ನವದೆಹಲಿ (ಡಿ. 24): ಇತ್ತೀಚಿನ ಪಂಚರಾಜ್ಯಗಳ ಚುನಾವಣಾ ಸೋಲಿಗೆ ರೈತರು ಅನುಭವಿಸುತ್ತಿರುವ ಸಂಕಷ್ಟಗಳೇ ಪ್ರಮುಖ ಕಾರಣ ಎಂದು ಮನಗಂಡಿರುವ ಕೇಂದ್ರ ಸರ್ಕಾರ, ಶೀಘ್ರವೇ ರೈತರ ಪರವಾದ ಹಲವು ಯೋಜನೆ ಘೋಷಿಸುವ ಸಾಧ್ಯತೆ ಇದೆ.

ಈ ಪೈಕಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮೂಲಕ ವಿತರಿಸುವ ಸಾಲದ ಪ್ರಮಾಣ ಹೆಚ್ಚಿಸುವುದು ಮತ್ತು ಸಾಲ ಮರುಪಾವತಿಗೆ ಇರುವ ಅವಧಿಯನ್ನು ವಿಸ್ತರಿಸುವುದು ಪ್ರಮುಖವಾಗಿದೆ ಎಂದು ಮೂಲಗಳು ತಿಳಿಸಿವೆ.

ಹಾಲಿ, ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮೂಲಕ ವರ್ಷಕ್ಕೆ 3 ಲಕ್ಷ ರು.ವರೆಗೆ ಸಾಲ ಪಡೆಯುವ ಅವಕಾಶ ಇದೆ. ಇದನ್ನು 5 ಲಕ್ಷಕ್ಕೆ ವಿಸ್ತರಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಜೊತೆಗೆ ಕಾರ್ಡ್‌ ಮೂಲಕ ಪಡೆದ ಸಾಲವನ್ನು ಪ್ರತಿ ವರ್ಷ ನವೀಕರಣಗೊಳಿಸುವ ಬದಲಾಗಿ, ನವೀಕರಣದ ಅವಧಿಯನ್ನು 3 ವರ್ಷಕ್ಕೆ ವಿಸ್ತರಿಸುವ ಬಗ್ಗೆಯೂ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಹೀಗಾದಲ್ಲಿ ರೈತರು ಪ್ರತಿ ವರ್ಷ ಬಡ್ಡಿ ಪಾವತಿ ಮಾಡಿದರೆ ಸಾಕು. ಸಾಲದ ಮೊತ್ತವನ್ನು ಮರುಪಾವತಿಸಲು 3 ವರ್ಷ ಸಮಯ ಸಿಗುತ್ತದೆ ಎನ್ನುವುದು ಸರ್ಕಾರದ ಲೆಕ್ಕಾಚಾರವಾಗಿದೆ.

ಇನ್ನು ತೆಲಂಗಾಣ ಸರ್ಕಾರ, ಜಮೀನು ಹೊಂದಿರುವ ರೈತರಿಗೆ ಪ್ರತಿ ಎಕರೆಗೆ ವಾರ್ಷಿಕ 8000 ರು.ಗಳನ್ನು ನಗದು ರೂಪದಲ್ಲಿ ನೀಡುವ ರೈತಬಂಧು ಯೋಜನೆ ಬಗ್ಗೆ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಯಿತಾದರೂ, ಅದರ ಲಾಭ, ಜಮೀನು ಹೊಂದಿರುವ ಮೂಲ ರೈತರಿಗೆ ಮಾತ್ರ ಸಿಗುತ್ತದೆ. ಗುತ್ತಿಗೆ ಆಧಾರದಲ್ಲಿ ಜಮೀನು ಪಡೆದು ಕೃಷಿ ಮಾಡುವ ರೈತರಿಗೆ ಯಾವುದೇ ಲಾಭವಾಗದು ಎನ್ನುವ ಕಾರಣಕ್ಕಾಗಿ ತಕ್ಷಣಕ್ಕೆ ಆ ಯೋಜನೆ ಬಗ್ಗೆ ಮುಂದುವರೆಯದೇ ಇರುವ ನಿರ್ಧಾರಕ್ಕೆ ಬರಲಾಯಿತು ಎನ್ನಲಾಗಿದೆ.