ಕೇರಳ ದೇವತೆಗಳ ನಾಡು. ಅಂತಹ ನಾಡಿನಲ್ಲಿ ಸಂತರು ನಡೆದಾಡಿದ್ದಾರೆ, ದೇವತೆಗಳ ಅವಾಸಸ್ಥಾನ. ಹೀಗಿರುವಲ್ಲಿ ರಾಕ್ಷಸರ(ಕಮ್ಯೂನಿಸ್ಟರ) ಆಳ್ವಿಕೆ ಇದೆ. ಆದ್ದರಿಂದ ಬಿಜೆಪಿಯು ವಾಮನಾವತಾರ ತಾಳಿ ರಾಕ್ಷಸರನ್ನು ಪಾತಾಳಕ್ಕೆ ತುಳಿಯಬೇಕು. ಆ ಮೂಲಕ ಕೇರಳ ರಾಜಕೀಯದಲ್ಲಿ ಪರಿವರ್ತನೆಯನ್ನು ತರಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಮಂಗಳೂರು: ಕೇರಳ ದೇವತೆಗಳ ನಾಡು. ಅಂತಹ ನಾಡಿನಲ್ಲಿ ಸಂತರು ನಡೆದಾಡಿದ್ದಾರೆ, ದೇವತೆಗಳ ಅವಾಸಸ್ಥಾನ. ಹೀಗಿರುವಲ್ಲಿ ರಾಕ್ಷಸರ(ಕಮ್ಯೂನಿಸ್ಟರ) ಆಳ್ವಿಕೆ ಇದೆ. ಆದ್ದರಿಂದ ಬಿಜೆಪಿಯು ವಾಮನಾವತಾರ ತಾಳಿ ರಾಕ್ಷಸರನ್ನು ಪಾತಾಳಕ್ಕೆ ತುಳಿಯಬೇಕು. ಆ ಮೂಲಕ ಕೇರಳ ರಾಜಕೀಯದಲ್ಲಿ ಪರಿವರ್ತನೆಯನ್ನು ತರಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಬಿಜೆಪಿ ಮಲಯಾಳಿ ಸೆಲ್ ಕರ್ನಾಟಕ ಮಂಗಳೂರಿನಲ್ಲಿ ಭಾನುವಾರ ಆಯೋಜಿಸಿದ ಮಲಯಾಳಿ ಸಮಾವೇಶ ಮತ್ತು ಓಣಂ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾಷೆ ಹಾಗೂ ನೀರಿನ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳ್ನಾಡು ಮಧ್ಯೆ ಆಗಾಗ ತಗಾದೆಗಳು, ವಿವಾದಗಳು ನಡೆಯುತ್ತಿರುತ್ತವೆ. ಆದರೆ ಕೇರಳಿಗರ ಜೊತೆಗೆ ಅಂತಹ ಸಂಘರ್ಷ ನಡೆದಿಲ್ಲ. ಇದು ಭಾಷಾ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡಿರುವ ಬಿಜೆಪಿಗೆ ಎಲ್ಲ ಭಾಷಿಗರು ಒಂದೇ. ಅದಕ್ಕಾಗಿ ಕರಾವಳಿಯಲ್ಲಿ ಮಲೆಯಾಳಿ ಭಾಷಿಗ ಕೇರಳಿಗರು ಓಣಂನ್ನು ಆಚರಿಸುತ್ತಿದ್ದಾರೆ. ಇದು ಧಾರ್ಮಿಕ ಹಾಗೂ ಸಾಂಸ್ಕೃತಿಕ ಭಾವೈಕ್ಯತೆಯ ದ್ಯೋತಕ ಎಂದು ಅವರು ಹೇಳಿದರು.

ಬಿಜೆಪಿ ಮಲಯಾಳಿ ಸೆಲ್ ಕರ್ನಾಟಕ ಇದರ ಅಧ್ಯಕ್ಷ ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು. ಕೇರಳ ರಾಜ್ಯಸಭಾ ಸದಸ್ಯ ರಿಚರ್ಡ್, ಮಾಜಿ ಸಚಿವ ಕೃಷ್ಣ ಪಾಲೇಮಾರ್, ಆರ್‌ಎಸ್‌ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಕೇರಳ ಬಿಜೆಪಿ ಮುಖಂಡ ಸಿ.ಕೆ.ಪದ್ಮನಾಭನ್, ಮಹಾನಗರ ಪಾಲಿಕೆ ವಿಪಕ್ಷ ನಾಯಕಿ ರೂಪಾ ಬಂಗೇರ, ಜಿಲ್ಲಾ ಬಿಜೆಪಿ ಪ್ರಕೋಷ್ಠದ ಸಂಜಯ ಪ್ರಭು, ಮಲಯಾಳಿ ಸೆಲ್ ಮುಖಂಡರಾದ ರವೀಂದ್ರನ್, ಪ್ರದೀಪ್, ಕೃಷ್ಣರಾಜ್ ಇದ್ದರು. ಓಣಂ ಸಲುವಾಗಿ ಪೂಕಳಂ ತಿರುವಾದಿರ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು