ಪಾಂಡಿಚೇರಿ: ಗ್ರಾಮಗಳು ಬಯಲು ಶೌಚ ಮುಕ್ತ ಮತ್ತು ತ್ಯಾಜ್ಯ ಮುಕ್ತವಾಗದಿದ್ದಲ್ಲಿ, ಗ್ರಾಮಗಳಿಗೆ ನೀಡುವ ಉಚಿತ ಅಕ್ಕಿ ವಿತರಣೆ ರದ್ದು ಪಡಿಸಲಾಗುತ್ತದೆ ಎಂಬ ಆದೇಶವೊಂದನ್ನು ಪಾಂಡಿಚೇರಿಯ ಲೆಫ್ಟಿನೆಂಟ್‌ ಗವರ್ನರ್‌ ಕಿರಣ್‌ ಬೇಡಿ ಜಾರಿಗೊಳಿಸಿದ್ದು, ಬಳಿಕ ವಾಪಸ್ ಪಡೆದಿದ್ದಾರೆ.

ಕೇಂದ್ರಾಡಳಿತ ಪ್ರದೇಶ ಪುದುಚೇರಿ ಅರ್ಧದಷ್ಟುಜನ ಸಂಖ್ಯೆ ಉಚಿತ ಅಕ್ಕಿ ಫಲಾನುಭವಿಗಳಾಗಿದ್ದಾರೆ. ಗ್ರಾಮಗಳು ಸ್ವಚ್ಛವಾಗಿವೆ ಎಂದು ಸ್ಥಳೀಯ ಶಾಸಕರು ಮತ್ತು ಗ್ರಾಮ ಪಂಚಾಯತ್‌ ಆಯುಕ್ತರು ಜಂಟಿ ದೃಢೀಕರಣ ನೀಡಿದಲ್ಲಿ ಮಾತ್ರ ಉಚಿತ ಅಕ್ಕಿ ವಿತರಿಸಲಾಗುತ್ತದೆ ಎಂದು ಬೇಡಿ ಆದೇಶದಲ್ಲಿ ತಿಳಿಸಲಾಗಿದೆ.

ಈ ಕುರಿತು ಅವರು ಮುಖ್ಯಮಂತ್ರಿ ನಾರಾಯಣಸಾಮಿಗೆ ಪತ್ರ ಬರೆದಿದ್ದಾರೆ. ಸ್ವಚ್ಛ ಭಾರತ ಅಭಿಯಾನದಡಿ ಗ್ರಾಮಗಳ ಶುಚಿತ್ವಕ್ಕಾಗಿ ನಡೆಸುತ್ತಿರುವ ಪ್ರಯತ್ನಗಳು ನಿಧಾನವಾಗುತ್ತಿರುವ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಲ್ಕು ವಾರಗಳೊಳಗೆ ಗ್ರಾಮಗಳನ್ನು ಸ್ವಚ್ಛ ಮಾಡಬೇಕು ಎಂದು ಅವರು ಗಡುವು ಕೂಡ ನೀಡಿದ್ದಾರೆ. ಆದರೆ ಕಿರಣ್‌ ಬೇಡಿ ಆದೇಶಕ್ಕೆ ಸಿಎಂ ನಾರಾಯಣಸಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ಈ ಬಗ್ಗೆ ವಿವಾದ ಆಗುತ್ತಲೇ ಈ ಆದೇಶವನ್ನು ವಾಪಸ್ ಪಡೆಯಲಾಗಿದೆ.