ಬನ್ಸಲ್ ಅವಧಿ ಮೊಟಕುಗೊಳಿಸಿ ದಿಢೀರ್ ನೇಮಕ ಬೆಂಗಳೂರು ಮೆಟ್ರೋ ಎಂಡಿ ಆಗಿರುವ ಖರೋಲಾ
ನವದೆಹಲಿ: ಕರ್ನಾಟಕ ಕೇಡರ್ ಹಿರಿಯ ಅಧಿಕಾರಿ, ಬೆಂಗಳೂರು ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಅವರು ಸರ್ಕಾರಿ ಸ್ವಾಮ್ಯದ ‘ಏರ್ ಇಂಡಿಯಾ’ದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಮಂಗಳವಾರ ನೇಮಕವಾಗಿದ್ದಾರೆ.
ಖರೋಲಾ ಅವರು ಈವರೆಗೆ ಏರ್ ಇಂಡಿಯಾ ಸಿಎಂಡಿ ಆಗಿದ್ದ ರಾಜೀವ್ ಬನ್ಸಲ್ ಅವರ ಸ್ಥಾನವನ್ನು ತುಂಬಲಿದ್ದಾರೆ. ನಿವೃತ್ತರಾಗಿದ್ದ ಬನ್ಸಲ್ ಅವರಿಗೆ 2 ದಿನದ ಹಿಂದಷ್ಟೇ ಕೇಂದ್ರ ಸರ್ಕಾರ 3 ತಿಂಗಳ ಸೇವಾವಧಿ ವಿಸ್ತರಣೆ ಕೊಟ್ಟಿತ್ತು. ಆದರೆ ಎರಡೇ ದಿನದಲ್ಲಿ ಸರ್ಕಾರ ನಿಲುವು ಬದಲಿಸಿ ಖರೋಲಾ ಅವರನ್ನು ನೇಮಿಸಿರುವುದು ಅಚ್ಚರಿ ಮೂಡಿಸಿದೆ. ಅವರಿಗೆ ಕೇಂದ್ರ ಸರ್ಕಾರದ ಕಾರ್ಯದರ್ಶಿ ಹುದ್ದೆಯ ಸ್ಥಾನಮಾನ ದಯಪಾಲಿಸಲಾಗಿದೆ.
ಏರ್ ಇಂಡಿಯಾದಲ್ಲಿನ ಬಂಡವಾಳ ಹಿಂಪಡೆದು ಖಾಸಗೀಕರಣಗೊಳಿಸುವತ್ತ ಸರ್ಕಾರ ಹೆಜ್ಜೆ ಇರಿಸಿದಾಗಲೇ ಖರೋಲಾ ಅವರ ನೇಮಕಾತಿ ನಡೆದಿದೆ. ಏರ್ ಇಂಡಿಯಾ 50 ಸಾವಿರ ಕೋಟಿ ರು. ಸಾಲವನ್ನೂ ಹೊತ್ತಿದೆ. ಏರ್ ಇಂಡಿಯಾ ಸಿಎಂಡಿ ಆದ 2ನೇ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಖರೋಲಾ ಆಗಿದ್ದಾರೆ. ಈ ಮುನ್ನ ಅರವಿಂದ ಜಾಧವ ಅವರು ಏರ್ ಇಂಡಿಯಾ ಸಿಎಂಡಿ ಆಗಿದ್ದರು.
ಮೆಟ್ರೋ ಖ್ಯಾತಿಯ ಖರೋಲಾ: ಈಗ ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿರುವ ಖರೋಲಾ ಅವರು ಬೆಂಗಳೂರು ಮೆಟ್ರೋದ ಮೊದಲ ಹಂತವನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದ ಖ್ಯಾತಿ ಹೊಂದಿದ್ದಾರೆ. ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಹಾಗೂ ಔದ್ಯಮಿಕ ಎಂಜಿನಿಯರಿಂಗ್‌ನಲ್ಲಿ ಎಂಟೆಕ್ ಸ್ನಾತಕೋತ್ತರ ಪದವಿ ಪಡೆದಿರುವ ಖರೋಲಾ, ಸಾರ್ವಜನಿಕ ಸಾರಿಗೆ ವಿಷಯದಲ್ಲಿ ಪಿಎಚ್‌ಡಿ ಪದವೀಧರರೂ ಹೌದು. ಇವರು 1985ರ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿಯಾಗಿದ್ದಾರೆ.
1987ರಲ್ಲಿ ಹಾವೇರಿ ಉಪವಿಭಾಗಾಧಿಕಾರಿಯಾಗಿ ವೃತ್ತಿಜೀವನ ಆರಂಭಿಸಿದ ಖರೋಲಾ, ಇದೇ ವೇಳೆ ರಾಣೆಬೆನ್ನೂರು ನಗರಸಭೆಯ ಹೆಚ್ಚುವರಿ ಆಯುಕ್ತರೂ ಆಗಿದ್ದರು. 1987ರಲ್ಲಿ ಮೈಸೂರು ಮಹಾನಗರಪಾಲಿಕೆ ಆಯುಕ್ತರಾದ ಅವರು ನಂತರದ ದಿನಗಳಲ್ಲಿ ಹಲವು ಇಲಾಖೆಗಳ ಕಾರ್ಯಭಾರ ವಹಿಸಿಕೊಂಡರು. ದಕ್ಷಿಣ ಕನ್ನಡ, ಬೆಳಗಾವಿಯ ಜಿಲ್ಲಾಧಿಕಾರಿಯಾಗಿದ್ದರು. ಬಿಎಂಟಿಸಿ ಎಂಡಿಯಾಗಿಯೂ ಕೆಲಸ ಮಾಡಿದ್ದರು. ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿದ್ದ ಅವರು, 2013ರಿಂದ ಬೆಂಗಳೂರು ಮೆಟ್ರೋ ಎಂಡಿಯಾಗಿದ್ದರು.
