[ವೈರಲ್ ಚೆಕ್] ಅಕ್ಕಿ ಕದ್ದ ಎಂದು ಆದಿವಾಸಿಯನ್ನು ಹತ್ಯೆ ಮಾಡಿದ್ದು ಮುಸ್ಲಿಮರೇ..?

First Published 26, Feb 2018, 1:47 PM IST
Kerala Tribal man Beaten to Death after being Accused of Theft News
Highlights

ಅಕ್ಕಿ ಕದ್ದ ಎಂದು ಆರೋಪಿಸಿ ಕೇರಳದ ಆದಿವಾಸಿ ಯುವಕ ಮಧು ಎಂಬಾತನನ್ನು ಅಮಾನವೀಯವಾಗಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಕೋಮು ಬಣ್ಣ ಮೆತ್ತುವ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ತಿರುವನಂತಪುರಂ: ಅಕ್ಕಿ ಕದ್ದ ಎಂದು ಆರೋಪಿಸಿ ಕೇರಳದ ಆದಿವಾಸಿ ಯುವಕ ಮಧು ಎಂಬಾತನನ್ನು ಅಮಾನವೀಯವಾಗಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಕೋಮು ಬಣ್ಣ ಮೆತ್ತುವ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

‘ಬಡ ಆದಿವಾಸಿಯನ್ನು ಹತ್ಯೆಗೈಯಲಾಗಿದೆ. ಆದರೆ ಯಾರೂ ಆ ಬಗ್ಗೆ ಮಾತನಾಡುತ್ತಿಲ್ಲ. ಏಕೆಂದರೆ ಆರೋಪಿಗಳು ಮುಸ್ಲಿಮರು, ಅಲ್ಲಿನ ರಾಜ್ಯ ಸರ್ಕಾರ ಕಮ್ಯುನಿಸ್ಟರದ್ದು’ ಎಂದು ಸಂದೇಶದಲ್ಲಿ ಸಾರಲಾಗುತ್ತಿದೆ.

ಈ ಕುರಿತ ಪೋಸ್ಟರ್ ಕೆಳಗೆ ‘ಹುಸ್ಸೇನ್ ಎಂಬುವರ ಅಂಗಡಿಯಿಂದ ಮಧು ಅಕ್ಕಿ ಕದ್ದಿದ್ದ. ಅದೇ ಕಾರಣಕ್ಕೆ ಮುಸ್ಲಿಂ ಸಮುದಾಯಕ್ಕೆ ಸೇರಿದ ಉಬೈದ್, ನಜೀಬ್, ಅಬ್ದುಲ್ ಕರೀಮ್ ಎಂಬುವವರ ಗುಂಪು ಹತ್ಯೆ ಮಾಡಿದೆ’ ಎಂದು ಒಕ್ಕಣೆಯನ್ನೂ ಬರೆಯಲಾಗಿದೆ.

ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡ ಈ ರೀತಿಯ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ. ಆದರೆ ನಿಜಕ್ಕೂ ಮಧುವನ್ನು ಹತ್ಯೆ ಮಾಡಿದ್ದು ಕೇವಲ ಮುಸ್ಲಿಮರೇ ಎಂದರೆ, ಅಲ್ಲ. ಇದುವರೆಗೆ ಪೊಲೀಸರು ಆರೋಪಿಗಳೆಂದು ಬಂಧಿಸಿರುವವರ ಪಟ್ಟಿಯಲ್ಲಿ ಹಿಂದು, ಮುಸ್ಲಿಂ ಎರಡೂ ಸಮುದಾಯಕ್ಕೆ ಸೇರಿದ ಜನರ ಹೆಸರುಗಳಿವೆ.

ಆ ಹೆಸರುಗಳು ಇಂತಿವೆ: ಅನೀಶ್, ಹುಸ್ಸೇನ್, ಶಂಶುದ್ದೀನ್, ರಾಧಾಕೃಷ್ಣ, ಅಬೂಬಕ್ಕರ್, ಜೈಜಿಮೋನ್, ಉಬೈದ್, ನಜೀಬ್, ಹರೀಶ್, ಬಿಜು, ಅಬ್ದುಲ್ ಕರೀಮ್, ಮುನೀರ್ ಮತ್ತು ಸತೀಶ್. ಆದರೆ ಕೆಲ ಕಿಡಿಗೇಡಿಗಳು ಈ ಪ್ರಕರಣಕ್ಕೆ ಕೋಮ ಬಣ್ಣ ನೀಡಲು ಕೇವಲ ಮುಸ್ಲಿಂ ಆರೋಪಿಗಳ ಹೆಸರನ್ನು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ. ಸತ್ಯ ತಿಳಿದ ನಂತರ ಸೆಹ್ವಾಗ್ ಕ್ಷಮೆ ಕೇಳಿ ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.

loader