ಅಲಪ್ಪುಜಾ : ಕೇರಳದಲ್ಲಿ ಐಎಎಸ್ ಅಧಿಕಾರಿಯೋರ್ವರು  ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ಕುಳಿತು ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ಈ ವಿಚಾರ ವೈರಲ್ ಆಗುತ್ತಿದ್ದಂತೆ ಎಲ್ಲರಿಂದ ಅಧಿಕಾರಿಗೆ ಭಾರೀ ಮೆಚ್ಚುಗೆ  ವ್ಯಕ್ತವಾಗಿದೆ.

ಅಲಪ್ಪುಜಾ ಜಿಲ್ಲಾಧಿಕಾರಿಯಾದ  ಎಸ್. ಸುಹಾಸ್ ಅವರು ಶಿಕ್ಷಣ ಇಲಾಖೆಯ ಮಾಜಿ ನಿರ್ದೇಶಕರಾದ ಲತಿಕಾ ಅವರೊಂದಿಗೆ  ಬುಧವಾರ ಇಲ್ಲಿನ ಶ್ರೀ ದೇವಿ ವಿಲಾಸಂ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದು, ಅಲ್ಲಿಯ ಆಹಾರದ ಗುಣಮಟ್ಟದ ಪರಿಶೀಲನೆ ನಡೆಸಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಕುಳಿತು ಮಧ್ಯಾಹ್ನದ ಬಿಸಿಯೂಟ ಸೇವಿಸಿದ್ದಾರೆ. ಬಳಿಕ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಅವರು ಈ ಫೊಟೊವನ್ನು ಶೇರ್ ಮಾಡಿದ್ದು ಸಾಕಷ್ಟು ಸಂಖ್ಯೆಯಲ್ಲಿ ಜಾಲತಾಣಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಈ ಶಾಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಉತ್ತಮ ಗುಣಮಟ್ಟದ ಆಹಾರವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದು ಈ ವೇಳೆ ಜಿಲ್ಲಾಧಿಕಾರಿ ಸುಹಾಸ್ ಹೇಳಿದ್ದಾರೆ.  ಬಳಿಕ ಶಾಲೆಯಲ್ಲಿ ಸ್ಥಳ ಕೊರತೆ ಬಗ್ಗೆ ಸಿಬ್ಬಂದಿ ಮಾಹಿತಿ ನೀಡಿದ್ದು, ಶಾಲೆಯ ವಿವಿಧ ಸ್ಥಳಗಳ ಬಗ್ಗೆಯೂ ಪರಿಶೀಲನೆ ನಡೆಸಿದರು.