ಭದ್ರತಾ ಸಿಬ್ಬಂದಿ ಬೇಡ; ಕಾಶ್ಮೀರ ಕೊಳ್ಳೆ ಹೊಡೆದ ಅಧಿಕಾರಿಗಳು, ರಾಜಕೀಯ ನಾಯಕರ ಕೊಲ್ಲಿ!| ಉಗ್ರರಿಗೆ ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ವಿನಂತಿ!
ಶ್ರೀನಗರ[ಜು.22]: ‘ಭದ್ರತಾ ಸಿಬ್ಬಂದಿಗಳ ಮೇಲೆ ದಾಳಿ ನಡೆಸುವ ಬದಲಾಗಿ ಭ್ರಷ್ಟಾಚಾರದ ಮೂಲಕ ರಾಜ್ಯದ ಸಂಪತ್ತು ಕೊಳ್ಳೆ ಹೊಡೆದ ರಾಜಕೀಯ ಮುಖಂಡರು ಮತ್ತು ಅಧಿಕಾರಿಗಳನ್ನು ಗುಂಡಿಟ್ಟು ಕೊಲ್ಲಿ’ ಎಂದು ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಉಗ್ರರಿಗೆ ಸಲಹೆ ನೀಡಿದ್ದಾರೆ.
ಕಾರ್ಗಿಲ್‌ನಲ್ಲಿ ಭಾನುವಾರ ಸ್ಥಳೀಯರನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲ ಮಲಿಕ್ ಅವರು, ‘ಕೈಯಲ್ಲಿ ಬಂದೂಕು ಹಿಡಿದಿರುವ ಸ್ಥಳೀಯ ಯುವಕರು, ತಮ್ಮವರನ್ನೇ ಕೊಲುತ್ತಿದ್ದಾರೆ. ಅವರ ಗುಂಡಿಗೆ ಪೊಲೀಸ್ ಅಧಿಕಾರಿಗಳು, ಭದ್ರತಾ ಸಿಬ್ಬಂದಿಗಳು ಬಲಿಯಾಗುತ್ತಿದ್ದಾರೆ. ನೀವು ಅವರನ್ನೆಲ್ಲಾ ಏಕೆ ಹತ್ಯೆ ಮಾಡುತ್ತಿದ್ದೀರಿ? ನಿಮಗೆ ಕೊಲ್ಲುವ ಉದ್ದೇಶವಿದ್ದರೆ, ಶ್ರೀಮಂತ ಕಾಶ್ಮೀರವನ್ನು ಲೂಟಿ ಹೊಡೆದವರನ್ನು ಕೊಲ್ಲಿ. ನೀವು ಅವರಲ್ಲಿ ಯಾರಾನ್ನಾದರೂ ಕೊಂದಿದ್ದೀರಾ? ಎಂದು ಪ್ರಶ್ನಿಸಿದರು.
ಇದೇ ವೇಳೆ ಯಾವುದೇ ಸಮಸ್ಯೆಗೆ ಬಂದೂಕು ಉತ್ತರವಾಗದು. ಶ್ರೀಲಂಕಾದಲ್ಲಿ ಎಲ್‌ಟಿಟಿಇ ಎಂಬ ಸಂಘಟನೆ ಇತ್ತು, ಅದಕ್ಕೆ ಸಾಕಷ್ಟುಬೆಂಬಲವೂ ಇತ್ತು. ಒಂದು ದಿನ ಆ ಸಂಘಟನೆಯ ಕಥೆಯೂ ಮುಗಿದುಹೋಯ್ತು ಎಂದು ಉದಾಹರಣೆ ನೀಡಿದರು.
ಗವರ್ನರ್ ಹೇಳಿಕೆಗೆ ಓಮರ್ ಅಬ್ದುಲ್ಲಾ ಗರಂ
ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿಕೆ ಬೆನ್ನಲ್ಲೇ ಟ್ವೀಟ್ ಮಾಡಿರುವ ಮಾಜಿ ಸಿಎಂ ಓಮರ್ ಅಬ್ದುಲ್ಲಾ 'ಈ ಟ್ವೀಟ್ ಸೇವ್ ಮಾಡಿಕೊಳ್ಳಿ. ಇನ್ಮುಂದೆ ರಾಜಕಾರಣಿಗಳು, ಅಧಿಕಾರಿಗಳು ಹತ್ಯೆಯಾದರೆ ಅದು ಗವರ್ನರ್ ಸತ್ಯಪಾಲ್ ಮಲಿಕ್ ಆದೇಶದಂತೆ ಮಾಡಲಾಗಿದೆ ಎಂದು ತಿಳಿಯಬೇಕು' ಎಂದಿದ್ದಾರೆ.
ಅಲ್ಲದೇ ಈ ಕುರಿತಾಗಿ ಮತ್ತೊಂದು ಟ್ವೀಟ್ ಮಾಡಿರುವ ಓಮರ್ ಅಬ್ದುಲ್ಲಾ 'ಈ ವ್ಯಕ್ತಿ ಸಾಂವಿಧಾನಿಕ ಹುದ್ದೆ ಹೊಂದಿದ್ದಾರೆ. ಇಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ಇವರು ಭ್ರಷ್ಟರೆನ್ನುವ ರಾಜಕಾರಣಿಗಳನ್ನು ಕೊಲ್ಲುವಂತೆ ಉಗ್ರರಿಗೆ ಕರೆ ನೀಡಿದ್ದಾರೆ. ಈ ಮಾತುಗಳನ್ನಾಡುವ ಮೊದಲು ದೆಹಲಿಯಲ್ಲಿ ಅವರು ತಮ್ಮ ಹಿನ್ನೆಲೆಯನ್ನು ಅರಿಯಬೇಕು' ಎಂದಿದ್ದಾರೆ.
ಯಾರು ಭ್ರಷ್ಟರೆಂದು ತೋರಿಸುತ್ತೇನೆ
ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮಲಿಕ್ 'ಎಲ್ಲದರ ಕುರಿತಂತೆಯೂ ಟ್ವೀಟ್ ಮಾಡುವ ಬಾಲಿಶ ರಾಜಕಾರಣಿ' ಎಂದು ಓಮರ್ ಅಬ್ದುಲ್ಲಾರನ್ನು ಕಿಚಾಯಿಸಿದ್ದಾರೆ. ಅಲ್ಲದೇ 'ನಾನು ಹುದ್ದೆ ತ್ಯಜಿಸುವ ಮುನ್ನ ಯಾರು ಭ್ರಷ್ಟರೆಂದು ಎಲ್ಲರಿಗೂ ತೋರಿಸುತ್ತೇನೆ' ಎಂದು ಗುಡುಗಿದ್ದಾರೆ.
ಹೀಗಿದ್ದರೂ ತಮ್ಮ ಮಾತುಗಳಿಗೆ ಪಶ್ಚಾತಾಪ ವ್ಯಕ್ತಪಡಿಸಿರುವ ರಾಜ್ಯಪಾಲ ಮಲಿಕ್ 'ಗವರ್ನರ್ ಆಗಿ ಇಂತಹ ಹೇಳಿಕೆ ನೀಡಬಾರದಿತ್ತು. ಆದರೆ ನನ್ನ ವೈಯುಕ್ತಿಕ ಭಿಪ್ರಾಯ ಇದೇ ಆಗಿದೆ. ದೊಡ್ಡ ದೊಡ್ಡ ರಾಜಕಾರಣಿ ಹಾಗೂ ಉದ್ಯಮಿಗಳು ಇಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ ಎಂಬುವುದು ಸತ್ಯ' ಎಂದಿದ್ದಾರೆ.
