಂ ಚಟುವಟಿಕೆಗಳನ್ನು ನಿಯಂತ್ರಿಸುತ್ತಿರುತ್ತಾರೆ. ಇವರನ್ನು ಪೊಲೀಸರು ಔಟ್ ಆಫ್ ವೀವ್ (OV) ಎಂದು ಕರೆಯುವುದುಂಟು. ಇನ್ನು, ಸಿ ವರ್ಗದ ರೌಡಿಗಳು ಈಗಷ್ಟೇ ಫೀಲ್ಡ್'ಗೆ ಎಂಟ್ರಿ ಕೊಟ್ಟಿರುವ ಹೊಸಮುಖಗಳಾಗಿರುತ್ತಾರೆ.

ರೌಡಿಗಳ ಖಯಾಲಿ:
ಪೊಲೀಸರ ದಾಖಲೆಗಳಲ್ಲಿ ರೌಡಿಗಳ ಬಗ್ಗೆ ಕೆಲ ಆಸಕ್ತಿಕರ ಮಾಹಿತಿಯೂ ಇರುತ್ತದೆ. ಉದಾಹರಣೆಗೆ, ರೌಡಿಗಳ ಡ್ರಿಂಕ್ಸ್ ಖಯಾಲಿ. ಇಂಟರೆಸ್ಟಿಂಗ್ ಅಂದ್ರೆ, ಬಹುತೇಕ ರೌಡಿಗಳು ವಿಸ್ಕಿಗಿಂತ ಬ್ರಾಂದಿಗೆ ಹೆಚ್ಚು ಆದ್ಯತೆ ಕೊಡುತ್ತಾರೆ. ಅಷ್ಟೇ ಅಲ್ಲ, ಬ್ರಾಂದಿಯಲ್ಲೂ "ಮ್ಯಾನ್ಷನ್ ಹೌಸ್" ಬ್ರ್ಯಾಂಡ್'ನ ಬ್ರಾಂದಿಯೇ ಬೇಕು.

(ಮಾಹಿತಿ: ಬಿನಯ್ ವಲ್ಸನ್, ಟೈಮ್ಸ್ ಆಫ್ ಇಂಡಿಯಾ)
ಫೋಟೋದಲ್ಲಿರುವುದು ಬಾನಸವಾಡಿ ಠಾಣೆಯ ಪೊಲೀಸರು