ಚೆನ್ನೈ(ಸೆ.6): ಪ್ರಿಯಕರನ ಜೊತೆ ಓಡಿ ಹೋಗಲು ತನ್ನಿಬ್ಬರು ಮಕ್ಕಳಿಗೆ ವಿಷ ಹಾಕಿ ಕೊಲೆ ಮಾಡಿದ್ದ ತಾಯಿ ಕೊನೆಗೂ ಸೆರೆ ಸಿಕ್ಕಿದ್ದಾಳೆ. ಇಲ್ಲಿನ ಅಭಿರಾಮಣಿ ಎಂಬ ವಿವಾಹಿತ ಮಹಿಳೆ ಬಿರಿಯಾನಿ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಸುಂದರಂ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಆತನೊಂದಿಗೆ ಓಡಿ ಹೋಗುವ ಮುನ್ನ ತನ್ನಿಬ್ಬರು ಮಕ್ಕಳಿಗೆ ವಿಷ ಉಣಿಸಿ ಪರಾರಿಯಾಗಿದ್ದಳು.

ತಿರುವನಂತಪುರಂ ಗೆ ಹೋಗಲು ರೆಯಾಗಿದ್ದ ಬಿರಿಯಾನಿ ಲವರ್ಸ್:

ಸದ್ಯ ಅಭಿರಾಮಣಿ ಮತ್ತು ಆಕೆಯ ಪ್ರಿಯಕರ ಸುಂದರಂನನ್ನು ನಾಗರಕೋಯಿಲ್ ನಲ್ಲಿ ಬಂಧಿಸಿರುವ ಪೊಲೀಸರು, ವಿಚಾರಣೆಗಾಗಿ ಇಬ್ಬರನ್ನೂ ಚೆನ್ನೈಗೆ ಕರೆತಂದಿದ್ದಾರೆ. ಆರೋಪಿಗಳು ನಾಗರಕೋಯಿಲ್ ನಿಂದ ತಿರುವನಂತಪುರಂ ಗೆ ಹೊರಡಲು ಸಜ್ಜಾಗಿದ್ದರು ಎನ್ನಲಾಗಿದೆ. ಆರೋಪಿಗಳ ಜಾಡು ಹಿಡಿದು ಬೆನ್ನಟ್ಟಿದ್ದ ಪೊಲೀಸರು, ಇಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ವಿಚಾರಣೆ ವೇಳೆ ಹಲವು ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿರುವ ಆರೋಪಿಗಳು, ಹೊಸ ಜೀವನ ಆರಂಭಿಸಲು ಅಭಿರಾಮಣಿಯ ಪತಿ ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡುವ ಯೋಜನೆ ರೂಪಿಸಿದ್ದಾಗಿ ತಿಳಿಸಿದ್ದಾರೆ. ಆದರೆ ಅಭಿರಾಮಣಿ ಪತಿ ವಿಜಯ್ ಕುಮಾರ್ ಅಂದು ಬ್ಯಾಂಕ್‌ನಿಂದ ತಡವಾಗಿ ಬಂದ ಕಾರಣ, ಇಬ್ಬರು ಮಕ್ಕಳನ್ನು ಕೊಂದು ಅಭಿರಾಮಣಿ ಮತ್ತು ಸುಂದರಂ ಪರಾರಿಯಾಗಿದ್ದರು.

ಮಕ್ಕಳ ಮೇಲೆ ಇದೆಂತಾ ಕ್ರೌರ್ಯ?:

ಇದೇ ವೇಳೆ ಅಭಿರಾಮಣಿ ಕುರಿತು ಮತ್ತಷ್ಗಟು ಆಘಾತಕಾರಿ ಮಾಹಿತಿಗಳು ಬಹಿರಂಗವಾಗಿದ್ದು, ಪ್ರಿಯಕರ ಸುಂದರಂ ಜೊತೆ ವಿಡಿಯೋ ಕಾಲ್ ಮಾಡುವ ವೇಳೆ ಮಕ್ಕಳು ಗಲಾಟೆ ಮಾಡಿದರೆ ಅವರನ್ನು ಅಭಿರಾಮಣಿ ಮನಬಂದಂತೆ ಥಳಿಸುತ್ತಿದ್ದಳು ಎನ್ನಲಾಗಿದೆ. ಈ ಕುರಿತು ನೆರೆಹೊರೆಯವರು ಹಿಂದೊಮ್ಮೆ ಅಭಿರಾಮಣಿ ವಿರುದ್ಧ ಪೊಲೀಸರಿಗೆ ದೂರು ಕೂಡ ನೀಡಿದ್ದರು ಎಂಬುದು ಮೂಲಗಳಿಂದ ತಿಳಿದು ಬಂದಿದೆ.

ಎಲ್ಲಾ ಯಡವಟ್ಟಿಗೆ ಮ್ಯೂಸಿಕ್ ಆ್ಯಪ್‌ ಕಾರಣ:

ಅಮೆರಿಕ ಮೂಲದ musical.ly app ಎಂಬ ಮ್ಯೂಸಿಕ್ ಆ್ಯಪ್‌ ಮೂಲಕ ಅಭಿರಾಮಣಿ ಮತ್ತು ಸುಂದರಂ ಪರಸ್ಪರ ಪರಿಚಯವಾಗಿದ್ದು, ಸುಂದರಂ ಬಣ್ಣ ಬಣ್ಣದ ಮಾತುಗಳಿಗೆ ಮರುಳಾಗಿ ನಾನು ನನ್ನ ಜೀವನವನ್ನು ಹಾಳು ಮಾಡಿಕೊಂಡಿದ್ದಾಗಿ ಅಭಿರಾಮಣಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಗಿ ತಿಳಿದು ಬಂದಿದೆ. ಈ  ಆ್ಯಪ್‌ ಮೂಲಕ ಇಬ್ಬರೂ ಲೈವ್ ಚಾಟ್ ಮಾಡುತ್ತಿದ್ದು, ತನ್ನ ಪ್ರಿಯಕರನಿಗಾಗಿ ಅಭಿರಾಮಣಿ ಹಾಡು ಹಾಡುತ್ತಿದ್ದಳು. ಅಲ್ಲದೇ ಸುಂದರಂ ಕೂಡ ಪ್ರೀತಿ ಮತ್ತು ರೋಮ್ಯಾಂಟಿಕ್ ಗೀತೆಗಳನ್ನು ಅಭಿರಾಮಣಿಗಾಗಿ ಹಾಡುತ್ತಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ಅಲ್ಲದೇ ಈ ಎಲ್ಲಾ ವಿಡಿಯೋ ಚಾಟ್‌ಗಳು ಪೊಲೀಸರಿಗೆ ಲಭ್ಯವಾಗಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತಿ ವಿಜಯ್ ಕುಮಾರ್‌ಗೆ ಸಾಂತ್ವನ ಹೇಳಿದ ತಲೈವಾ:

ಈ ನಡುವೆ ಮಕ್ಕಳನ್ನು ಕಳೆದುಕೊಂಡಿರುವ ಅಭಿರಾಮಣಿ ಪತಿ ವಿಜಯ್ ಕುಮಾರ್ ಅವರನ್ನು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.

ಬಿರಿಯಾನಿ ಲವರ್‌ಗಾಗಿ ಮಕ್ಕಳಿಗೆ ವಿಷ ಹಾಕಿದ ತಾಯಿ!