ಐಸಿಸಿ ಮಂಗಳವಾರ ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿ ಬಿಡುಗಡೆಗೊಳಿಸಿದ್ದು ಲಂಕಾ ವಿರುದ್ಧ ಮುಕ್ತಾಯಗೊಂಡ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಆರಂಭಿಕ ಬ್ಯಾಟ್ಸ್‌ಮನ್ ಕರ್ನಾಟಕದ ಕೆ.ಎಲ್.ರಾಹುಲ್, ಶಿಖರ್ ಧವನ್ ವೃತ್ತಿಜೀವನದ ಶ್ರೇಷ್ಠ ಸ್ಥಾನಕ್ಕೇರಿದ್ದಾರೆ.
ನವದೆಹಲಿ(ಆ.16): ಐಸಿಸಿ ಮಂಗಳವಾರ ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿ ಬಿಡುಗಡೆಗೊಳಿಸಿದ್ದು ಲಂಕಾ ವಿರುದ್ಧ ಮುಕ್ತಾಯಗೊಂಡ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಆರಂಭಿಕ ಬ್ಯಾಟ್ಸ್ಮನ್ ಕರ್ನಾಟಕದ ಕೆ.ಎಲ್.ರಾಹುಲ್, ಶಿಖರ್ ಧವನ್ ವೃತ್ತಿಜೀವನದ ಶ್ರೇಷ್ಠ ಸ್ಥಾನಕ್ಕೇರಿದ್ದಾರೆ.
ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್'ನಲ್ಲಿ ರಾಹುಲ್ 9ನೇ ಸ್ಥಾನ ಪಡೆದಿದ್ದಾರೆ. ಧವನ್ 28ನೇ ಸ್ಥಾನಕ್ಕೇರಿದ್ದಾರೆ. ಚೇತೇಶ್ವರ್ ಪೂಜಾರ 4, ನಾಯಕ ವಿರಾಟ್ ಕೊಹ್ಲಿ 5 ಮತ್ತು ಅಜಿಂಕ್ಯ ರಹಾನೆ 10ನೇ ಸ್ಥಾನ ಪಡೆದಿದ್ದಾರೆ. ಪಲ್ಲೆಕೆಲೆ ಟೆಸ್ಟ್'ನಲ್ಲಿ ಚೊಚ್ಚಲ ಶತಕದ ಸಾಧನೆ ಮಾಡಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ರ್ಯಾಂಕಿಂಗ್'ನಲ್ಲಿ 45 ಸ್ಥಾನ ಮೇಲಕ್ಕೆ ಜಿಗಿತ ಕಂಡಿದ್ದು, 68ನೇ ಸ್ಥಾನಕ್ಕೇರಿದ್ದಾರೆ.
ಇನ್ನು ಐಸಿಸಿ ನಿಯಮ ಉಲ್ಲಂಘನೆ ಆರೋಪದಲ್ಲಿ ಶ್ರೀಲಂಕಾ ವಿರುದ್ಧದ 3ನೇ ಟೆಸ್ಟ್ನಿಂದ ಅಮಾನತು ಗೊಂಡಿದ್ದ ರವೀಂದ್ರ ಜಡೇಜಾ ಟೆಸ್ಟ್ ಆಲ್ರೌಂಡರ್ ರ್ಯಾಂಕಿಂಗ್'ನಲ್ಲಿ ಕುಸಿತ ಕಂಡಿದ್ದಾರೆ. ವಾರದ ಹಿಂದಷ್ಟೇ ಅಗ್ರ ಸ್ಥಾನಕ್ಕೇರಿದ್ದ ಜಡೇಜಾ, ಸದ್ಯ 2ನೇ ಸ್ಥಾನ ಪಡೆದಿದ್ದಾರೆ. ಬಾಂಗ್ಲಾದ ಆಲ್ರೌಂಡರ್ ಶಕೀಬ್ ಅಲ್ ಹಸನ್ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ಆದರೆ ಟೆಸ್ಟ್ ಬೌಲಿಂಗ್ ವಿಭಾಗದಲ್ಲಿ ಜಡೇಜಾ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
