ನವದೆಹಲಿ: ಭಾರತ ಪ್ರವಾಸಕ್ಕೆ ಬಂದಾಗಿನಿಂದಲೂ ಸಲ್ಲದ ಕಾರಣಕ್ಕೇ ಸುದ್ದಿಯಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೇವ್‌ ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಭಾರತದಲ್ಲಿನ ಕೆನಡಾ ರಾಯಭಾರಿ ಕಚೇರಿ ಆಯೋಜಿಸಿದ್ದ ಔತಣಕೂಟಕ್ಕೆ ಮಾಜಿ ಖಲಿಸ್ತಾನ ಉಗ್ರ ಜಸ್ಪಾಲ್‌ ಅತ್ವಾಲ್‌ಗೆ ಆಹ್ವಾನ ನೀಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಅತ್ವಾಲ್‌ಗೆ ಆಹ್ವಾನ ಕೊಟ್ಟವಿಷಯ ವಿವಾದಕ್ಕೆ ಕಾರಣವಾಗುತ್ತಲೇ, ಎಚ್ಚೆತ್ತುಕೊಂಡಿರುವ ಭಾರತದಲ್ಲಿನ ಕೆನಡಾ ರಾಯಭಾರಿ ನಾದಿರ್‌ ಪಟೇಲ್‌, ಮಾಜಿ ಉಗ್ರನಿಗೆ ನೀಡಿದ್ದ ಆಹ್ವಾನ ರದ್ದುಪಡಿಸಿದ್ದಾರೆ. ಇದೇ ವೇಳೆ ಮಾಜಿ ಉಗ್ರನಿಗೆ ಭಾರತೀಯ ವೀಸಾ ಸಿಕ್ಕಿದ್ದಾದರೂ ಹೇಗೆ ಎಂಬುದರ ಬಗ್ಗೆ ತನಿಖೆ ನಡೆಸುವುದಾಗಿ ಭಾರತದ ವಿದೇಶಾಂಗ ಇಲಾಖೆ ಹೇಳಿದೆ. ಇದರೊಂದಿಗೆ ಕೆನಡಾ ಪ್ರಧಾನಿಯ ಭಾರತ ಭೇಟಿಗೆ ಮತ್ತೊಂದು ಕಳಂಕ ಅಂಟಿಕೊಂಡಿದೆ.

ಕೆನಡಾ ದೇಶವು, ಖಲಿಸ್ತಾನ ಉಗ್ರರಿಗೆ ಆಶ್ರಯ ನೀಡಿರುವ ವಿಷಯ, ಹಿಂದಿನಿಂದಲೂ ಭಾರತದ ಆಕ್ಷೇಪಕ್ಕೆ ಕಾರಣವಾಗಿದೆ. ಇದು ಸಾಲದೆಂಬಂತೆ ಭಾರತ ಭೇಟಿ ವೇಳೆ ಜಸ್ಪಾಲ್‌ ಜೊತೆ ಕೆನಡಾ ಪ್ರಧಾನಿ ಪತ್ನಿ ಫೋಟೋ ತೆಗೆಸಿಕೊಂಡಿದ್ದಾರೆ. ಹೀಗಾಗಿ ಕೆನಡಾ ದೇಶದ ಪ್ರಧಾನಿ ಭಾರತಕ್ಕೆ ಮೂರು ದಿನ ಕಳೆದರೂ, ಅವರ ಬಗ್ಗೆ ಪ್ರಧಾನಿ ಮೋದಿ ಒಂದೇ ಒಂದು ಮಾತೂ ಆಡಿಲ್ಲ. ಇದೆಲ್ಲದರ ನಡುವೆಯೂ ಅದೇ ಖಲಿಸ್ತಾನ್‌ ಸಂಘಟನೆಗೆ ಸೇರಿದ ಮಾಜಿ ಉಗ್ರನಿಗೆ ಕೆನಡಾ ಪ್ರಧಾನಿ ಭಾಗವಹಿಸುವ ಔತಣ ಕೂಟಕ್ಕೆ ಆಹ್ವಾನ ನೀಡಿದ್ದು, ವಿವಾದವನ್ನು ಮತ್ತಷ್ಟುಕೆದಕಿದಂತೆ ಮಾಡಿದೆ.

1986ರಲ್ಲಿ ಆಗಿನ ಪಂಜಾಬ್‌ ಸಚಿವ ಮಲ್ಕೇತ್‌ ಸಿಂಗ್‌ ಸಿಧು ಹತ್ಯೆಗೆ ಯತ್ನಿಸಿದ್ದ ಜಸ್ಪಾಲ್‌ ಶಿಕ್ಷೆಗೆ ಗುರಿಯಾಗಿದ್ದರು. 2006ರಲ್ಲಿ ಶಿಕ್ಷೆ ಪೂರ್ಣಗೊಳಿಸಿ ಬಿಡುಗಡೆಯಾಗಿದ್ದರು. ಪ್ರಸ್ತುತ ಜಸ್ಪಾಲ್‌ ಸಿಖ್‌ ಉಗ್ರರ ಪಟ್ಟಿಯಲ್ಲಿ ಇಲ್ಲ.