ಉತ್ತರ ಕೊರಿಯಾದ ಸರ್ವಾಧಿಕಾರಿ ಅಧ್ಯಕ್ಷ ಕಿಮ್ ಜೊಂಗ್ ಉನ್ ತನ್ನ ಆಪ್ತ ವಲಯದ ಮತ್ತೊಬ್ಬ ಹಿರಿಯ ಸೇನಾಧಿಕಾರಿಯೊಬ್ಬರನ್ನು ಗಲ್ಲಿಗೇರಿಸಿದ್ದಾನೆ ಎನ್ನಲಾಗಿದೆ.

ಪ್ಯೊಂಗ್ಯಾಂಗ್ (ಡಿ.16): ಉತ್ತರ ಕೊರಿಯಾದ ಸರ್ವಾಧಿಕಾರಿ ಅಧ್ಯಕ್ಷ ಕಿಮ್ ಜೊಂಗ್ ಉನ್ ತನ್ನ ಆಪ್ತ ವಲಯದ ಮತ್ತೊಬ್ಬ ಹಿರಿಯ ಸೇನಾಧಿಕಾರಿಯೊಬ್ಬರನ್ನು ಗಲ್ಲಿಗೇರಿಸಿದ್ದಾನೆ ಎನ್ನಲಾಗಿದೆ. ಉತ್ತರ ಕೊರಿಯಾ ಸೇನೆಯಲ್ಲಿ ಪ್ರಭಾವಿ ಸೇನಾಧಿಕಾರಿ ಹ್ವಾಂಗ್ ಪ್ಯೊಂಗ್-ಸೊ ಕಳೆದ ಕೆಲ ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

ಹೀಗಾಗಿ ಅವರನ್ನು ಮರಣ ದಂಡನೆಗೆ ಗುರಿಪಡಿಸಿರಬಹುದು ಎಂಬ ಸಂದೇಹಗಳು ಹರಡಿವೆ. ಭ್ರಷ್ಟಾಚಾರ ಆರೋಪಕ್ಕೆ ತುತ್ತಾಗಿದ್ದ ಹ್ವಾಂಗ್ ಅ.13ರಿಂದ ನಾಪತ್ತೆಯಾಗಿದ್ದರು. ವಿಶೇಷವೆಂದರೆ ಇತ್ತೀಚೆಗಷ್ಟೇ ಕಿಮ್ ಜೊಂಗ್ ತನ್ನ ಅತ್ಯಾಪ್ತ ಸಿಬ್ಬಂದಿ ಜೊತೆ ಸೇರಿ ಉತ್ತರ ಕೊರಿಯನ್ನರ ಪಾಲಿಗೆ ಪವಿತ್ರ ಪರ್ವತ ಎನ್ನಿಸಿಕೊಂಡಿರುವ ಪೆಕ್ಟು ಏರಿದ್ದ.

ಕಾಪ್ಟರ್ ಮೂಲಕ ಜೊಂಗ್ ಅಲ್ಲಿಗೆ ಹತ್ತಿದ್ದು ಖಚಿತವಿದ್ದರೂ, ಅಲ್ಲಿನ ಮಾಧ್ಯಮಗಳು ಸ್ವತಃ ಕಿಮ್ ನಡೆದೇ ಪರ್ವತ ಏರಿದ್ದಾರೆ ಎಂದು ಸುದ್ದಿ ಮಾಡಿದ್ದವು. ಈ ಹಿಂದೆ 2013 ಮತ್ತು 2015ರಲ್ಲಿ ಒಬ್ಬೊಬ್ಬ ಹಿರಿಯ ಸೇನಾಧಿಕಾರಿಯನ್ನು ಹತ್ಯೆ ಮಾಡುವ ಮುನ್ನವೂಕಿಮ್ ಈ ಬೆಟ್ಟ ಹತ್ತಿಬಂದಿದ್ದ. ಹೀಗಾಗಿ ಇತ್ತೀಚೆಗೆ ಬೆಟ್ಟ ಹತ್ತಿದ್ದಕ್ಕೂ, ಹತ್ಯೆಯ ಉದ್ದೇಶವೇ ಕಾರಣ ಎಂದು ವಿಶ್ಲೇಷಿಸಲಾಗಿದೆ.